Friday, November 22, 2024
Homeಇದೀಗ ಬಂದ ಸುದ್ದಿಬಸ್‍ನಲ್ಲಿ ಮೊಬೈಲ್ ಎಗರಿಸುತ್ತಿದ್ದ ಮಹಿಳಾ ಗ್ಯಾಂಗ್ ಬಂಧನ

ಬಸ್‍ನಲ್ಲಿ ಮೊಬೈಲ್ ಎಗರಿಸುತ್ತಿದ್ದ ಮಹಿಳಾ ಗ್ಯಾಂಗ್ ಬಂಧನ

ಬೆಂಗಳೂರು,ಫೆ.16-ಮಹಿಳಾ ಪ್ರಯಾಣಿಕರನ್ನೇ ಗುರಿಯಾಗಿಸಿಕೊಂಡು ಜನನಿಬಿಡ ಬಸ್ ನಿಲ್ದಾಣಗಳು ಹಾಗೂ ಜನಜಂಗುಳಿ ಇರುವ ದಿನಗಳಂದು ಬಿಎಂಟಿಸಿ ಬಸ್‍ಗಳಲ್ಲಿ ನೂಕು ನುಗ್ಗಲು ಉಂಟು ಮಾಡಿ ಪ್ರಯಾಣಿಕರ ಮೊಬೈಲ್‍ಗಳನ್ನು ಕಳ್ಳತನ ಮಾಡಿ ಮನೆಯಲ್ಲಿ ಶೇಖರಿಸಿಟ್ಟಿದ್ದ ಆಂಧ್ರಪ್ರದೇಶದ ಮೂವರು ಮಹಿಳೆಯರು ಸೇರಿದಂತೆ 5 ಮಂದಿ ಮಹಿಳೆಯರನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿ 30 ಲಕ್ಷ ಮೌಲ್ಯದ 120 ವಿವಿಧ ಕಂಪನಿಯ ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಫೆ.7 ರಂದು ಬಸ್‍ನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರ ಒಬ್ಬರ ಮೊಬೈಲ್ ಫೋನ್ ಕಳವು ಆಗಿರುವ ಬಗ್ಗೆ ಮಹದೇವಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆಂಧ್ರ ಪ್ರದೇಶ ಮೂಲದ ಮೂವರು ಮಹಿಳೆಯರು ಸೇರಿದಂತೆ ಐದು ಮಂದಿ ಮಹಿಳೆಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಐದು ಮಂದಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ಮೊಬೈಲ್ ಪೋನ್‍ಗಳನ್ನು ಬಸ್‍ಗಳಲ್ಲಿ ಕಳವು ಮಾಡಿರುವುದಾಗಿ ಮಾಹಿತಿ ಮೇರೆಗೆ 30 ಲಕ್ಷ ಮೌಲ್ಯದ 120 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ.ಯಾಗಿದ್ದಾರೆ.

ಒಲಂಪಿಕ್‍ನಲ್ಲಿ ಚಿನ್ನದ ಪದಕ ಗೆದ್ದವರಿಗೆ 6 ಕೋಟಿ

ಈ ಐವರು ಮಹಿಳೆಯರು ಮುಖ್ಯವಾಗಿ ನಗರದ ಜನನಿಬಿಡ ಬಸ್ ನಿಲ್ದಾಣಗಳು ಹಾಗೂ ಜನಜಂಗುಳಿ ಇರುವ ದಿನಗಳಂದು ಹೆಚ್ಚು ಪ್ರಯಾಣಿಕರು ಇರುವ ಬಸ್‍ಗಳನ್ನು ಹತ್ತಿಕೊಂಡು ಬಸ್‍ಗಳಲ್ಲಿ ನೂಕು ನುಗ್ಗಲು ಉಂಟು ಮಾಡಿ, ಸಾರ್ವಜನಿಕರ ಬ್ಯಾಗ್ ಮತ್ತು ಜೇಬಿನಲ್ಲಿರುವ ಮೊಬೈಲ್‍ಗಳನ್ನು ಕಳ್ಳತನ ಮಾಡಿಕೊಂಡು, ಕದ್ದ ಮೊಬೈಲ್‍ಗಳನ್ನು ತಮ್ಮ ವಾಸದ ಮನೆಯಲ್ಲಿ ಶೇಖರಿಸಿಟ್ಟಿದ್ದರು.

