ಬೆಂಗಳೂರು,ಫೆ.21- ಸರ್ಕಾರಿ ಶಾಲೆಗಳಲ್ಲಿ ನಾಡಗೀತೆ ಹಾಡುವುದಕ್ಕೆ ಸಂಬಂಧಪಟ್ಟಂತೆ ಸರ್ಕಾರದ ದೋಷಪೂರಿತ ಆದೇಶದ ವಿರುದ್ಧ ವಿರೋಧಪಕ್ಷಗಳು ವಿಧಾನಸಭೆಯಲ್ಲಿಂದು ಕಿಡಿಕಾರಿದ್ದು, ಸರ್ಕಾರ ತಿದ್ದುಪಡಿ ಆದೇಶ ಹೊರಡಿಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ಬಳಿಕ ಬೇರೆ ಬೇರೆ ಕಲಾಪಗಳು ನಡೆಯುತ್ತಿರುವ ನಡುವೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿಷಯ ಪ್ರಸ್ತಾಪಿಸಿ, ಈ ಸರ್ಕಾರ ಕುವೆಂಪು ಅವರಿಗೆ ಪದೇಪದೇ ಅಪಮಾನ ಮಾಡುತ್ತಿದೆ. ಮೊನ್ನೆ ವಸತಿ ಶಾಲೆಗಳಲ್ಲಿ ಕುವೆಂಪು ಅವರ ಬರಹವನ್ನು ಬದಲಾವಣೆ ಮಾಡಿತ್ತು. ಗಲಾಟೆಯಾದ ಬಳಿಕ ತಪ್ಪನ್ನು ಸರಿಪಡಿಸುವುದಾಗಿ ಹೇಳಿದೆ. ಈಗ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಾತ್ರ ನಾಡಗೀತೆ ಹಾಡಬೇಕು ಎಂದು ಆದೇಶ ಹೊರಡಿಸಿದೆ.
ಖಾಸಗಿ ಶಾಲೆಗಳಿಗೆ ವಿನಾಯಿತಿ ನೀಡಲಾಗಿದೆ. ಎಲ್ಲಾ ಶಾಲೆಗಳಿಗೆ ಶಿಕ್ಷಣ ಇಲಾಖೆಗಳಿಗೆ ನಿಯಂತ್ರಣ ಸಂಸ್ಥೆ, ಶಿಕ್ಷಣ ನೀತಿಯ ಪ್ರಕಾರವೇ ಎಲ್ಲಾ ಶಾಲೆಗಳು ಸರ್ಕಾರದಿಂದ ಬೇರೆ ಬೇರೆ ಅನುಕೂಲ ಪಡೆದುಕೊಳ್ಳುತ್ತವೆ. ಆದ್ದರಿಂದ ನಾಡಗೀತೆಯಿಂದ ಖಾಸಗಿ ಶಾಲೆಗಳಿಗೆ ವಿನಾಯಿತಿ ನೀಡುವ ಅಗತ್ಯವೇನಿದೆ? ಇದು ತುಘಲಕ್ ದರ್ಬಾರಾಗಿದೆ. ಅಧಿಕಾರಿಗಳು ಮತ್ತು ಸಚಿವರ ನಡುವೆ ಸಂಬಂಧ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಲಂಗೂ ಲಗಾಮು ಇಲ್ಲದಂತಾಗಿದೆ. ದೋಷಪೂರಿತ ಆದೇಶಕ್ಕಾಗಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು. ಶಾಸಕರಾದ ಸುರೇಶ್‍ಕುಮಾರ್, ಅರಗ ಜ್ಞಾನೇಂದ್ರ, ಅರವಿಂದ್ ಬೆಲ್ಲದ್ ಮತ್ತಿತರರು ಸರ್ಕಾರದ ವಿರುದ್ಧ ಕಿಡಿಕಾರಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಉತ್ತರ ನೀಡಿ, ಈ ಹಿಂದಿನ ಸರ್ಕಾರ ಮೈಸೂರು ಅನಂತಸ್ವಾಮಿ ಅವರ ಧಾಟಿಯಲ್ಲಿ ನಾಡಗೀತೆ ಹಾಡಬೇಕು ಎಂದು ಸರ್ಕಾರಿ ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಸಿ.ಅಶ್ವತ್ಥ್ ಅವರ ಧಾಟಿಯಲ್ಲಿ ನಾಡಗೀತೆ ಹಾಡಲು ಆದೇಶಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು.
