ಬೆಂಗಳೂರು,ಮಾ.2- ನಗರದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಸ್ಪೋಟಿಸಿ ಪರಾರಿಯಾಗಿರುವ ಉಗ್ರ ಯಾರೆಂಬುದು ಈತನಕ ನಗರ ಪೊಲೀಸರಿಗೆ ತಿಳಿದುಬಂದಿಲ್ಲ. ಆತನ ಗುರುತು ಪತ್ತೆಗಾಗಿ ನಗರ ಪೊಲೀಸರು ಮತ್ತು ಕೇಂದ್ರ ತನಿಖಾ ತಂಡಗಳು ಹರಸಾಹಸ ಪಡುತ್ತಿವೆ. ಸುಮಾರು 25 ರಿಂದ 30 ವರ್ಷದ ಉಗ್ರ ನಿನ್ನೆ ಮಧ್ಯಾಹ್ನ ಸುಮಾರು 12 ಗಂಟೆಯಲ್ಲಿ ಮೊದಲೇ ಮಾಡಿಕೊಂಡ ಸಂಚಿನಂತೆ ತನ್ನ ಗುರುತು ಯಾರಿಗೂ, ಎಲ್ಲಿಯೂ ಗೊತ್ತಾಗದಂತೆ ತಲೆಗೆ ಬಿಳಿಬಣ್ಣದ ಟೋಪಿ, ಮುಖಕ್ಕೆ ಮಾಸ್ಕ್ ಹಾಗೂ ಕನ್ನಡಕವನ್ನು ಧರಿಸಿ ಕಪ್ಪು ಬಣ್ಣದ ಬ್ಯಾಗ್ ಹಾಕಿಕೊಂಡು ಹೋಟೆಲ್ ಒಳಗೆ ಪ್ರವೇಶಿಸಿದ್ದಾನೆ.
ನಂತರ ಕ್ಯಾಶಿಯರ್ ಕೌಂಟರ್ ಬಳಿ ಹೋಗಿ ಹಣ ಕೊಟ್ಟು ಟೋಕನ್ ತೆಗೆದುಕೊಂಡು ರವೆ ಇಡ್ಲಿಯನ್ನು ಟೇಬಲ್ ಬಳಿ ತಂದಿಟ್ಟುಕೊಂಡು ತಿಂದು ನಂತರ ಕೈ ತೊಳೆಯಲು ವಾಶ್‍ಬೇಸಿನ್ ಬಳಿ ಹೋಗಿ ಯಾರಿಗೂ ಅನುಮಾನ ಬಾರದಂತೆ ತಾನು ತಂದಿದ್ದ ಬ್ಯಾಗ್‍ಅನ್ನು ಕೆಳಗಿಟ್ಟು ಕೈ ತೊಳೆದುಕೊಂಡು ತಾನು ಕಟ್ಟಿದ್ದ ವಾಚ್‍ನಲ್ಲಿ ಟೈಂ ನೋಡಿಕೊಂಡು ಹೊರಹೋಗಿದ್ದಾನೆ ಈ ಎಲ್ಲಾ ದೃಶ್ಯಗಳು ಹೋಟೆಲ್‍ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಆತ ಹೋದ ಸುಮಾರು ಒಂದು ಗಂಟೆಯ ಅಂತರದಲ್ಲಿ ಬ್ಯಾಗ್‍ನಿಂದ 2 ಬಾರಿ ಸ್ಪೋಟವಾಗಿದ್ದು, ಘಟನಾ ಸ್ಥಳದಲ್ಲಿ ನಟ್ಟು, ಬೋಲ್ಟು, ಬ್ಯಾಟರಿ ಪತ್ತೆಯಾಗಿವೆ. ಒಟ್ಟಾರೆ ಸ್ಥಳದಲ್ಲಿನ ಸಿಸಿಟಿವಿಯಲ್ಲಿ ಆತನ ಚಲನವಲನ ಸೆರೆಯಾಗಿದ್ದು, ಆ ಆಧಾರದಲ್ಲಿ ಆತನ ಪತ್ತೆ ಕಾರ್ಯ ಮುಂದುವರೆದಿದೆ.
ಸಿಸಿ ಕ್ಯಾಮೆರಾಗಳ ಪರಿಶೀಲನೆ
ಬೆಂಗಳೂರು,ಮಾ.2- ರಾಮೇಶ್ವರಂ ಕೆಫೆ ಐಟಿಪಿಎಲ್ ರಸ್ತೆಯಲ್ಲಿದ್ದು, ಆ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳ ಫುಟೇಜ್‍ಗಳನ್ನು ತನಿಖಾ ತಂಡವೊಂದು ಪರಿಶೀಲನೆ ನಡೆಸುತ್ತಿದೆ. ಆರೋಪಿಯು ಈ ಸ್ಥಳಕ್ಕೆ ಬಸ್‍ನಲ್ಲಿ ಬಂದು ಇಳಿದಿರುವ ಹಿನ್ನಲೆಯಲ್ಲಿ ಈ ಮಾರ್ಗಗಳಲ್ಲಿ ನಿನ್ನೆ ಸಂಚರಿಸಿರುವ ಎಲ್ಲ ಬಸ್‍ಗಳಲ್ಲಿನ ಸಿಸಿ ಕ್ಯಾಮೆರಾಗಳನ್ನು ಸಿಸಿಬಿ ತಂಡವೊಂದು ಪರಿಶೀಲಿಸುತ್ತಿದೆ.
ಆರೋಪಿಯು ಯಾವ ಸ್ಥಳದಿಂದ ಯಾವ ಬಸ್‍ನಲ್ಲಿ ಬಂದ, ಎಲ್ಲಿ ಇಳಿದ, ಕೆಫೆಯಲ್ಲಿ ಬಾಂಬ್ ಇಟ್ಟು ಯಾವ ಕಡೆಗೆ, ಎಲ್ಲಿಗೆ ಹೋಗಿದ್ದಾನೆ ಎಂಬ ಬಗ್ಗೆ ತನಿಖಾ ತಂಡಗಳು ಸಿಸಿಟಿವಿ ಫುಟೇಜ್‍ಗಳನ್ನು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದಾರೆ. ಮತ್ತೊಂದು ತಂಡ ರಾಮೇಶ್ವರಂ ಕೆಫೆಗೆ ತೆರಳಿ ಮತ್ತೊಮ್ಮೆ ಸಿಸಿಕ್ಯಾಮೆರಾ ಫುಟೇಜ್‍ಗಳನ್ನು ಪರಿಶೀಲಿಸುತ್ತಿದೆ. ಪೊಲೀಸರ ನಿದ್ದೆಗೆಡಿಸಿರುವ ಆರೋಪಿಗಾಗಿ ತನಿಖಾ ತಂಡಗಳು ಹಗಲಿರುಳು ಶ್ರಮಿಸುತ್ತಿವೆ.