ನಂತರ ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬನಿಗೆ ಈ ಮೊಬೈಲ್‍ಗಳನ್ನು ಮಾರಾಟ ಮಾಡುತ್ತಿದ್ದರು ಎಂಬುವುದು ತನಿಖೆಯಿಂದ ತಿಳಿದು ಬಂದಿರುತ್ತದೆ. ಆಂದ್ರ ಪ್ರದೇಶದ ವ್ಯಕ್ತಿ ಆಗಾಗ್ಗೆ ಬೆಂಗಳೂರಿಗೆ ಬಂದು ಒಂದು ಮೊಬೈಲ್‍ಗೆ ಕೇವಲ 2ರಿಂದ 3 ಸಾವಿರ ಕೊಟ್ಟು ಮೊಬೈಲ್‍ಗಳನ್ನು ತೆಗೆದುಕೊಂಡು ಆಂಧ್ರಪ್ರದೇಶಕ್ಕೆ ಹೋಗಿ ಅಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದು ತನಿಖೆಯಿಂದ ಗೊತ್ತಾಗಿದೆ.

ಬಸ್‍ಗಳಲ್ಲಿ ಪ್ರಯಾಣಿಸುವಾಗ ಯಾರಾದರೂ ಮೊಬೈಲ್ ಕಳೆದುಕೊಂಡಿದ್ದರೆ ಹೆದರದೆ ಧೈರ್ಯವಾಗಿ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಮೊಬೈಲ್ ನಂಬರ್ 9480801084, ಎಸಿಪಿ ವೈಟ್ ಫೀಲ್ಡ್ ಉಪ ವಿಭಾಗ ಮೊ.ನಂ. 9480801607 ಅಥವಾ ಪೊಲೀಸ್ ಇನ್ಸ್‍ಪೆಕ್ಟರ್ ಮೊ. 9480801230ರವರನ್ನು ನೇರವಾಗಿ ನಿರ್ಭಿತಿಯಿಂದ ಸಂಪರ್ಕಿಸಿ ದೂರು ನೀಡಬಹುದಾಗಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.

ವಿದೇಶಿ ಡ್ರಗ್ ಪೆಡ್ಲರ್ ಬಂಧನ : 83 ಲಕ್ಷ ಮೌಲ್ಯದ ಗಾಂಜಾ ಜಪ್ತಿ
ಬೆಂಗಳೂರು,ಫೆ.16-ವಿದ್ಯಾರ್ಥಿ ವೀಸಾ ಪಡೆದು ಭಾರತಕ್ಕೆ ಬಂದು ನಂತರದ ದಿನಗಳಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವಿದೇಶಿ ಡ್ರಗ್ ಪೆಡ್ಲರ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿ 83.43 ಲಕ್ಷ ಮೌಲ್ಯದ ಮಾದಕ ವಸ್ತು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸಿಸಿಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ದೊರೆತ ಖಚಿತ ಮಾಹಿತಿಯ ಮೇರೆಗೆ ಫೆ.13ರಂದು ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಡ್ರಗ್ ಪೆಡ್ಲರ್‍ನನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.

