ಬೆಳಗಾವಿ, ಡಿ.12- ಬೆಳಗಾವಿಯಲ್ಲಿ ನಡೆಯು ತ್ತಿರುವ ಚಳಿಗಾಲದ ಅಧಿವೇಶನದ ವೇಳೆಯಲ್ಲಿ ಅಭಿವೃದ್ಧಿ ಕಾರ್ಯಗಳ ಚರ್ಚೆಗಿಂತಲೂ, ರಾಜಕೀಯ ಮೇಲಾಟಗಳು ಜೋರಾಗಿದೆ. ಸಿಎಂ ಸಿದ್ದು ಮತ್ತು ಡಿಸಿಎಂ ಡಿಕೆಶಿ ಅವರ ಗುಂಪುಗಳ ನಡುವೆ ಔತಣಕೂಟ ಸಭೆಗಳು ದಿನೇ ದಿನೇ ಕುತೂಹಲ ಹೆಚ್ಚಿಸುತ್ತಿವೆ.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದು ಅವರ ಬೆಂಬಲಿಗರು ಬಲವಾದ ಪ್ರತಿಪಾದನೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸೇರಿದಂತೆ ಅನೇಕರು 5 ವರ್ಷಗಳವರೆಗೂ ನಾಯಕತ್ವ ಬದಲಾವಣೆ ಇಲ್ಲ ಎಂದು ಬಲವಾಗಿ ಹೇಳುತ್ತಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ ನಡೆದ ಉಪಾಹಾರಕೂಟಗಳು ರಾಜಕೀಯ ವಾದ-ಪ್ರತಿವಾದಗಳಿಗೆ ತಾತ್ಕಾಲಿಕ ಕದನ ವಿರಾಮ ನೀಡಿದ್ದವು.
ಆದರೆ, ತೆರೆ-ಮರೆಯಲ್ಲಿ ಕುರ್ಚಿಯ ಕದನ ನಡೆಯುತ್ತಲೇ ಇದೆ. ಬಲಪ್ರದರ್ಶನಗಳು ಒಳಗೊಳಗೆ ಜಿದ್ದಾಜಿದ್ದಿಯನ್ನು ಸೃಷ್ಟಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದಲ್ಲಿ ಬೇರೆ ಬೇರೆ ರೀತಿಯ ತಂತ್ರಗಾರಿಕೆಗಳು ಚಾಲು ಇವೆ. ನಾಯಕತ್ವ ಬದಲಾಗಬಾರದು. ಬದಲಾಗುವುದು ಅನಿವಾರ್ಯ ಎಂದಾದರೆ ದಲಿತರನ್ನೇ ಮುಖ್ಯಮಂತ್ರಿ ಮಾಡಬೇಕು ಎಂಬ ಬೇಡಿಕೆಯನ್ನು ಮಂಡಿಸಲಾಗಿದೆ.
ಡಿ.ಕೆ.ಶಿವಕುಮಾರ್ ಪರ್ಯಾಯ ಶಕ್ತಿ ಕ್ರೋಢೀಕರಣಕ್ಕೆ ತಮ ಬೆಂಬಲಿಗರ ಜೊತೆ ರಹಸ್ಯ ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರಿಗಾಗಿ ಆಸಿಫ್ ಶೇಠ್ ಔತಣಕೂಟ ಆಯೋಜಿಸಿದರು. ಅದಕ್ಕೆ ಡಿ.ಕೆ.ಶಿವಕುಮಾರ್ ಮತ್ತು ಅವರ ಬಣ ಗೈರು ಹಾಜರಾಗಿತ್ತು. ಈಗ ಡಿ.ಕೆ. ಶಿವಕುಮಾರ್ ಅವರಿಗಾಗಿ ಮತ್ತೊಂದು ಸುತ್ತಿನ ಭೋಜನಕೂಟ ಆಯೋಜಿಸಲಾಗಿದೆ.
