ಮಂಗಳೂರು, ಫೆ.20- ಮಕ್ಕಳಿಗೆ ಶ್ರೀರಾಮನ ವಿಚಾರದಲ್ಲಿ ಅಪಮಾನ ಮಾಡಿ ಭಾರೀ ವಿವಾದ ಸೃಷ್ಟಿಸಿದ್ದ ಇಲ್ಲಿನ ಸಂತ ಜಿರೋಸಾ ಶಾಲೆಯ ಶಿಕ್ಷಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಪೋಷಕರಿಗೆ ವಿದೇಶಗಳಿಂದ ಬೆದರಿಕೆ ಕರೆಗಳು ಬರಲಾರಂಭಿಸಿವೆ. ಈಗಾಗಲೇ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ಅಮಾನತು ಮಾಡಲಾಗಿದೆ. ಆದರೆ, ಇದನ್ನು ಖಂಡಿಸಿ ಕೆಲವರು ವಿದೇಶಗಳಿಂದ ಮಕ್ಕಳ ಪೋಷಕರ ಚಿತ್ರಗಳನ್ನು ಅಂತರ್ಜಾಲದಲ್ಲಿ ವಿರೂಪಗೊಳಿಸಿ ಬೆದರಿಕೆ ಹಾಕುತ್ತಿರುವುದು ಬೆಳಕಿಗೆ ಬಂದಿದೆ.
ಶಾಲೆಯ ಶಿಕ್ಷಕಿ ಹಿಂದೂ ಧರ್ಮ ಅವಹೇಳನ ಮಾಡಿದ್ದಾರೆ ಎಂದು ಶಾಲೆ ಬಳಿ ಹಲವು ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ವೇಳೆ ಶಾಸಕರೂ ಭಾಗಿಯಾಗಿದ್ದಾರೆಂದು ಅವರ ಮೇಲೂ ಕೂಡ ಎಫ್‍ಐಆರ್ ದಾಖಲಾಗಿತ್ತು. ಇದು ದಕ್ಷಿಣ ಕನ್ನಡವಲ್ಲದೆ ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ವಿಧಾನಸಭೆಯಲ್ಲೂ ಕೂಡ ಇದು ಪ್ರಸ್ತಾಪವಾಗಿತ್ತು.
ನಡುರಸ್ತೆಯಲ್ಲೇ ಪತ್ನಿ ಮೇಲೆ ಮಚ್ಚು ಬೀಸಿದ ಪತಿ
ಇದರ ನಡುವೆ ವಿದೇಶದಿಂದ ಮಕ್ಕಳ ಪೋಷಕರಿಗೆ ಬೆದರಿಕೆ ಕರೆ ಬರುತ್ತಿದ್ದು, ಈ ಸಂಬಂಧ ಕಂಕನಾಡಿ ಪೊಲೀಸರಿಗೆ ಕವಿತಾ ಎಂಬುವವರು ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದೇ ರೀತಿ ಹಲವು ವಿದ್ಯಾರ್ಥಿಗಳ ಪೋಷಕರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸುವ ಆಡಿಯೋಗಳು ಹಾಗೂ ಅಶ್ಲೀಲ ವಿಡಿಯೋಗಳನ್ನು ಕಳುಹಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಈಗ ಪೊಲೀಸರು ಅಲರ್ಟ್ ಆಗಿದ್ದು, ತನಿಖೆ ಆರಂಭಿಸಿದ್ದಾರೆ.