Homeರಾಜ್ಯ3,991 ಸಿವಿಲ್‌ ಪೊಲೀಸ್‌‍ ಕಾನ್‌ಸ್ಟೇಬಲ್‌ ಹುದ್ದೆಗಳ ನೇಮಕಾತಿಗೆ ನಾಳೆ ಲಿಖಿತ ಪರೀಕ್ಷೆ

3,991 ಸಿವಿಲ್‌ ಪೊಲೀಸ್‌‍ ಕಾನ್‌ಸ್ಟೇಬಲ್‌ ಹುದ್ದೆಗಳ ನೇಮಕಾತಿಗೆ ನಾಳೆ ಲಿಖಿತ ಪರೀಕ್ಷೆ

ಬೆಂಗಳೂರು,ಆ.1- ರಾಜ್ಯ ಪೊಲೀಸ್‌‍ ಇಲಾಖೆಯಲ್ಲಿನ ಖಾಲಿ ಇರುವ ಒಟ್ಟು 3,991 ಸಿವಿಲ್‌ ಪೊಲೀಸ್‌‍ ಕಾನ್‌ಸ್ಟೇಬಲ್‌ ಹುದ್ದೆ ಭರ್ತಿಗೆ ನಾಳೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಲಿಖಿತ ಪರೀಕ್ಷೆ ನಡೆಸುತ್ತಿದ್ದು, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದೆ.ಬೆಂಗಳೂರು ನಗರದಲ್ಲಿ 149 ಕೇಂದ್ರ ಸೇರಿದಂತೆ ರಾಜ್ಯದ ಒಟ್ಟು 884 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆ ಜಾರಿ ಮಾಡಲಾಗಿದೆ.

ಉಳಿಕೆ ಮೂಲ ವೃಂದದ 3,395 ಹುದ್ದೆ ಹಾಗೂ ಕಲ್ಯಾಣ ಕರ್ನಾಟಕ ವೃಂದದ 596 ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. ಉಳಿಕೆ ಮೂಲ ವೃಂದದ 3,77,861 ಹಾಗೂ ಕಲ್ಯಾಣ ಕರ್ನಾಟಕ ವೃಂದದ 76,684 ಮಂದಿ ಅರ್ಜಿ ಸಲ್ಲಿಸಿದ್ದು, ಅವರೆಲ್ಲರಿಗೂ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ.ನಾಳೆ ಬೆಳಗ್ಗೆ 10.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ರಾಜ್ಯದ ಎಲ್ಲರಿಗೂ ಪರೀಕ್ಷೆ ನಡೆಯಲಿದ್ದು, ಸಂಜೆ 4 ರಿಂದ 5.30 ರ ವರೆಗೆ ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯಲಿದೆ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ಚಿಕ್ಕಬಳ್ಳಾಪುರ: 9 ಕೇಂದ್ರಗಳಲ್ಲಿ ಪರೀಕ್ಷೆ
ಕರ್ನಾಟಕ ರಾಜ್ಯ ಪೊಲೀಸ್‌‍ ಇಲಾಖೆಯಲ್ಲಿನ ಖಾಲಿ ಇರುವ ಸಿವಿಲ್‌ ಪೊಲೀಸ್‌‍ ಕಾನ್‌ಸ್ಟೇಬಲ್‌ ಹ್ದುೆಗಳ ನೇಮಕಾತಿಗೆ ಸಂಬಂಧಿಸಿದ ಲಿಖಿತ ಪರೀಕ್ಷೆಯು ನಾಳೆ ನಗರದ 9 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಿ. ಪ್ರಭು ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿ ತಿಳಿಸಿರುವ ಅವರು, ನಾಳೆ ಬೆಳಗ್ಗೆ 10.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಬೆಳಗ್ಗೆ 8 ಗಂಟೆಗೆ ಆಯಾ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಿ ಕಡ್ಡಾಯ ಭದ್ರತಾ ತಪಾಸಣೆಗೆ ಒಳಪಟ್ಟ ನಂತರ ತಮ ಪರೀಕ್ಷಾ ಕೊಠಡಿಗಳಿಗೆ ತೆರಳಬೇಕಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶನದಂತೆ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶಿಸುವ ಮೊದಲು ಅಭ್ಯರ್ಥಿಗಳಿಗೆ ಕಟ್ಟುನಿಟ್ಟಿನ ಭದ್ರತಾ ತಪಾಸಣೆ ನಡೆಸಲಾಗುತ್ತದೆ. ನಿಷೇಧಿತ ವಸ್ತುಗಳನ್ನು ಪರೀಕ್ಷಾ ಕೇಂದ್ರದೊಳಗೆ ತರಲು ಅವಕಾಶವಿರುವುದಿಲ್ಲ.ಧಾರ್ಮಿಕ ಉಡುಪು ಧರಿಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕೂ ಎರಡು ಗಂಟೆಗಳ ಮುನ್ನ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ವಿಶೇಷ ತಪಾಸಣೆಗೆ ಒಳಗಾಗಬೇಕು.

ಜನಿವಾರ ಹಾಗೂ ಶಿವದಾರ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.ಎಲ್ಲಾ ಅಭ್ಯರ್ಥಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮೇಲ್ಕಂಡ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಪರೀಕ್ಷೆ ಸುಗಮವಾಗಿ ನಡೆಯಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಅವರು ನೀಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Latest News