ನಿನ್ನೆ ರಾತ್ರಿ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಡಿ.ಕೆ.ಶಿವಕುಮಾರ್ ಮತ್ತು ಅವರ ಬೆಂಬಲಿಗರಿಗೆ ಔತಣಕೂಟ ಆಯೋಜಿಸಿದ್ದು, ಅದರಲ್ಲಿ ಸುಮಾರು 40ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರು ಎನ್ನಲಾಗಿದೆ. ಶಾಸಕರ ಈ ಪ್ರತ್ಯೇಕ ಔತಣಕೂಟಗಳು ಕಾಂಗ್ರೆಸ್‌ನಲ್ಲಿ ಗೊಂದಲದ ವಾತಾವರಣ ನಿರ್ಮಿಸಿವೆ.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರನ್ನು ಒಟ್ಟಿಗೆ ಕೂರಿಸಿ ನಾಯಕತ್ವ ವಿಚಾರದ ಬಗ್ಗೆ ಸ್ಪಷ್ಟ ಸೂಚನೆ ನೀಡಲು ಇದೇ ತಿಂಗಳ 19ರಂದು ದೆಹಲಿಯಲ್ಲಿ ಸಭೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ರಾಹುಲ್ ಗಾಂಧಿ ಅವರ ಸಮುಖದಲ್ಲಿ ಸಭೆ ನಡೆಯಲಿದ್ದು, ನಾಯಕತ್ವ ಬದಲಾವಣೆಗೆ ಸ್ಪಷ್ಟ ನಿರ್ದೇಶನ ಹೊರಬೀಳಲಿದೆ ಎನ್ನಲಾಗುತ್ತಿದೆ.
ಅದಕ್ಕೂ ಮೊದಲೇ ಎರಡೂ ಬಣಗಳಲ್ಲಿ ಶಕ್ತಿ ಪ್ರದರ್ಶನಗಳು ನಡೆಯುತ್ತಿವೆ. ತೆರೆಮರೆಯಲ್ಲಿ ಶಾಸಕರನ್ನು ಕ್ರೋಢೀಕರಿಸುವ ಪ್ರಯತ್ನಗಳಾಗುತ್ತಿವೆ. ಸಿದ್ದರಾಮಯ್ಯ ಅವರ ಬಣದ ನಾಯಕರುಗಳು ಮತ್ತೊಮೆ ಶಾಸಕಾಂಗ ಸಭೆ ನಡೆಸಿ ಅಲ್ಲಿಯೇ ನಾಯಕತ್ವ ನಿರ್ಧಾರವಾಗಬೇಕು ಎಂಬ ರೀತಿ ವಾದ ಮಂಡಿಸುತ್ತಿದ್ದಾರೆ. ಇದಕ್ಕೆ ಟಾಂಗ್ ನೀಡುವಂತೆ ಡಿ.ಕೆ.ಶಿವಕುಮಾರ್ ಬಣ ಕೂಡ ಶಾಸಕಾಂಗ ಸಭೆಗೆ ಸಹಮತ ವ್ಯಕ್ತಪಡಿಸಲು ತಯಾರಾಗಿದೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಬಣ ರಾಜಕೀಯಗಳು ಹೆಚ್ಚಾಗುತ್ತಿವೆ. ಶಾಸಕರ ವಿಶ್ವಾಸಗಳಿಸಲು ಡಿ.ಕೆ.ಶಿವಕುಮಾರ್ ಅವರು ನಯ-ವಿನಯದ ನಡೆಯನ್ನು ಅನುಸರಿಸುತ್ತಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಕೆಲವು ಶಾಸಕರು ಮಾತ್ರ ಡಿ.ಕೆ.ಶಿವಕುಮಾರ್ ಪರವಾಗಿ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಈ ಸಂಖ್ಯೆಯನ್ನು ಹೆಚ್ಚಿಸಲು ಶಾಸಕರನ್ನು ಸೆಳೆಯುವ ಕಾರ್ಯತಂತ್ರವನ್ನು ಡಿ.ಕೆ. ಬಣ ಆರಂಭಿಸಿದೆ. ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಗಳ ಮೂಲಕ ಜಾತಿವಾರು ಸಭೆಗಳನ್ನು ನಡೆಸಿ ತಿರುಗೇಟು ನೀಡಲು ಪ್ರಯತ್ನಿಸುತ್ತಿದ್ದಾರೆ. ಬೆಳಗಾವಿಯಲ್ಲಿ ವಿಧಾನಸಭೆಯ ಅಧಿವೇಶನದ ನಡುವೆಯೇ ರಾಜಕೀಯವೂ ಕೂಡ ಕಾವು ಪಡೆದುಕೊಳ್ಳುತ್ತಿದೆ.
