Homeರಾಜ್ಯನಾಳೆಯೇ ಸಂಪುಟ ವಿಸ್ತರಣೆ..? ಇಂದು ಹೊಸ ಸಚಿವರ ಪಟ್ಟಿ ಫೈನಲ್‌ ಸಾಧ್ಯತೆ

ನಾಳೆಯೇ ಸಂಪುಟ ವಿಸ್ತರಣೆ..? ಇಂದು ಹೊಸ ಸಚಿವರ ಪಟ್ಟಿ ಫೈನಲ್‌ ಸಾಧ್ಯತೆ

Cabinet expansion tomorrow..? New minister list likely to be finalized today

ನವದೆಹಲಿ, ಜು.21- ರಾಜ್ಯ ಸಂಪುಟದಲ್ಲಿ ಖಾಲಿ ಇರುವ 20 ಸ್ಥಾನಗಳಿಗೆ ಸಚಿವರನ್ನು ನೇಮಿಸುವ ಕುರಿತಂತೆ ದೆಹಲಿಯಲ್ಲಿಂದು ಹೈಕಮಾಂಡ್‌ ವರಿಷ್ಠರ ಜೊತೆಗೆ ರಾಜ್ಯ ನಾಯಕರು ಸರಣಿ ಸಭೆಗಳನ್ನು ನಡೆಸಿದ್ದು, ನಿರೀಕ್ಷೆಯಂತೆ ಎಲ್ಲವೂ ನಡೆದರೆ ನಾಳೆ ಮಧ್ಯಾಹ್ನವೇ ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ.

ಸಂಪುಟ ವಿಸ್ತರಣೆಯ ಕುರಿತು ಚರ್ಚೆ ನಡೆಸಲು ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದರು. ಪ್ರಯಾಣದ ನಡುವೆಯೇ ಮೂವರು ನಾಯಕರು ಸಂಭವನೀಯ ಸಚಿವರ ಪಟ್ಟಿಯ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಒಟ್ಟು 33 ಜನರ ಹೆಸರನ್ನು ಇಂದು ಹೈಕಮಾಂಡ್‌ ಮುಂದೆ ಮೂವರು ನಾಯಕರು ಇಟ್ಟಿದ್ದಾರೆ.

ಅದನ್ನು 20ಕ್ಕೆ ಇಳಿಸಲು ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರ ಮನೆಯಲ್ಲಿ ಸರಣಿ ಸಭೆಗಳನ್ನು ನಡೆಸಲಾಯಿತು. ಮೊದಲು ಸಿದ್ದರಾಮಯ್ಯ ಅವರೊಂದಿಗೆ ಕೆ.ಸಿ.ವೇಣುಗೋಪಾಲ್‌ ಮತ್ತು ರಣದೀಪ್‌ ಸಿಂಗ್‌ ಸುರ್ಜೇವಾಲ ಚರ್ಚೆ ನಡೆಸಿದ್ದಾರೆ. ನಂತರ ಮಧ್ಯಾಹ್ನ 1.30ಕ್ಕೆ ಬಿ.ಕೆ.ಹರಿಪ್ರಸಾದ್‌, 2.30ಕ್ಕೆ ಡಿ.ಕೆ.ಶಿವಕುಮಾರ್‌ ಅವರ ಜೊತೆ ಚರ್ಚೆ ನಡೆಸಿದ್ದಾರೆ. ಬಳಿಕ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್‌ ಒಟ್ಟಾಗಿ ಚರ್ಚೆ ನಡೆಸಲಿದ್ದಾರೆ.

ಹಿಂದೆ ಸಚಿವರಾಗಿದ್ದವರ ಪೈಕಿ 10 ಮಂದಿಯನ್ನು ಪರಿಗಣಿಸಬೇಕು ಎಂದು ರಾಜ್ಯ ನಾಯಕರು ಮನವಿ ಮಾಡಿದ್ದಾರೆ. ಹಳೆಯ ಐದು ಮಂದಿಗೆ ಮಾತ್ರ ಅವಕಾಶ ನೀಡಿ, ಹೊಸದಾಗಿ 15 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಕೆ.ಸಿ.ವೇಣುಗೋಪಾಲ್‌ ಸೂಚಿಸಿದ್ದಾರೆ ಎನ್ನಲಾಗಿದೆ. ಕೊನೆಗೆ ಹಳಬರು ಮತ್ತು ಹೊಸಬರನ್ನು ಸೇರಿ ತಲಾ 10 ರ ಅನುಪಾತದಲ್ಲಿ ಅವಕಾಶ ನೀಡುವ ಚರ್ಚೆಯಾಗಿದೆ.

