ಬೆಂಗಳೂರು,ಫೆ.29- ವಿಧಾನಸೌಧದಲ್ಲಿ ಪಾಕಿ ಸ್ತಾನದ ಪರ ಘೋಷಣೆ ಕೂಗಿದವರನ್ನು ಬಂಸಬೇಕು. ಆ ಘಟನೆಯ ನೈತಿಕ ಹೊಣೆ ಹೊತ್ತು ಸರ್ಕಾರ ರಾಜೀನಾಮೆ ನೀಡಬೇಕೆಂದು ನಿನ್ನೆ ವಿಧಾನಸಭೆಯಲ್ಲಿ ನಡೆಸಿದ ಪ್ರತಿಭಟನೆಯನ್ನು ಇಂದು ಮುಂದುವರೆಸಿದ ಬಿಜೆಪಿ ಶಾಸಕರು, ಕಾಗಪತ್ರಗಳನ್ನು ಹರಿದು ತೂರಿ, ಸರ್ಕಾರದ ವಿರುದ್ಧ ಕೆಲಕಾಲ ಘೋಷಣೆ ಕೂಗಿ ಸಭಾತ್ಯಾಗ ಮಾಡಿದರು.
ಇಂದು ಬೆಳಗ್ಗೆ ಸದನ ಸಮಾವೇಶಗೊಂಡಾಗ ಬಿಜೆಪಿಯ ಶಾಸಕರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಯಲ್ಲಿ ಧರಣಿ ಮುಂದುವರೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಇಡೀ ಪ್ರಪಂಚವೇ ನಮ್ಮ ಕಡೆ ನೋಡುತ್ತಿದೆ. ಆದರೂ ದೇಶದ್ರೋಹಿಗಳ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಯಾರನ್ನೂ ಬಂಧಿಸಿಲ್ಲ. ಸರ್ಕಾರ ಮೌನವಾಗಿದೆ. ಹೀಗಾದರೆ ರಾಜ್ಯದ ಜನತೆಗೆ ಯಾವ ಸಂದೇಶ ರವಾನೆಯಾಗುತ್ತದೆ. ರಕ್ಷಣೆ ಕೊಡಲಿ ಎಂಬ ಉದ್ದೇಶದಿಂದ ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ವಿಧಾನಸೌಧ ಉಗ್ರರ ತಾಣವಾಗಲು ಬಿಡಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಈ ವಿಚಾರದ ಬಗ್ಗೆ ನಿನ್ನೆ ಚರ್ಚೆಯಾಗಿದೆ. ಸರ್ಕಾರವು ಉತ್ತರ ಕೊಟ್ಟಿದೆ. ಘಟನೆ ಬಗ್ಗೆ ತನಿಖೆ ಕೈಗೊಂಡಿರುವುದಾಗಿ ಹೇಳಿದೆ. ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿಗಳು ಉತ್ತರ ಕೊಡುತ್ತಾರೆ. ಧರಣಿ ಕೈಬಿಟ್ಟು ಸುಗಮ ಕಲಾಪಕ್ಕೆ ಸಹಕಾರ ಕೊಡಬೇಕು ಎಂದರು. ಆಗ ಆರ್.ಅಶೋಕ್ ಅವರು, ಕೋಲಾರದಲ್ಲಿ ಈ ಹಿಂದೆ ದಲಿತರನ್ನು ಸುಟ್ಟು ಹಾಕಿದರು. ಆಗ ಗೃಹಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಸಭೆಯಲ್ಲಿ ಕಣ್ಣೀರು ಹಾಕಿದರು. ಅದು ಅವರ ಕಳಕಳಿ. ಆದರೆ ಈ ಸರ್ಕಾರಕ್ಕೆ ಯಾವುದೇ ಜವಾಬ್ದಾರಿ ಇಲ್ಲ. ನೈತಿಕ ಹೊಣೆ ಹೊತ್ತಿಲ್ಲ ಎಂದು ಆರೋಪಿಸಿದರು.
ಏಳು ಜನರ ಹೇಳಿಕೆ: ಮಧ್ಯಪ್ರವೇಶಿಸಿದ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ವಿರೋಧ ಪಕ್ಷದ ನಾಯಕರು ಪ್ರಸ್ತಾಪಿಸಿದ ವಿಚಾರದ ಬಗ್ಗೆ ನಿನ್ನೆ ಉತ್ತರ ನೀಡಲಾಗಿದೆ. ಆ ಘಟನೆಗೆ ಸಂಬಂಧಿಸಿದಂತೆ ಏಳು ಜನರನ್ನು ಕರೆದು ವಿಚಾರ ಮಾಡಿ ಅವರ ಹೇಳಿಕೆ ಪಡೆಯಲಾಗಿದೆ. ತನಿಖೆ ಮುಂದುವರೆದಿದೆ. ಒಂದೊಂದು ಮಾಧ್ಯಮ ಒಂದೊಂದು ರೀತಿ ಹೇಳಿವೆ. ಅದರ ನೈಜ್ಯತೆ ತಾಂತ್ರಿಕವಾಗಿ ತಿಳಿಯಲು ವಿವಿಜ್ಞಾನ ಪ್ರಯೋಗಾಲಯದ ವರದಿ ಕೇಳಲಾಗಿದೆ. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ.
