ಲಾತೂರ್,ಡಿ.12- ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಗೃಹಸಚಿವ ಶಿವರಾಜ್ ಪಾಟೀಲ್(90) ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.ಅಲ್ಪಕಾಲದ ಅನಾರೋಗ್ಯದ ನಂತರ ಪಾಟೀಲ್ ಅವರು ತಮ ತವರೂರಾದ ಮಹಾರಾಷ್ಟ್ರದ ಲಾತೂರ್‌ನಲ್ಲಿರುವ ದೇವ್‌ಘರ್‌ನಲ್ಲಿ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೃತರು ಪುತ್ರ ಶೈಲೇಶ್ ಪಾಟೀಲ್, ಸೊಸೆ ಬಿಜೆಪಿ ನಾಯಕಿ ಅರ್ಚನಾ ಮತ್ತು ಇಬ್ಬರು ಮೊಮಕ್ಕಳನ್ನು ಅಗಲಿದ್ದಾರೆ.1991ರಿಂದ 1996ರವರೆಗೆ ಲೋಕಸಭೆಯ ಸ್ಪೀಕರ್ ಆಗಿದ್ದ ಅವರು 2004ರಿಂದ 2008ರವರೆಗೆ ಯುಪಿಎ ಸರ್ಕಾರದಲ್ಲಿ ಗೃಹಸಚಿವರಾಗಿದ್ದರು. 2010ರಿಂದ 2015ರವರೆಗೆ ಪಂಜಾಬ್ -ಚಂಡೀಗಢ ಕೇಂದ್ರ ಪ್ರದೇಶದ ಆಡಳಿತಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.
1935ರ ಅ.12ರಂದು ಜನಿಸಿದ ಪಾಟೀಲ್, ಲಾತೂರ್‌ನ ಪುರಸಭೆಯ ಮುಖ್ಯಸ್ಥರಾಗಿ ತಮ ರಾಜಕೀಯ ಪ್ರಯಾಣ ಪ್ರಾರಂಭಿಸಿದರು ಮತ್ತು 70ರ ದಶಕದ ಆರಂಭದಲ್ಲಿ ಶಾಸಕರಾಗಿ ಆಯ್ಕೆಯಾದರು.
ನಂತರ ಲಾತೂರ್ ಲೋಕಸಭಾ ಕ್ಷೇತ್ರವನ್ನು ಏಳು ಬಾರಿ ಗೆದ್ದರು. 2004ರ ಲೋಕಸಭಾ ಚುನಾವಣೆಯಲ್ಲಿ ಅವರು ಬಿಜೆಪಿಯ ರೂಪತೈ ಪಾಟೀಲ್ ನೀಲಂಗೇಕರ್ ವಿರುದ್ಧ ಪರಾಜಯಗೊಂಡಿದ್ದರು.
ಪಾಟೀಲ್ ಪುಸ್ತಕ ಓದುವುದು ,ಸೂಕ್ಷ್ಮ ಅಧ್ಯಯನ ಮತ್ತು ಸ್ಪಷ್ಟ ಪ್ರಸ್ತುತಿಗೆ ಹೆಸರುವಾಸಿಯಾಗಿದ್ದರು. ಮರಾಠಿ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಅವರ ಪಾಂಡಿತ್ಯ ಹೊಂದಿದ್ದರು.
ಜೊತೆಗೆ ಸಾಂವಿಧಾನಿಕ ವಿಷಯಗಳ ಮೇಲಿನ ಅವರ ಅಸಾಧಾರಣ ಗ್ರಹಿಕೆಯು ಅವರನ್ನು ಅವರ ಕಾಲದ ಅತ್ಯಂತ ಗೌರವಾನ್ವಿತ ಸಂಸದರನ್ನಾಗಿ ಮಾಡಿತು.ಆದರೆ ಮುಂಬೈ ಮೇಲಿನ ಉಗ್ರರ ದಾಳಿ ಸಂದರ್ಭದಲ್ಲಿ ಅವರ ನಡುವಳಿಕೆ ಸಾಕಷ್ಟು ಟೀಕೆಗೆ ಒಳಗಾಗಿತ್ತು.
