Friday, November 22, 2024
Homeರಾಜ್ಯವಿಧಾನಸಭೆಯಲ್ಲಿ ಸುಳ್ಳು-ಸತ್ಯಗಳ ಸಂಘರ್ಷ

ವಿಧಾನಸಭೆಯಲ್ಲಿ ಸುಳ್ಳು-ಸತ್ಯಗಳ ಸಂಘರ್ಷ

ಬೆಂಗಳೂರು,ಫೆ.20- ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಸುಳ್ಳು ಮತ್ತು ಸತ್ಯದ ಜಂಜಾಟ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ರಾಜ್ಯಪಾಲರು ವಿಧಾಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಫೆ.12 ರಂದು ಮಾಡಿದ್ದ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಸುದೀರ್ಘ ಉತ್ತರ ನೀಡಿದರು.

ವಿಪಕ್ಷಗಳು ರಾಜ್ಯಪಾಲರ ಭಾಷಣ ಸುಳ್ಳು ಎಂದು ಆರೋಪಿಸಿವೆ. ಆದರೆ ಯಾವ ಹೇಳಿಕೆಗಳು ಸುಳ್ಳು ಎಂದು ಸ್ಪಷ್ಟವಾಗಿ ತಿಳಿಸಿಲ್ಲ. ಏನೋ ಹೇಳಿಕೆ ನೀಡಬೇಕು ಎಂದು ಟೀಕೆ ಮಾಡುತ್ತಿದ್ದಾರೆ. ವಿರೋಧಪಕ್ಷಗಳು ಸರ್ಕಾರವನ್ನು ಹೊಗಳಬೇಕು ಎಂದು ಬಯಸುವುದಿಲ್ಲ. ಆದರೆ ಆಧಾರರಹಿತವಾದ ಸುಳ್ಳು ಹೇಳುವುದು ಸರಿಯಲ್ಲ. ಬಿಜೆಪಿಯವರಿಗೆ ಸುಳ್ಳೇ ಮನೆದೇವರು. ಅವರಿಗೆ ಸತ್ಯ ಹೇಳುವುದು ಗೊತ್ತಿಲ್ಲ ಎಂದು ತಿರುಗೇಟು ನೀಡಿದರು. ಇದಕ್ಕೆ ವಿರೋಧಪಕ್ಷಗಳಿಂದ ಆರ್.ಅಶೋಕ್, ಬಸವರಾಜುಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತಿತರರು ತಿರುಗೇಟು ನೀಡಿ ರಾಜ್ಯಪಾಲರ ಭಾಷಣದಲ್ಲಿ ಎಲ್ಲವೂ ಸುಳ್ಳೇ ಆಗಿದೆ. ಸತ್ಯ ಯಾವುದು ಎಂದು ಹುಡುಕಬೇಕಾಗಿದೆ ಎಂದು ತಿರುಗೇಟು ನೀಡಿದರು.

ಇದಕ್ಕೆ ಪ್ರತ್ಯುತ್ತರಿಸಿದ ಮುಖ್ಯಮಂತ್ರಿಯವರು, ವಿರೋಧಪಕ್ಷಗಳು ಅದರಲ್ಲೂ ವಿಪಕ್ಷದ ನಾಯಕರು ಅಂಕಿ ಅಂಶಗಳ ಸಮೇತ ಮಾತನಾಡಬೇಕು. ಬಾಯಿಗೆ ಬಂದಂತೆ ಮಾತನಾಡಬಾರದು. ಬಸವರಾಜು ಬೊಮ್ಮಾಯಿಯವರು ಆ ರೀತಿ ಮಾತನಾಡಿಲ್ಲ. ಅವರು ಹೊರಗಡೆ ನಿಜ ಹೇಳುತ್ತಾರೆ. ಸದನದ ಒಳಗಡೆ ರಾಜಕೀಯಕ್ಕಾಗಿ ಟೀಕೆ ಮಾಡುತ್ತಾರೆ ಎಂದು ಕಿಚಾಯಿಸಿದರು.

