Friday, November 22, 2024
Homeರಾಜ್ಯರಾಜ್ಯಸರ್ಕಾರ ಬೆದರಿಸಲು ಪ್ರಕರಣ ದಾಖಲಿಸಿದೆ : ಕುಪೇಂದ್ರರೆಡ್ಡಿ

ರಾಜ್ಯಸರ್ಕಾರ ಬೆದರಿಸಲು ಪ್ರಕರಣ ದಾಖಲಿಸಿದೆ : ಕುಪೇಂದ್ರರೆಡ್ಡಿ

ಬೆಂಗಳೂರು,ಫೆ.24- ಪ್ರಜಾಪ್ರಭುತ್ವದಲ್ಲಿ ಯಾರು, ಯಾರನ್ನು ಬೇಕಾದರೂ ಭೇಟಿ ಮಾಡಿ ಮತ ಕೇಳುವ ಅವಕಾಶಗಳಿವೆ. ತಮ್ಮನ್ನು ಬೆದರಿಸಲು ರಾಜ್ಯಸರ್ಕಾರ ದುರುದ್ದೇಶಪೂರ್ವಕವಾಗಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಪ್ರಕರಣ ದಾಖಲಿಸಿದೆ ಎಂದು ರಾಜ್ಯಸಭಾ ಚುನಾವಣೆಯ ಎನ್‍ಡಿಎ ಅಭ್ಯರ್ಥಿ ಕುಪೇಂದ್ರರೆಡ್ಡಿ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರು ನೀಡಿರುವುದು ಮತ್ತು ಕೇಸು ದಾಖಲಿಸುವ ಕ್ರಮ ಕೂಡ ಕ್ರಮಬದ್ಧವಾಗಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕರು ದೂರು ನೀಡಿದ್ದಾರೆ. ಅದರಲ್ಲಿ ಫೆ.22 ರಂದು ನಡೆಯಲಿರುವ ಚುನಾವಣೆಯಲ್ಲಿ ಎಂದು ನಮೂದಿಸಲಾಗಿದೆ. ರಾಜ್ಯಸಭೆ ಚುನಾವಣೆಯಿರುವುದು ಫೆ.27 ರಂದು. 22 ರಂದು ಯಾವ ಚುನಾವಣೆ ನಡೆಯಲಿದೆ ಎಂಬ ಬಗ್ಗೆ ನನಗಂತೂ ಮಾಹಿತಿ ಇಲ್ಲ. ಆತುರಾತುರವಾಗಿ ದೂರು ಕೊಡುವಾಗ ಈ ರೀತಿಯ ಲೋಪಗಳು ಕಂಡುಬಂದಿವೆ.

ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸಿಎಂ ಬಳಿ ಹಣವಿಲ್ಲ: ಅನಂತಕುಮಾರ್ ಹೆಗಡೆ

ವಾಸ್ತವವಾಗಿ ಚುನಾವಣೆಗೆ ಸಂಬಂಧಪಟ್ಟಂತೆ ಯಾವುದೇ ತಕರಾರುಗಳಿದ್ದರೂ ಅದನ್ನು ಆಯೋಗಕ್ಕೆ ಲಿಖಿತವಾಗಿ ತಿಳಿಸಬೇಕು. ಆಯೋಗ ಪೊಲೀಸ್ ಆಯುಕ್ತರಿಗೆ ದೂರನ್ನು ರವಾನಿಸುತ್ತಲಿದೆ. ಆಯುಕ್ತರು ಪರಿಶೀಲನೆ ನಡೆಸಿ ಮೇಲ್ನೋಟಕ್ಕೆ ಸತ್ಯಾಂಶ ಕಂಡುಬಂದಿದ್ದರೆ ಮ್ಯಾಜಿಸ್ಟ್ರೇಟ್‍ರ ಅನುಮತಿ ಪಡೆದು ಪ್ರಕರಣ ದಾಖಲಿಸಬೇಕು. ಆದರೆ ಇಲ್ಲಿ ಏಕಾಏಕಿ ಶಾಸಕರು ದೂರು ನೀಡುತ್ತಾರೆ. ಸೆಕ್ಷನ್ 506 ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ. ಇದು ಸಂಪೂರ್ಣ ನಿಯಮ ಬಾಹಿರವಾಗಿದೆ. ಈ ನಿಟ್ಟಿನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದರು.

ನನ್ನನ್ನು ಬೆದರಿಸುವ ಸಲುವಾಗಿಯೇ ಪ್ರಕರಣ ದಾಖಲಿಸಲಾಗಿದೆ. ಒಮ್ಮೆ ರಾಜ್ಯಸಭಾ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಧಿಸಿದ್ದೇನೆ. ನೆಲದ ಕಾನೂನಿನ ಅರಿವು ನನಗೂ ಇದೆ. ಇಂತಹ ಬೆದರಿಕೆಯ ತಂತ್ರಗಳಿಗೆ ನಾನು ಬಗ್ಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಮತ ಕೇಳಲು ಎಲ್ಲರಿಗೂ ಅವಕಾಶಗಳಿವೆ. ಯಾರು, ಯಾರನ್ನು ಬೇಕಾದರೂ ತಮಗೆ ಮತ ನೀಡುವಂತೆ ಮನವಿ ಮಾಡಬಹುದು.

