Friday, November 22, 2024
Homeರಾಜ್ಯರಣರಂಗವಾದ ಪರಿಷತ್ : ಏಕವಚನದಲ್ಲೇ ವಾಗ್ದಾಳಿ

ರಣರಂಗವಾದ ಪರಿಷತ್ : ಏಕವಚನದಲ್ಲೇ ವಾಗ್ದಾಳಿ

ಬೆಂಗಳೂರು,ಫೆ.28- ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾನೆ. ಅವನ ಬಾಯಿ ಮುಚ್ಚಿಸಿ ಎಂದು ಅಬ್ದುಲ್ ಜಬ್ಬರ್ ಬಿಜೆಪಿಯ ಎನ್.ರವಿಕುಮಾರ್ ಕುರಿತು ಬಳಸಿದ ಏಕವಚನ ಪದ ಪ್ರಯೋಗದಿಂದ ವಿಧಾನಪರಿಷತ್ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತು. ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು, ಮುಖ್ಯ ಸಚೇತಕ ಎನ್.ರವಿಕುಮಾರ್ ಅವರಿಗೆ ಮಾತನಾಡಲು ಅವಕಾಶ ನೀಡಿದ್ದರು.

ಮಾತನಾಡುವ ವೇಳೆ ರವಿಕುಮಾರ್, ಇದು ದೇಶದ್ರೋಹಿ ಸರ್ಕಾರ. ಅಧಿಕಾರದಲ್ಲಿ ಮುಂದುವರೆಯಲು ಯಾವುದೇ ನೈತಿಕತೆ ಇಲ್ಲ. ಇಂಥ ನಿಷ್ಕ್ರಿಯ ಸರ್ಕಾರ ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ ಆದ್ದರಿಂದ ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು. ಆಗ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಇದರ ನಡುವೆ ಅಬ್ದುಲ್ ಜಬ್ಬರ್ ಎದ್ದು ನಿಂತು, ಇವನು ಮಾತೇತ್ತಿದ್ದರೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಾನೆ. ಮೊದಲು ಇವನ ಬಾಯಿ ಬಂದ್ ಮಾಡಿ ಎಂದಿದ್ದು, ವಿವಾದಕ್ಕೆ ಬೆಂಕಿಗೆ ತುಪ್ಪ ಸುರಿದಂತೆ ಮಾಡಿತು.

ಏಕವಚನದಲ್ಲಿ ಮಾತನಾಡಿದರೆ ಸರಿ ಇರುವುದಿಲ್ಲ. ಗೌರವ ಕೊಟ್ಟು , ಗೌರವ ತೆಗೆದುಕೊಳ್ಳಿ. ಇಲ್ಲದಿದ್ದರೆ ನೆಟ್ಟಗಿರುವುದಿಲ್ಲ ಎಂದು ರವಿಕುಮಾರ್ ಏರಿದ ಧ್ವನಿಯಲ್ಲಿ ಅಬ್ಬರಿಸುತ್ತಾ ಪ್ರತಿಪಕ್ಷಗಳ ಸದಸ್ಯರತ್ತ ಮುನ್ನುಗ್ಗಿದರು. ಇದಕ್ಕೆ ಸಾಥ್ ನೀಡಿದ ತುಳಸಿ ಮುನಿರಾಜು ಗೌಡ, ತಾಕತ್ತಿದ್ದರೆ ಬಾ ಎನ್ನುತ್ತಲೇ ಅಬ್ದುಲ್ ಜಬ್ಬರ್ ವಿರುದ್ದ ಮುಗಿಬಿದ್ದರು. ಆಗ ಬಿಜೆಪಿಯ ಶಾಸಕರು ಸದನದ ಬಾವಿಗೆ ನುಗ್ಗಿ ಏಕವಚನದಲ್ಲಿ ಮಾತನಾಡಿರುವ ಜಬ್ಬರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಒಂದು ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ನಿರ್ಮಾಣವಾಯಿತು. ಸಭಾಪತಿ ಪೀಠದ ಎದುರೇ ಬಿಜೆಪಿ ಸದಸ್ಯರು ಜಬ್ಬರ್ ವರ್ತನೆಗೆ ಕೆಂಡಕಾರಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಸಭಾನಾಯಕ ಭೋಸ್‍ರಾಜ್, ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಮತ್ತಿತರರು ಪರಿಸ್ಥಿತಿಯನ್ನು ನಿಭಾಯಿಸಲು ಹರಸಾಹಸಪಟ್ಟರು.

ಪಾಕಿಸ್ತಾನ ಪರ ಘೋಷಣೆ : ವಿಧಾನಪರಿಷತ್‍ನಲ್ಲೂ ಕೋಲಾಹಲ

ಜಬ್ಬಾರ್ ವಿರುದ್ಧ ಇಡೀ ಬಿಜೆಪಿ ಸದಸ್ಯರು ಮುಗಿಬಿದ್ದರು. ಆಗ ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಗಮನಿಸಿದ ಸಭಾಪತಿಗಳು, ಸದನವನ್ನು ಕೆಲಕಾಲ ಮುಂದೂಡಿದರು. ಇದಕ್ಕೂ ಮುನ್ನ ಮಾತನಾಡಿದ ರವಿಕುಮಾರ್, ಇದು ದೇಶದ್ರೋಹಿ ಸರ್ಕಾರ. ಪ್ರಕರಣ ನಡೆದು ಹಲವು ಗಂಟೆಗಳಾಗಿದ್ದರೂ ಯಾರನ್ನೂ ಬಂಧಿಸಿಲ್ಲ. ಕೇವಲ ನೆಪ ಮಾತ್ರಕ್ಕೆ ದೂರು ದಾಖಲಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಮಾಧ್ಯಮಗಳು ಸರ್ಕಾರವನ್ನು ನೇಣಿಗೆ ಹಾಕಲು ಮುಂದಾಗಿವೆ : ಪ್ರಿಯಾಂಕ್ ಖರ್ಗೆ

ದೇಶದ್ರೋಹಿ ಸರ್ಕಾರ ಎಂದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಹರಿಪ್ರಸಾದ್ ಕ್ರಿಯಾಲೋಪ ಎತ್ತಿದರು. ಸದಸ್ಯ ರವಿಕುಮಾರ್ ನಮ್ಮ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಿಮ್ಮ ಪ್ರಧಾನಿ ನರೇಂದ್ರಮೋದಿಗೆ ತಾಕತ್ತಿದ್ದರೆ ನಮ್ಮ ಸರ್ಕಾರದ ವಿರುದ್ಧ ದೂರು ದಾಖಲಿಸಲು ಹೇಳಿ ಇಲ್ಲದಿದ್ದರೆ ಸದಸ್ಯರ ಮೇಲೆ ದೂರು ದಾಖಲಿಸಬೇಕಾಗುತ್ತದೆ ಎಂದು ಆಗ್ರಹಿಸಿದರು. ಆಗ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಭಾರೀ ಗದ್ದಲ ಉಂಟಾಯಿತು. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಸಭಾಪತಿ ಹೊರಟ್ಟಿ ಅವರು ನೀವು ಇದೇ ರೀತಿ ವರ್ತಿಸಿದರೆ ಸದನವನ್ನು ನಾನು ಮುಂದೂಡುತ್ತೇನೆ ಎಂದು ಎಚ್ಚರಿಕೆ ಕೊಟ್ಟರು.

RELATED ARTICLES

Latest News