ಬಂಧಿತನಿಂದ ಸುಮಾರು 83.43 ಲಕ್ಷ ಮೌಲ್ಯದ 589 ಗ್ರಾಂ ಎಂಡಿಎಂಎ ಕ್ರಿಸ್ಟಲ್, 6 ಕೆಜಿ 385 ಗ್ರಾಂ ತೂಕದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಲಾಗುತ್ತಿದ್ದ ಒಂದು ದ್ವಿಚಕ್ರ ವಾಹನ ಮತ್ತು ಮೊಬೈಲ್ ಫೋನನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ವ್ಯಕ್ತಿಯು 2018 ನೇ ಸಾಲಿನಲ್ಲಿ ಸ್ಪೂಡೆಂಟ್ ವೀಸಾ ಪಡೆದು ಭಾರತಕ್ಕೆ ಬಂದಿದ್ದು, ನಂತರದ ದಿನಗಳಲ್ಲಿ ಇತರೆ ಪೆಡ್ಲರ್‍ಗಳಿಂದ ಕಡಿಮೆ ಬೆಲೆಗೆ ನಿಷೇಧಿತ ಮಾದಕ ವಸ್ತುಗಳನ್ನು ಖರೀದಿಸಿ, ಅವುಗಳನ್ನು ಪರಿಚಯಸ್ಥ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದದ್ದು ವಿಚಾರಣೆಯಿಂದ ಗೊತ್ತಾಗಿದೆ.

ಈ ಆರೋಪಿಯು 2019ರಲ್ಲಿ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ವಿದೇಶಿ ಮಹಿಳೆ ಕೊಲೆ ಪ್ರಕರಣದ ಆರೋಪಿಯಾಗಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. ಈತನ ವಿರುದ್ಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಉಪ ಪೊಲೀಸ್ ಆಯುಕ್ತರು (ಅಪರಾಧ-2), ಶ್ರೀನಿವಾಸಗೌಡ ಮಾರ್ಗದರ್ಶನದಲ್ಲಿ ಸಿಸಿಬಿಯ ಮಾದಕವಸ್ತು ನಿಗ್ರಹ ದಳದ ಸಹಾಯಕ ಪೊಲೀಸ್ ಆಯುಕ್ತರವರ ನೇತೃತ್ವದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡವು ಈ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿರುತ್ತಾರೆ.

ಸರ್ಕಾರಿ ಶಾಲಾ-ಕಾಲೇಜುಗಳಿಗೆ ಉಚಿತ ವಿದ್ಯುತ್, ನಿರಂತರ ನೀರಿನ ಸೌಲಭ್ಯ

ಇರಾನಿ ಗ್ಯಾಂಗ್‍ನ ಮೂವರ ಬಂಧನ
ಬೆಂಗಳೂರು,ಫೆ.16- ದರೋಡೆ ಮತ್ತು ಮನೆ ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇರಾನಿ ಗ್ಯಾಂಗಿನ ಮೂವರು ಆರೋಪಿಗಳನ್ನು ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಮೂವರು ಆರೋಪಿಗಳು ಮನೆಗಳ್ಳತನ ಮತ್ತು ದರೋಡೆ ಮಾಡಿದ್ದ ಚಿನ್ನದ ಒಡವೆಗಳನ್ನು ಕುರುಬರಹಳ್ಳಿಯ ಜ್ಯುವೆಲ್ಲರಿ ಅಂಗಡಿಯೊಂದರ ಬಳಿ ಹೋಗಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಆಭರಣಗಳ ಬಗ್ಗೆ ವಿಚಾರಿಸಿದಾಗ ಸರಿಯಾದ ಮಾಹಿತಿ ನೀಡದ ಕಾರಣ ಮಾಲಿನ ಸಮೇತ ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
ಆರೋಪಿಗಳ ಬಂಧನದಿಂದ ಜಾಲಹಳ್ಳಿ ಹಾಗೂ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಕಳವು ಪ್ರಕರಣ ಹಾಗೂ ನಂದಿನಿ ಲೇಔಟ್ ಪೊಲೀಸ್ ಠಾಣೆಯ ಸರಗಳ್ಳತನ ಪ್ರಕರಣ ಸೇರಿ ಒಟ್ಟು 3 ಪ್ರಕರಣಗಳು ಪತ್ತೆಯಾಗಿವೆ. ಇನ್ಸ್‍ಪೆಕ್ಟರ್ ಮಂಜು ಅವರ ನೇತೃತ್ವದ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.

RELATED ARTICLES

Latest News