ಒಂದು ವೇಳೆ ಈ ರೀತಿ ಮತ ಕೇಳಿದ್ದಕ್ಕೆಲ್ಲಾ ಪ್ರಕರಣ ದಾಖಲಿಸುತ್ತಾ ಹೋದರೆ ಮುಂದಿನ ದಿನಗಳಲ್ಲಿ ಚುನಾವಣೆ ಮತ್ತು ರಾಜಕೀಯ ಬೇರೆಯದೇ ಸ್ವರೂಪವನ್ನು ಪಡೆದುಕೊಳ್ಳುತ್ತದೆ ಎಂದು ಹೇಳಿದರು. ನನಗೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ. ಈ ಹಿಂದೆ ನಾನು ಸ್ರ್ಪಧಿಸಿದ್ದಾಗ ಇದೇ ಕಾಂಗ್ರೆಸ್ಸಿಗರು ತಮ್ಮ ಪಕ್ಷದ ಶಾಸಕರನ್ನು ಸೆಳೆದುಕೊಂಡು ಅಡ್ಡ ಮತದಾನ ಮಾಡಿಸಿ ನನ್ನನ್ನು ಸೋಲಿಸಿದರು. ಮತ್ತೊಂದು ಬಾರಿ ಜೆಡಿಎಸ್‍ನ ಆರೇಳು ಶಾಸಕರನ್ನು ಕಾಂಗ್ರೆಸಿಗರು ಸೆಳೆದುಕೊಂಡಿದ್ದರು. ಅದನ್ನು ಶಾಸಕರ ಖರೀದಿ ಎಂದು ಹೇಳಲು ಸಾಧ್ಯವೇ ಎಂದು ಕುಪೇಂದ್ರರೆಡ್ಡಿ ಪ್ರಶ್ನಿಸಿದರು.

ಮಂಡ್ಯ ಕ್ಷೇತ್ರದಿಂದ ಸುಮಲತಾ ಕಣಕ್ಕೆ ಇಳಿಯುವುದು ಫಿಕ್ಸ್..!

ನಾನು ಈ ಬಾರಿ ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲೇ ಸ್ಪರ್ಧೆ ಮಾಡಿದ್ದೇನೆ. ಸೋಲು-ಗೆಲುವು ಅನಂತರದ ವಿಚಾರ. ಈ ಬಾರಿಯೂ ಸೋಲಿಸುವುದಾದರೆ ಸೋಲಿಸಲಿ ಎಂದು ಹೇಳಿದ ಕುಪೇಂದ್ರರೆಡ್ಡಿಯವರು, ಕಾಂಗ್ರೆಸ್‍ನಲ್ಲೂ ನನಗೆ ಬಹಳಷ್ಟು ಸ್ನೇಹಿತರಿದ್ದಾರೆ. ಅವರಿಂದ ನಾನು ಆತ್ಮಸಾಕ್ಷಿ ಮತ ಕೇಳುತ್ತೇನೆ ಎಂದು ಹೇಳಿದರು.

ಹಿನ್ನೆಲೆ : ರಾಜ್ಯಸಭೆ ಚುನಾವಣೆಯಲ್ಲಿ 4 ಸ್ಥಾನಗಳನ್ನು ಮಾತ್ರ ಗೆಲ್ಲಲು ಅವಕಾಶವಿದ್ದು, ಜೆಡಿಎಸ್-ಬಿಜೆಪಿ ಜಂಟಿಯಾಗಿ ಕುಪೇಂದ್ರರೆಡ್ಡಿಯವರನ್ನು 5ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿವೆ. ಕಾಂಗ್ರೆಸ್‍ನ ಶಾಸಕ ಗಣಿಗ ರವಿಕುಮಾರ್ ವಿಧಾನಸೌದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಂಖ್ಯಾಬಲದ ಕೊರತೆಯಿದ್ದರೂ ಕುಪೇಂದ್ರರೆಡ್ಡಿಯವರು ಪಕ್ಷೇತರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಹಲವು ಶಾಸಕರನ್ನು ಸಂಪರ್ಕಿಸಿ ಆಮಿಷವೊಡ್ಡುತ್ತಿದ್ದು, ಅಡ್ಡ ಮತದಾನಕ್ಕೆ ಪ್ರೇರೇಪಿಸುತ್ತಿದ್ದಾರೆ ಎಂದು ದೂರಿದ್ದಾರೆ. ಇದರ ಆಧಾರದ ಮೇಲೆ ಪ್ರಕರಣವೂ ದಾಖಲಾಗಿದೆ.

RELATED ARTICLES

Latest News