ಈ ನಡುವೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬೆಂಗಳೂರಿನ ಲೋಕಭವನದಲ್ಲಿ ಸಿದ್ದತೆಗಳು ಆರಂಭವಾಗಿವೆ. ಶಿಷ್ಠಾಚಾರ ವಿಭಾಗದ ಅಧಿಕಾರಿಗಳು ಲೋಕಭವನಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ರಾಜ್ಯಪಾಲರ ಸಮಯ ಲಭ್ಯತೆ ಕುರಿತು ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.ದೆಹಲಿಯಲ್ಲಿನ ಸಭೆಯಲ್ಲಿ ನೂತನ ಸಚಿವರ ಪಟ್ಟಿ ಅಖೈರುಗೊಂಡರೆ ನಾಳೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಂಪುಟ ವಿಸ್ತರಣೆ ನಡೆಯಲಿದೆ. ಒಂದು ವೇಳೆ ಒಮತ ಮೂಡದೆ ಇದ್ದರೆ ಜುಲೈ 24ರಂದು ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗಿದೆ.

ಸಂಭವನೀಯರ ಲಾಬಿ:
ಸಂಭವನೀಯ ಸಚಿವರ ಪಟ್ಟಿಯಲ್ಲಿ ಹಲವರು ಭಾರೀ ಲಾಬಿ ನಡೆಸಿದ್ದಾರೆ. ಸುಮಾರು 35 ಶಾಸಕರು ದೆಹಲಿಯಲ್ಲೇ ಬೀಡು ಬಿಟ್ಟು ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ಒತ್ತಡ ಹೇರುತ್ತಿದ್ದಾರೆ.ಈ ಬಾರಿ ಮೂವರು ಮಹಿಳಾ ಸಚಿವರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಆರತಿ ಕೃಷ್ಣ, ಉಮಾಶ್ರೀ, ಲಕ್ಷ್ಮೀ ಹೆಬ್ಬಾಳ್ಕರ್‌, ನಯನಾ ಮೋಟಮ, ರೂಪಕಲಾ, ಖನೀಜ್‌ ಫಾತೀಮಾ ಹೆಸರುಗಳು ಕೇಳಿ ಬರುತ್ತಿವೆ.

ಲಿಂಗಾಯಿತ ಸಮುದಾಯದಿಂದ ಅಪ್ಪಾಜಿನಾಡಗೌಡ, ಬಸವರಾಜ ರಾಯರೆಡ್ಡಿ, ಲಕ್ಷ್ಮಣ್‌ ಸವದಿ, ವಿಜಯಾನಂದ ಕಾಶಪ್ಪನವರ್‌, ಅಶೋಕ್‌ ಪಟ್ಟಣ್‌, ಬಿ.ಕೆ.ಸಂಗಮೇಶ್ವರ್‌, ಡಿ.ಜಿ.ಶಾಂತನಗೌಡ, ಕೆ.ಷಡಾಕ್ಷರಿ ಅವರ ಹೆಸರುಗಳು ಮುಂಚೂಣಿಯಲ್ಲಿವೆ.

ಒಕ್ಕಲಿಗ ಕೋಟಾದಲ್ಲಿ ಚಲುವರಾಯಸ್ವಾಮಿ, ಕೆ.ಎಂ.ಶಿವಲಿಂಗೇಗೌಡ, ಡಾ.ಎಂ.ಸಿ.ಸುಧಾಕರ್‌, ಟಿ.ಡಿ.ರಾಜೇಗೌಡ, ಹೆಚ್‌.ಸಿ.ಬಾಲಕೃಷ್ಣ, ಟಿ.ಬಿ.ಜಯಚಂದ್ರ, ಕೆ.ವೈ.ನಂಜೇಗೌಡ, ಪ್ರಿಯಾಕೃಷ್ಣ, ರಮೇಶ್‌ ಬಂಡಿಸಿದ್ದೇಗೌಡ, ಶರತ್‌ ಬಚ್ಚೆಗೌಡ ಹೆಸರು ಕೇಳಿ ಬರುತ್ತಿದೆ.ಮುಸ್ಲಿಂ ಕೋಟಾದಲ್ಲಿ ಜಮೀರ್‌ ಅಹಮದ್‌ ಖಾನ್‌, ಎನ್‌.ಎ.ಹ್ಯಾರಿಸ್‌‍, ತನ್ವೀರ್‌ ಸೇಠ್‌, ರಿಜ್ವಾನ್‌ ಅರ್ಷದ್‌, ಸಲೀಂ ಅಹಮದ್‌, ಆಸೀಫ್‌ ಸೇಠ್‌ ಹೆಸರುಗಳಿವೆ.

