ಬೆಂಗಳೂರು,ಫೆ.24- ಪತಿ-ಪತ್ನಿಯರು ಒಂದೇ ಘಟಕ ಇಲ್ಲವೇ ಒಂದೇ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಲು ನಿರಾಕರಿಸುತ್ತಿರುವುದರಿಂದ ರೋಸಿ ಹೋಗಿರುವ ರಾಜ್ಯದ ಪೊಲೀಸರು ವರ್ಗಾವಣೆ ಮಾಡಿ ಇಲ್ಲವೇ ಸಾಮೂಹಿಕ ದಯಾ ಮರಣಕ್ಕೆ ಅವಕಾಶ ನೀಡಿ ಎಂದು ಒತ್ತಾಯಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸುಮಾರು ಮೂರು ವರ್ಷಗಳಿಂದ ಪತಿ-ಪತ್ನಿ ಹಾಗೂ ಯಾವುದೇ ಅಂತರ್ ಜಿಲ್ಲಾ ವರ್ಗಾವಣೆ ಇಲ್ಲದೆ ಸಿಬ್ಬಂದಿಗಳು ಪರಿತಪಿಸುತ್ತಿದ್ದಾರೆ. ಪತಿ-ಪತ್ನಿಯರು ಒಂದೇ ಘಟಕ ಇಲ್ಲವೇ ಒಂದೇ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ ಕೆಸಿಎಸ್‍ಆರ್ ನಿಯಮವೂ ಇದೇ ಹೇಳಿದರೂ ಮೇಲಾಧಿಕಾರಿಗಳು ನಿಯಮ ಪಾಲಿಸದಿರುವುದು ನಮಗೆ ಭಾರಿ ಅನ್ಯಾಯ ಮಾಡಿದಂತಾಗಿದೆ ಎಂದು ನೊಂದ ಪೊಲೀಸರು ಪತ್ರದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸಂವಿಧಾನಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುವವರನ್ನು ಕಿತ್ತೊಗೆಯಬೇಕಿದೆ: ಸಿಎಂ ಸಿದ್ದರಾಮಯ್ಯ
ಮೂರು ವರ್ಷ ಕಳೆದರೂ ಅಂತರ್ ಜಿಲ್ಲಾ ವರ್ಗಾವಣೆ ಮಾಡುತ್ತಿಲ್ಲ ಎಂದು ನಾವು ಗೃಹ ಸಚಿವರಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಮಾಧ್ಯಮಗಳ ಮುಂದೆ ಮಾತ್ರ ಶೀಘ್ರದಲ್ಲೇ ವರ್ಗಾವಣೆ ಮಾಡುತ್ತೇವೆ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಿದ್ದಾರೆ.
ನಾವುಗಳು ಕಳೆದ 10 ರಿಂದ 15 ವರ್ಷಗಳಿಂದ ತಂದೆ-ತಾಯಿ, ಹೆಂಡತಿ ಮಕ್ಕಳನ್ನು ಬಿಟ್ಟು ಜೀವನ ಸಾಗಿಸುವಂತಾಗಿದೆ. ಹೀಗಾಗಿ ನಮ್ಮ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕೆಲವು ಪ್ರಕರಣಗಳು ವಿಚ್ಛೇದನದ ಹಂತ ತಲುಪಿವೆ ಎಂದು ಅವರುಗಳು ತಮ್ಮ ಗೋಳು ಹಂಚಿಕೊಂಡಿದ್ದಾರೆ. ಇನ್ನು ಮದುವೆಯಾಗಿ 5 ವರ್ಷ ಕಳೆದರೂ ಪತಿ-ಪತ್ನಿ ಒಂದೇ ಕಡೆ ಕೆಲಸ ಮಾಡಲು ಸಾಧ್ಯವಾಗದಿರುವುದರಿಂದ ಮಕ್ಕಳು ಆಗುತ್ತಿಲ್ಲ. ನಮ್ಮದು ಶಿಸ್ತಿನ ಇಲಾಖೆ ಬೇರೆ ಇಲಾಖೆಯವರಂತೆ ಪ್ರತಿಭಟನೆ ಮಾಡಲು ಅವಕಾಶವಿರುವುದಿಲ್ಲ. ಹೀಗಾಗಿ ನಮಗೆ ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ನೆಮ್ಮದಿ ಹಾಳಾಗಿ ನಮ್ಮ ಆರೋಗ್ಯದಲ್ಲಿ ಏರುಪೇರಾಗಿದೆ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಮಗೆ ವರ್ಗಾವಣೆ ಭಾಗ್ಯ ಕಲ್ಪಿಸಿ ಇಲ್ಲವೇ ಸಾಮೂಹಿಕ ದಯ ಮರಣಕ್ಕೆ ಅನುಮತಿ ನೀಡಿ ಎಂದು ನೂರಾರು ಪೊಲೀಸರು ರಾಷ್ಟ್ರಪತಿಗಳಿಗೆ ದಯಾ ಮರಣ ಪತ್ರ ಬರೆದು ಒತ್ತಾಯಿಸಿದ್ದಾರೆ.