ಒಂದು ವೇಳೆ ಆರೋಪಿಸಿದಂತೆ ಪಾಕಿಸ್ತಾನದ ಪರ ಘೋಷಣ ಕೂಗಿದ್ದೇ ಆದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.ಆದರೂ ತೃಪ್ತರಾಗದ ಬಿಜೆಪಿ ಶಾಸಕರು ಧರಣಿ ಮುಂದುವರೆಸಿ ಘೋಷಣೆ ಕೂಗಿ ಗದ್ದಲ ಎಬ್ಬಿಸಿದರು. ಆಗ ಮಾತನಾಡಿದ ಸಭಾಧ್ಯಕ್ಷರು, ಬಡವರು ಹಸಿದ ಹೊಟ್ಟೆಯಲ್ಲೇ ಇರಬೇಕೆ. ಜನಸಾಮಾನ್ಯರ ವಿಚಾರಗಳು ಚರ್ಚೆಯಾಗಬೇಕಲ್ಲವೇ ಎಂದು ಹೇಳಿದರು. ಅದಕ್ಕೂ ಕಿವಿಗೊಡದ ಪ್ರತಿಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.ಮತ್ತೆ ಮಾತನಾಡಿದ ಅಶೋಕ್, ಘೋಷಣೆ ಕೂಗಿದ ಘಟನೆಗೆ ಸಂಬಂಧಿಸಿದಂತೆ ಕರೆದು ಮಾತನಾಡಿ ಕಳುಹಿಸಿದ್ದಾರೆ. ಅದರ ಬದಲು ಬಿರಿಯಾನಿ ಕೊಟ್ಟು ಶಾಲು ಹೊದಿಸಿ ಸನ್ಮಾನ ಮಾಡಬೇಕಿತ್ತು ಎಂದು ವ್ಯಂಗ್ಯವಾಡಿದರು.
ಅವರ ಮೇಲೆ ದೇಶದ್ರೋಹದ ಕೇಸ್ ಹಾಕಿಲ್ಲ. ಅವರನ್ನು ಬಂಧಿಸಿಲ್ಲ. ಸರ್ಕಾರಕ್ಕೆ ಯಾವ ನೈತಿಕತೆ ಇದೆ. ದೇಶ ಉಳಿಯಬೇಲ್ಲವೇ ಎಂದು ಆಕ್ಷೇಪಿಸಿದರು. ಮುಖ್ಯಮಂತ್ರಿಗಳ ಮನವಿಗೂ ಬಿಜೆಪಿ ಸದಸ್ಯರು ಮಣಿಯದಿದ್ದಾಗ ಸಭಾಧ್ಯಕ್ಷರು ಉತ್ತರ ನೀಡಲು ಮುಖ್ಯಮಂತ್ರಿಗಳನ್ನು ಆಹ್ವಾನಿಸಿದರು. ಒಂದೆಡೆ ಮುಖ್ಯಮಂತ್ರಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುತ್ತಿದ್ದರೆ ಮತ್ತೊಂದೆಡೆ ಬಿಜೆಪಿ ಶಾಸಕರು ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಾಗದಪತ್ರಗಳನ್ನು ಹರಿದು ಸಭಾಧ್ಯಕ್ಷರ ಪೀಠದತ್ತ ತೂರಿ ಗದ್ದಲವನ್ನುಂಟು ಮಾಡಿದರು.
ಜೆಡಿಎಸ್ ಸದಸ್ಯರು ಕೂಡ ಧರಣಿಯಲ್ಲಿ ಭಾಗಿಯಾಗಿ ಬಿಜೆಪಿ ಶಾಸಕರ ಪ್ರತಿಭಟನೆಗೆ ಬೆಂಬಲ ನೀಡಿದರು. ಕೆಲಕಾಲ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಗದ್ದಲವೆಬ್ಬಿಸಿದರು. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಚಲಿತರಾಗದೆ ಉತ್ತರವನ್ನು ಮುಂದುವರೆಸಿದರು. ಇದರಿಂದ ತೀವ್ರ ಅಸಮಾಧಾನಗೊಂಡ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದರು. ಜೆಡಿಎಸ್ ಸದಸ್ಯರು ಕೂಡ ಇವರನ್ನು ಹಿಂಬಾಲಿಸಿದರು.