ಪರಿಶಿಷ್ಟ ಪಂಗಡದ ಖೋಟಾದಲ್ಲಿ ಬಿ.ನಾಗೇಂದ್ರ ಮರಳಿ ಸಂಪುಟ ಸೇರಲು ಲಾಬಿ ನಡೆಸುತ್ತಿದ್ದಾರೆ. ಅನಿಲ್‌ ಕುಮಾರ್‌, ಜೆ.ಎನ್‌.ಗಣೇಶ್‌, ಟಿ.ರಘುಮೂರ್ತಿ, ಎನ್‌.ವೈ.ಗೋಪಾಲಕೃಷ್ಣ ಹೆಸರುಗಳು ಪರಿಶೀಲನೆಯಲ್ಲಿವೆ.ಪರಿಶಿಷ್ಟ ಜಾತಿಯ ಬೋವಿ ಸಮುದಾಯದಿಂದ ಶಿವರಾಜ್‌ ತಂಗಡಗಿ, ಹೆಚ್‌.ವಿ.ವೆಂಕಟೇಶ್‌ ಹೆಸರುಗಳಿದ್ದರೆ, ಬಲಗೈ ಸಮುದಾಯದಿಂದ ಬಿ.ಶಿವಣ್ಣ, ಎಸ್‌‍.ಎನ್‌.ನಾರಾಯಣಸ್ವಾಮಿ, ಪ್ರಸಾದ್‌ ಅಬ್ಬಯ್ಯ, ಪಿ.ಎಂ.ನರೇದ್ರ ಸ್ವಾಮಿ ಹೆಸರು ಚರ್ಚೆಯಲ್ಲಿವೆ.

ಎಡಗೈ ಸಮುದಾಯದಿಂದ ಕೆ.ಹೆಚ್‌.ಮುನಿಯಪ್ಪ ಅವರ ಬದಲಿಗೆ ರೂಪಾಕಲಾ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬ ಚರ್ಚೆ ಇದೆ. ಕೆ.ಹೆಚ್‌.ಮುನಿಯಪ್ಪ ತಾವು ಹಿರಿಯರಿದ್ದು ಆಹಾರ ಮತ್ತು ನಾಗರೀಕ ಖಾತೆ ಬದಲಿಗೆ ಸಮಾಜ ಕಲ್ಯಾಣ ಖಾತೆ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಆರ್‌.ಬಿ.ತಿಮಾಪುರ್‌ ಮತ್ತೆ ಸಂಪುಟ ಸೇರಲು ಒತ್ತಡ ಹಾಕುತ್ತಿದ್ದಾರೆ. ಜೊತೆ ವಿಧಾನ ಪರಿಷತ್‌ ಸದಸ್ಯರಾದ ಸುಧಾಮ್‌ ದಾಸ್‌‍, ವಸಂತಕುಮಾರ್‌ ಪ್ರಯತ್ನಿಸುತ್ತಿದ್ದಾರೆ.ಲಂಬಾಣಿ ಸಮುದಾಯದ ರುದ್ರಪ್ಪ ಲಮಾಣಿ ವಿಧಾನಸಭೆ ಉಪಾಧ್ಯಕ್ಷ ಸ್ಥಾನದ ಬದಲಿಗೆ ಸಚಿವರಾಗುವ ಸಾಧ್ಯತೆ ಇದೆ.

ಹಿಂದುಳಿದ ವರ್ಗದಲ್ಲಿ ಬೇಳೂರು ಗೋಪಾಲಕೃಷ್ಣ ಅಥವಾ ಮಧುಬಂಗಾರಪ್ಪ ನಡುವೆ ಪೈಪೋಟಿ ಇದೆ. ಎ.ಎಸ್‌‍.ಪೊನ್ನಣ್ಣ, ಉಮಾಶ್ರೀ, ಅಜಯ್‌ ಸಿಂಗ್‌, ಜಿ.ಹೆಚ್‌.ಶ್ರೀನಿವಾಸ್‌‍, ಪುಟ್ಟರಂಗ ಶೆಟ್ಟಿ, ರಾಘವೇಂದ್ರ ಹಿಟ್ನಾಳ್‌, ಮಂಕಾಳ ಸುಬ್ಬ ವೈದ್ಯ, ಶ್ರೀನಿವಾಸ್‌‍ ಹೆಸರುಗಳು ಪರಿಶೀಲನೆಯಲ್ಲಿವೆ.

ಬ್ರಾಹಣ ಸಮುದಾಯದಿಂದ ಆರ್‌.ವಿ.ದೇಶಪಾಂಡೆ, ದಿನೇಶ್‌ ಗುಂಡೂರಾವ್‌ ನಡುವೆ ಪೈಪೋಟಿ ಇದೆ. ಹೆಚ್‌.ಕೆ.ಪಾಟೀಲ್‌ ಹೆಸರನ್ನು ಪರಿಗಣಿಸಲು ಹೈಕಮಾಂಡ್‌ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ವಿಧಾನಸಭೆಯ ಅಧ್ಯಕ್ಷ ಸ್ಥಾನಕ್ಕೆ ಹಿರಿಯರಾದ ಬಿ.ಆರ್‌.ಪಾಟೀಲ್‌, ಹೆಚ್‌.ಕೆ.ಪಾಟೀಲ್‌, ಆರ್‌.ವಿ.ದೇಶಪಾಂಡೆ, ಟಿ.ಬಿ.ಜಯಚಂದ್ರ, ತನ್ವೀರ್‌ ಸೇಠ್‌ ಹೆಸರುಗಳು ಕೇಳಿ ಬರುತ್ತಿವೆ.

RELATED ARTICLES

Latest News