ನವದೆಹಲಿ,ಡಿ.12- ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತ ಪ್ರವಾಸದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸುದೀರ್ಘ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.
ಮಾತುಕತೆ ವೇಳೆ ಉಭಯ ನಾಯಕರು ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಭಾರತ-ಅಮೆರಿಕದ ಪ್ರಗತಿ ಕುರಿತು ಚರ್ಚಿಸಿದರು ಎಂದು ವರದಿಯಾಗಿದೆ. ಜೊತೆಗೆ ಎರಡೂ ರಾಷ್ಟ್ರಗಳ ದ್ವಿಪಕ್ಷೀಯ ಸಹಕಾರಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.
ಪುಟಿನ್ ಭಾರತದ ಭೇಟಿ ಬಳಿಕ ಟ್ರಂಪ್ ಅವರೊಂದಿಗೆ ನಡೆಸಿದ ಮೊದಲ ದೂರವಾಣಿ ಸಂಭಾಷಣೆ ಇದಾಗಿದೆ ಎಂದು ಮೋದಿ ಎಕ್‌್ಸ ಮಾಡಿದ್ದಾರೆ.
ನಾನು ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಬಹಳ ಆತ್ಮೀಯ ಮತ್ತು ಅದ್ಭುತ ಸಂಭಾಷಣೆ ನಡೆಸಿದೆ. ನಾವು ದ್ವಿಪಕ್ಷೀಯ ಸಂಬಂಧಗಳಲ್ಲಿನ ಪ್ರಗತಿಯನ್ನೂ ಪರಿಶೀಲಿಸಿದ್ದೇವೆ. ಇದರೊಂದಿಗೆ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದೇವೆ. ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಭಾರತ ಮತ್ತು ಅಮೆರಿಕ ಒಟ್ಟಾಗಿ ಕೆಲಸ ಮಾಡುವುದನ್ನ ಮುಂದುವರಿಸುತ್ತವೆ ಎಂದು ತಿಳಿಸಿದ್ದಾರೆ.
ಇನ್ನೂ ಸಂಭಾಷಣೆ ಸಮಯದಲ್ಲಿ ಉಭಯ ನಾಯಕರು ದ್ವಿಪಕ್ಷೀಯ ವ್ಯಾಪಾರ ಹೆಚ್ಚಿಸುವ ಬಗ್ಗೆ ಒತ್ತಿ ಹೇಳಿದ್ದಾರೆ. ಅಲ್ಲದೇ ಮಿಲಿಟರಿ ಪಾಲುದಾರಿಕೆಯ ಅವಕಾಶಗಳನ್ನು ಹೆಚ್ಚಿಸುವುದು, ವಾಣಿಜ್ಯ ಮತ್ತು ತಂತ್ರಜ್ಞಾನ, ಇಂಧನ, ರಕ್ಷಣೆ ಮತ್ತು ಭದ್ರತೆ ಸೇರಿದಂತೆ ಆದ್ಯತೆಯ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಹೆಚ್ಚಿಸುವ ಬಗ್ಗೆ ಚರ್ಚಿಸಿದರು. ಬಳಿಕ ಎಲ್ಲಾ ಕ್ಷೇತ್ರಗಳಲ್ಲಿ ನಿರಂತರ ಸಹಕಾರ ಬಲಗೊಳ್ಳುತ್ತಿದ್ದೆ ಎಂದು ಉಭಯ ನಾಯಕರು ತೃಪ್ತಿಪಟ್ಟುಕೊಂಡರು ಎಂದು ವರದಿಗಳು ತಿಳಿಸಿವೆ.
