ಬೆಂಗಳೂರು,ಮಾ.1-ವಿಶ್ವದ ಬದುಕು ಸಂಸ್ಕೃತಿ ತಿಳಿಯಲು ಮತ್ತು ನಮ್ಮ ಸಮಾಜವನ್ನು ಇನ್ನಷ್ಟು ಮಾನವೀಯಗೊಳಿಸಲು ಅಂತಾರಾಷ್ಟ್ರೀಯ ಚಿತ್ರೋತ್ಸವ ನೆರವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು. ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ನಲ್ಲಿ 15 ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಇಡಿ ಜಗತ್ತು ಮಾನವೀಯ ಬೆಸುಗೆಯಲ್ಲಿ ಬೆರೆಯಲು, ಮನುಷ್ಯ ಮನುಷ್ಯನನ್ನು ಪ್ರೀತಿಸುವ ಸಂಸ್ಕೃತಿಯನ್ನು ಪಾಲಿಸಿದಾಗ ಜಗತ್ತಲ್ಲಿ ಶಾಂತಿ ನೆಲೆಸುತ್ತದೆ. ಸಿನೆಮಾ ಬಹಳ ಪ್ರಭಾವಿ ಮಾಧ್ಯಮ. ನೋಡುಗರ ಮನಸ್ಸು, ಆಲೋಚನೆಯ ಮೇಲೆ ಪ್ರಭಾವ ಬೀರುವ ಶಕ್ತಿ ಸಿನಿಮಾಗಿದೆ. ಸಿನಿಮಾಗಳ ಮೂಲಕ ದೇಶದ ಒಳಗಿನ, ಇತರೆ ದೇಶಗಳ ಜನ ಸಂಸ್ಕೃತಿಯನ್ನು ಅರಿಯುವ ಮತ್ತು ಆ ಮೂಲಕ ನಮ್ಮ ಮಾನವೀಯ ಸಂಸ್ಕೃತಿಯನ್ನು ವಿಸ್ತರಿಸಿಕೊಳ್ಳಲು ನೆರವಾಗುತ್ತದೆ. ಇದಕ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ವೇಗವರ್ದಕವಾಗಿ ಕೆಲಸ ಮಾಡುತ್ತದೆ ಎಂದರು.
ಅಂಬೇಡ್ಕರ್ ಅವರ ಸಂವಿಧಾನ ಇತರೆ ದೇಶಗಳ ಸಂವಿಧಾನದಲ್ಲಿ ಇಲ್ಲದ ಸಾಮಾಜಿಕ ನ್ಯಾಯದ ಮೌಲ್ಯಗಳಿವೆ. ಅಂಬೇಡ್ಕರ್ ಮತ್ತು ಇವರ ಮೌಲ್ಯಗಳ ಕುರಿತಾದ ಸಿನಿಮಾಗಳಿಗೆ ಅಗತ್ಯವಾದ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು. ಕುವೆಂಪು ಅವರ ವಿಶ್ವ ಮಾನವ ಸಂಸ್ಕೃತಿಯನ್ನು ವಿಶ್ವದಲ್ಲಿ ಹೆಚ್ವೆಚ್ವು ಪಾಲಿಸುವಂಥಾ ವಾತಾವರಣ ಸೃಷ್ಟಿಯಾಗಬೇಕು. ಇದಕ್ಕೆ ವಿಶ್ವ ಸಿನಿಮಾಗಳು ನೆರವಾಗುತ್ತವೆ ಎಂದರು.
2019 ರಿಂದ ಉತ್ತಮ ಸಿನಿಮಾ ಆಯ್ಕೆಗೆ ಸಮಿತಿ ರಚಿಸಿದ್ದೇವೆ
2019 ರಿಂದ ಚಲನಚಿತ್ರ ಪ್ರಶಸ್ತಿಗಳನ್ನು ಕೊಟ್ಟಿಲ್ಲ. ನಾವು ಆ ಎಲ್ಲಾ ಬಾಕಿ ಉಳಿದಿರುವ ಎಲ್ಲಾ ವರ್ಷಗಳ ಉತ್ತಮ ಸಿನಿಮಾಗಳ ಆಯ್ಕೆಗೆ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿ ವರದಿ ಕೊಟ್ಟ ತಕ್ಷಣ ಪ್ರಶಸ್ತಿಗಳನ್ನು ಘೋಷಿಸಲಾಗುವುದು ಎಂದರು. ಸಭಾಪತಿಗಳಾದ ಬಸವರಾಜ ಹೊರಟ್ಟಿ, ಶ್ರೇಷ್ಠ ನಟ ಶಿವರಾಜ್ ಕುಮಾರ್, ಅಂತಾರಾಷ್ಟ್ರೀಯ ಚಿತ್ರೋತ್ಸವದ ರಾಯಭಾರಿಯಾದ ನಟ ಡಾಲಿ ಧನಂಜಯ್, ಖ್ಯಾತ ನಿರ್ದೇಶಕ ಜಬ್ಬಾರ್ ಪಟೇಲ್, ಚೆಕ್ ರಿಪಬ್ಲಿಕ್ ದೇಶದ ಚಿತ್ರ ವಿಮರ್ಷಕರಾದ ಮೆಯೆರಾ ಲಾಂಗೆರೊವಾ, ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾದ ವಿದ್ಯಾಶಂಕರ್, ನಟಿ ಆರಾಧನಾ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಆರಾಧನಾ, ಚಲನಚಿತ್ರ ಅಕಾಡೆಮಿಯ ನಿಯೋಜಿತ ಅಧ್ಯಕ್ಷರಾದ ಸಾಧು ಕೋಕಿಲಾ, ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್.ಎಂ.ಸುರೇಶ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.