ಬೆಂಗಳೂರು, ಡಿ.12- ಹೊಸ ವರ್ಷದಿಂದ ಕಾವೇರಿ ನೀರಿನ ದರ ಏರಿಕೆಯಾಗಲಿದೆ.ಹೊಸ ವರ್ಷದಿಂದ ಕಾವೇರಿ ನೀರಿನ ದರ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ ಎಂದು ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದಾರೆ.
ನಷ್ಟದಲ್ಲಿರುವ ಜಲ ಮಂಡಳಿಯನ್ನು ಸರಿದಾರಿಗೆ ತರ ಬೇಕಾದರೆ ಕುಡಿಯುವ ನೀರಿನ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಮುಂದೆ ಪ್ರತಿವರ್ಷ ವಿದ್ಯುತ್ ದರ ಏರಿಕೆ ಮಾಡುವಂತೆ ನೀರಿನ ದರವನ್ನು ಏರಿಕೆ ಮಾಡಲಾಗುವುದು. ಮುಂದಿನ ವರ್ಷದಿಂದ ಶೇ.3 ರಷ್ಟು ನೀರಿನ ದರ ಏರಿಕೆ ಮಾಡಲಾಗುವುದು ಎಂದು ಅವರು ಹೇಳಿದರು.
ಜಲಮಂಡಳಿ ಆಡಳಿತ ಮಂಡಳಿ ದರ ಏರಿಸಲು ನಿರ್ಧಾರ ಮಾಡಿದೆ. ಪ್ರತಿ ವರ್ಷ ನೀರಿನ ದರ ಏರಿಕೆ ಒಪ್ಪಿಗೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತಿಲ್ಲ ಎಂದು ಅವರು ತಿಳಿಸಿದ್ದಾರೆ. ಕಳೆದ 6 ತಿಂಗಳ ಹಿಂದೆ ಪೈಸೆ ಲೆಕ್ಕದಲ್ಲಿ ನೀರಿನ ದರ ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ ಕಾವೇರಿ ನೀರಿನ ದರ ಏರಿಕೆ ಅನಿವಾರ್ಯವಾಗಲಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
