ಬೆಂಗಳೂರು,ಫೆ.18- ಮೈಸೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾಲಿ ಧನಂಜಯ್ ಸ್ಪರ್ಧಿಸುವ ಕುರಿತಂತೆ ಯಾವುದೇ ಚರ್ಚೆಗಳಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.ಮಂಡ್ಯದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟ ಡಾಲಿ ಧನಂಜಯ್ ಸ್ಪರ್ಧೆಯ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ಪಕ್ಷದಲ್ಲಿ ಅಂತಹ ಚರ್ಚೆಯೇ ಆಗಿಲ್ಲ. ಆ ತರಹ ಯಾವುದೇ ಸಾಧ್ಯತೆಗಳಿಲ್ಲ ಎಂದು ಹೇಳಿದರು.
ಅತ್ತ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಎಸ್.ಎ.ರಾಮ್‍ದಾಸ್, ಡಾಲಿ ಧನಂಜಯ್ ಕಾಂಗ್ರೆಸ್ ಅಭ್ಯರ್ಥಿ ಮಾಡುವುದಾದರೆ ನಮ್ಮ ಅಭ್ಯಂತರವಿಲ್ಲ. ಅವರು ಯಾರನ್ನಾದರೂ ಅಭ್ಯರ್ಥಿ ಮಾಡಿಕೊಳ್ಳಲಿ. ಆದರೆ ಮೈಸೂರು, ಕೊಡಗು ಲೋಕಸಭಾ ಕ್ಷೇತ್ರ ಬಿಜೆಪಿಗೆ ಸೇರಿದ್ದಾಗಿದೆ ಎಂದರು.
ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರು ಭಾಗಕ್ಕೆ ಮತ್ತು ಜಿಲ್ಲೆಗೆ ಕೊಟ್ಟಿರುವ ಕೊಡುಗೆಗಳನ್ನು ಮುಂದಿಟ್ಟುಕೊಂಡು ನಾವು ಜನರ ಮುಂದೆ ಹೋಗುತ್ತೇವೆ, ಗೆಲ್ಲುತ್ತೇವೆ ಎಂದು ಹೇಳಿದರು.
ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಕಂಡುಬಂದಿದ್ದು, ಡಾಲಿ ಧನಂಜಯ್ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಚರ್ಚೆಗಳು ಹರಿದಾಡುತ್ತಿವೆ. ಅಚ್ಚರಿ ಎಂಬಂತೆ ಡಾಲಿ ಧನಂಜಯ್ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸುವಾಗ ಹಿಡಿದಿದ್ದ ಆಕರ್ಷಕ ಬ್ಯಾಗ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.