ಬೆಂಗಳೂರು,ಫೆ.26- ರೈತರೊಬ್ಬರು ಕೊಳೆ ಬಟ್ಟೆ ಹಾಕಿದ್ದಾರೆ ಎಂಬ ಕಾರಣಕ್ಕೆ ಮೆಟ್ರೊ ಪ್ರಯಾಣಕ್ಕೆ ನಿರಾಕರಿಸಿದ ಭದ್ರತಾ ಸಿಬ್ಬಂದಿಗಳಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ರಾಜಾಜಿನಗರದಲ್ಲಿ ನಡೆದಿದ್ದು, ವ್ಯಾಪಕ ಆಕ್ರೋಶಗಳ ಬೆನ್ನಲ್ಲೇ ಬಿಎಂಆರ್‍ಸಿಎಲ್ ಭದ್ರತಾ ಮೇಲ್ವಿಚಾರಕರನ್ನು ಕೆಲಸದಿಂದ ವಜಾಗೊಳಿಸಿದೆ.
ಹಿರಿಯ ರೈತರೊಬ್ಬರು ಮೆಟ್ರೊದಲ್ಲಿ ಪ್ರಯಾಣಿಸಲು ರಾಜಾಜಿನಗರ ನಿಲ್ದಾಣಕ್ಕೆ ಆಗಮಿಸಿದರು. ಟಿಕೆಟ್ ಕೂಡ ಖರೀದಿಸಿದ್ದರು. ಆದರೆ ಅವರ ಬಟ್ಟೆ ಕೊಳೆಯಾಗಿದೆ, ತಲೆ ಮೇಲೆ ಗಂಟು ಹೊತ್ತುಕೊಂಡಿದ್ದಾರೆ. ಇತರ ಪ್ರಯಾಣಿಕರಿಗೆ ಮುಜುಗರವಾಗುತ್ತದೆ ಎಂಬ ಕಾರಣಕ್ಕೆ ರೈತರಿಗೆ ಪ್ರಯಾಣಿಸಲು ಭದ್ರತಾ ಸಿಬ್ಬಂದಿ ಅವಕಾಶ ನಿರಾಕರಿಸಿದರು.
ಇದನ್ನು ಗಮನಿಸಿದ ಸಹಪ್ರಯಾಣಿಕರು ಮಧ್ಯಪ್ರವೇಶಿಸಿ ಭದ್ರತಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ರೈತರು ತಂದಿರುವ ಗಂಟಿನಲ್ಲಿ ಬಟ್ಟೆ ಹೊರತುಪಡಿಸಿ ಬೇರೆ ಯಾವ ಅಪಾಯಕಾರಿ ವಸ್ತುಗಳೂ ಇಲ್ಲ. ಒಂದು ವೇಳೆ ಸುರಕ್ಷತೆಗೆ ಧಕ್ಕೆಯಾಗುವಂತ ವಸ್ತುಗಳಿದ್ದರೆ ಅದನ್ನು ಕಿತ್ತು ಬಿಸಾಕಿ ಅಥವಾ ಪ್ರಯಾಣಕ್ಕೆ ನಿರಾಕರಿಸಿ.
ಬಟ್ಟೆ ಕೊಳೆಯಾಗಿದೆ ಎಂಬ ಕಾರಣಕ್ಕೆ ಅವರನ್ನು ಒಳಗೆ ಬಿಡುವುದಿಲ್ಲವೆಂದರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ರಷ್ಯಾ ಸೇನೆಯಿಂದ ಭಾರತೀಯರ ಬಿಡುಗಡೆ
ಬೆಂಗಳೂರು ಮೆಟ್ರೊ ವಿವಿಐಪಿ ಸಾರಿಗೆ ವ್ಯವಸ್ಥೆ ಅಲ್ಲ. ನಾವು ತಣಮಣ ಹೊಳೆಯುವ ಬಟ್ಟೆಗಳನ್ನೇ ಧರಿಸಿದ್ದೇವೆ ಅಂದಮಾತ್ರಕ್ಕೆ ನಮಗೆ ಉಚಿತ ಪ್ರಯಾಣದ ಸೌಲಭ್ಯವಿದೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರನ್ನು ಸಹ ಪ್ರಯಾಣಿಕರು ತಮ್ಮೊಂದಿಗೆ ಕರೆದುಕೊಂಡು ಹೋಗಲು ಮುಂದಾದಾಗ ಸಿಬ್ಬಂದಿ ಮತ್ತೆ ಅಡ್ಡಿಪಡಿಸಿದ್ದಾರೆ. ಈ ವೇಳೆ ಹಲವಾರು ಸಾರ್ವಜನಿಕರು ಮಧ್ಯಪ್ರವೇಶಿಸಿದ್ದು, ಸಿಬ್ಬಂದಿಗಳ ವರ್ತನೆಗೆ ಕಿಡಿಕಾರಿದ್ದಾರೆ.
ಕೊನೆಗೆ ಸಾರ್ವಜನಿಕರ ಒತ್ತಡಕ್ಕೆ ಮಣಿದು ಸಿಬ್ಬಂದಿ ರೈತರ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅದರ ಬೆನ್ನಲ್ಲೇ ಸಿಬ್ಬಂದಿಗಳ ವರ್ತನೆಯನ್ನು ಸ್ಥಳೀಯರು ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದಾರೆ. ಈ ವಿಡಿಯೋ ವ್ಯಾಪಕ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭದ್ರತಾ ಸಿಬ್ಬಂದಿಗಳ ವರ್ತನೆಗೆ ಖಂಡನೆ ವ್ಯಕ್ತವಾಗಿವೆ.
ಎಚ್ಚೆತ್ತುಕೊಂಡ ಬಿಎಂಆರ್‍ಸಿಎಲ್ ನಮ್ಮ ಮೆಟ್ರೊ ಸಾರ್ವಜನಿಕ ಸಾರಿಗೆಯಾಗಿದ್ದು, ರಾಜಾಜಿನಗರ ಘಟನೆಯ ಕುರಿತು ತನಿಖೆ ನಡೆಸಿ ಭದ್ರತಾ ಮೇಲ್ವಿಚಾರಕರ ಸೇವೆಯನ್ನು ವಜಾಗೊಳಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಿಗಮ ವಿಷಾದಿಸುತ್ತದೆ ಎಂದು ತಿಳಿಸಿದೆ.