ಅದಕ್ಕೆ ತಿರುಗೇಟು ನೀಡಿದ ಬಸವರಾಜು ಬೊಮ್ಮಾಯಿ, ನಾವು-ನೀವು ಜೊತೆಯಲ್ಲೇ ಇದ್ದವರು. ಹೀಗಾಗಿ ನೀವು ಏನು ಮಾಡುತ್ತೀರೋ ನಾವೂ ಅದನ್ನೇ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಅವರನ್ನು ಥಳಕು ಹಾಕಿಕೊಳ್ಳಲು ಯತ್ನಿಸಿದರು. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ಮುಖ್ಯಮಂತ್ರಿಯವರು, ಬಿಜೆಪಿಯವರು ಪ್ರತಿಬಾರಿಯೂ ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಒಂದಂಶವನ್ನಾದರೂ ನೀವು ಸುಳ್ಳು ಎಂದು ತೋರಿಸಿ ಎಂದು ಸವಾಲು ಹಾಕಿದರು.

ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು : ಜಿ.ಟಿ.ದೇವೇಗೌಡ

ಅದಕ್ಕೆ ಪ್ರತ್ಯುತ್ತರಿಸಿದ ಬೊಮ್ಮಾಯಿ, ಹಿಂದಿನ ಸರ್ಕಾರದ ಅವಯಲ್ಲಿ ಸಾರಿಗೆ ಸಂಸ್ಥೆಗಳಿಗೆ ಒಂದು ಬಸ್ಸನ್ನೂ ಖರೀದಿಸಲಿಲ್ಲ ಎಂದು ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇದು ಸುಳ್ಳು. ಬಿಎಂಟಿಸಿಗೆ 1311 ಬಸ್‍ಗಳನ್ನು ಕೆಎಸ್‍ಆರ್‍ಟಿಸಿಗೆ 70 ಕ್ಕೂ ಹೆಚ್ಚು ಬಸ್ಸುಗಳನ್ನು ಖರೀದಿಸಿ ನೀಡಲಾಗಿತ್ತು. ಪಂಚಖಾತ್ರಿಗಳ ಜೊತೆಗೆ ಶೇ.97 ರಷ್ಟು ಬಜೆಟ್ ಘೋಷಣೆಗೆ ಅಧಿಸೂಚನೆ ಹೊರಡಿಸಿದ್ದೇವೆ ಎಂದು ರಾಜ್ಯಪಾಲರ ಮೂಲಕ ತಿಳಿಸಿದ್ದಾರೆ.
ಆದರೆ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಶೇ.55 ರಷ್ಟು ಪ್ರಗತಿಯಾಗಿಲ್ಲ ಎಂದು ಉಲ್ಲೇಖಿಸಲಾಗಿದೆ. ಹಾಲಿಗೆ ನೀಡುವ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಿಲ್ಲ ಎಂದು ಉಲ್ಲೇಖಿಸಿದರು.

ನಿಮ್ಮ ಎಲ್ಲಾ ಪ್ರಶ್ನೆಗೂ ಹಂತಹಂತವಾಗಿ ಉತ್ತರ ಕೊಡುತ್ತೇನೆ ಎಂದ ಮುಖ್ಯಮಂತ್ರಿಯವರು, ಗಲಾಟೆ ಮಾಡುವುದೇ ವಿರೋಧಪಕ್ಷಗಳ ಕೆಲಸವಾಗಬಾರದು, ಉತ್ತರ ಕೇಳಲು ಇಷ್ಟವಿಲ್ಲ ಎಂದರೆ ಸುಮ್ಮನೆ ಕುಳಿತುಕೊಳ್ಳಿ ಎಂದು ತಿರುಗೇಟು ನೀಡಿದರು. ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿಯವರ ಪ್ರತಿಯೊಂದು ಮಾತಿಗೂ ಅಡ್ಡಿಪಡಿಸುವ ಪ್ರಯತ್ನ ಮಾಡಿದರು. ಇದಕ್ಕೆ ಆಡಳಿತ ಪಕ್ಷದ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು.

RELATED ARTICLES

Latest News