ಹಾಸನ,ಜು.25- ನಗರದ ಹೊರವಲಯದ ದೊಡ್ಡಪುರ ಗ್ರಾಮದ ಸಮೀಪ ಶುಕ್ರವಾರ ತಡರಾತ್ರಿ ಟಯರ್ ಸ್ಫೋಟಗೊಂಡ ಪರಿಣಾಮ ಬಿಯರ್ ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.
ಅಪಘಾತದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬಿಯರ್ ಬಾಟಲಿಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕೆಲಕಾಲ ಸಂಚಾರಕ್ಕೂ ಅಡಚಣೆ ಉಂಟಾಯಿತು.
ಹಾಸನದ ವುಡ್ ಪಿಕರ್ ಡಿಸ್ಟಿಲರೀಸ್‌ನಿಂದ ಕೊಪ್ಪಳಕ್ಕೆ ಸುಮಾರು 1,100 ಕೇಸ್‌ಗಳ ಬಿಯರ್ ಸಾಗಿಸುತ್ತಿದ್ದ ಲಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಹಿಂಬದಿಯ ಟಯರ್ ಸ್ಫೋಟಗೊಂಡಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಗೆ ಉರುಳಿ ಬಿದ್ದಿದೆ.
ಅಪಘಾತದ ತೀವ್ರತೆಗೆ ಲಾರಿಯಲ್ಲಿದ್ದ ಸಾವಿರಾರು ಬಿಯರ್ ಬಾಟಲಿಗಳು ರಸ್ತೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅನೇಕ ಬಾಟಲಿಗಳು ಒಡೆದು ನಷ್ಟ ಉಂಟಾಗಿದೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಸುತ್ತಮುತ್ತಲಿನ ಕೆಲವರು ರಸ್ತೆಯಲ್ಲಿ ಬಿದ್ದಿದ್ದ ಬಿಯರ್ ಬಾಟಲಿಗಳನ್ನು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಕೆಲಕಾಲ ವಾಹನ ಸಂಚಾರವನ್ನು ನಿಯಂತ್ರಿಸಿ, ಅಪಘಾತ ಸ್ಥಳವನ್ನು ಸುರಕ್ಷಿತಗೊಳಿಸಿದರು. ಬಳಿಕ ಉಳಿದಿದ್ದ ಬಿಯರ್ ಕೇಸ್‌ಗಳನ್ನು ಸಂಗ್ರಹಿಸಲು ಸಾರಿಗೆ ಸಂಸ್ಥೆಯ ಸಿಬ್ಬಂದಿ ಜೆಸಿಬಿ ಹಾಗೂ ಇತರೆ ವಾಹನಗಳ ನೆರವಿನಿಂದ ಕಾರ್ಯಾಚರಣೆ ನಡೆಸಿದರು.
ಅಪಘಾತದಿಂದ ಲಾರಿಗೆ ಹಾನಿಯಾಗಿದ್ದು, ಬಿಯರ್ ಸಾಗಣೆಗೂ ಭಾರೀ ನಷ್ಟ ಉಂಟಾಗಿದೆ. ಘಟನೆಯ ಕುರಿತು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