ಈ ಪ್ರಕರಣದ ವಿಚಾರಣೆ ವೇಳೆ ಈ ಹಿಂದಿನ ಆದೇಶದಲ್ಲಿದ್ದಂತೆ ಎಲ್ಲಾ ಶಾಲೆಗಳು ಎಂದರೆ ಯಾವುವು ಎಂದು ವಕೀಲರು ಪ್ರಶ್ನೆಯೆತ್ತಿದರು. ಅದನ್ನು ಸರಿಪಡಿಸಲು ಇದೇ ವರ್ಷದ ಫೆ.16 ರಂದು ಹೊರಡಿಸಲಾಗಿದ್ದ ಆದೇಶದಲ್ಲಿ ರಾಷ್ಟ್ರಕವಿ ಜ್ಞಾನಪೀಠ ಪುರಸ್ಕøತರಾದ ಡಾ.ಕುವೆಂಪು ಅವರ ಜಯ ಭಾರತ ಜನನಿಯ ತನುಜಾತೆ ಕವನವನ್ನು ನಾಡಗೀತೆಯಾಗಿ ಘೋಷಿಸುವ ಕುರಿತು ಹೊರಡಿಸಲಾದ 2024 ರ ಫೆ.1 ರ ಆದೇಶವನ್ನು ತಿದ್ದುಪಡಿ ಮಾಡಲಾಗಿದೆ.
ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ನಿಗಮ, ಮಂಡಳಿ, ಪ್ರಾಧಿಕಾರ, ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳಲ್ಲಿ ಹಾಡುವುದು ಎಂಬುದರ ಬದಲಾಗಿ ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ನಿಗಮ, ಮಂಡಳಿ, ಪ್ರಾಧಿಕಾರ, ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮದ ಪ್ರಾರಂಭದಲ್ಲಿ ಹಾಡಬೇಕೆಂಬುದನ್ನು ಬದಲಾಯಿಸಲಾಗಿತ್ತು ಎಂದರು.
ಕಳೆದ 10 ವರ್ಷಗಳಲ್ಲಿ 13 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ : ಬೊಮ್ಮಾಯಿ
ಈ ಆದೇಶ ಕುರಿತಂತೆ ತಯಾರಿಸಲಾದ ಟಿಪ್ಪಣಿಯಲ್ಲಿ ಖಾಸಗಿ ಶಾಲೆ ಎಂದು ಸೇರ್ಪಡೆ ಮಾಡಲಾಗಿದೆ. ಆದರೆ ಆದೇಶದಲ್ಲಿ ಈ ಪದ ಮುದ್ರಣ ದೋಷದಿಂದಾಗಿ ಕೈ ಬಿಟ್ಟು ಹೋಗಿದೆ, ಅದನ್ನು ಸರಿಪಡಿಸಿ ಮತ್ತೊಮ್ಮೆ ತಿದ್ದುಪಡಿ ಆದೇಶವನ್ನು ಹೊರಡಿಸಿದ್ದೇವೆ ಎಂದು ಹೇಳಿದರು. ಕನ್ನಡ ಕಾಳಜಿಯ ಬಗ್ಗೆ ವಿರೋಧ ಪಕ್ಷಗಳಿಂದ ನಾವು ಪಾಠ ಕಲಿಯಬೇಕಿಲ್ಲ. ಈ ಹಿಂದೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಬಿಜೆಪಿ ಸರ್ಕಾರ ಪ್ರಶಸ್ತಿಯನ್ನೇ ನೀಡಿರಲಿಲ್ಲ. ನಾವು ಬಂದು ಪ್ರಶಸ್ತಿ ನೀಡಿದ್ದೇವೆ ಎಂದು ತಿರುಗೇಟು ನೀಡಿದರು.
ಅಷ್ಟಕ್ಕೇ ತೃಪ್ತರಾಗದ ವಿರೋಧ ಪಕ್ಷದ ನಾಯಕರು ಸರ್ಕಾರ ಪದೇ ಪದೇ ಈ ರೀತಿಯ ಲೋಪಗಳನ್ನು ಮಾಡುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಸರ್ಕಾರ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದರು.
ನ್ಯಾಯಾಲಯದ ವಿಚಾರ ಪ್ರಸ್ತಾಪವಾಗಿರುವುದರಿಂದ ಕಾನೂನು ಸಚಿವ ಉತ್ತರ ನೀಡಬೇಕೆಂದು ಆರ್.ಅಶೋಕ್ ಒತ್ತಾಯಿಸಿದರು.
ಫೆ.26, 27 ರಂದು ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳ
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಧ್ಯಪ್ರವೇಶ ಮಾಡಿ, ವಿರೋಧ ಪಕ್ಷದ ನಾಯಕರು ವಿಷಯ ಪ್ರಸ್ತಾಪಿಸುವ ಮೊದಲೇ ನಮ್ಮ ಪಕ್ಷದವರು ಜಾಗೃತರಾಗಿ ತಪ್ಪನ್ನು ಸರಿಪಡಿಸಿ ಆದೇಶ ಹೊರಡಿಸಿದ್ದಾರೆ. ಎಲ್ಲಾ ಶಾಲೆಗಳಲ್ಲಿ ಎಂಬುದನ್ನು ಸರಿಪಡಿಸಲಾಗಿದೆ. ಆದೇಶದಲ್ಲಿ ಮುದ್ರಣ ಲೋಪ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ವಿಚಾರ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿಗೂ ಕಾರಣವಾಗಿತ್ತು.