ಬೆಂಗಳೂರು,ಮಾ.4- ರಾಜ್ಯ ರಾಜಕಾರಣದಲ್ಲಿ ತೀವ್ರ ವಿವಾದ ಸೃಷ್ಟಿಸಿದ್ದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವುದು ವಿಧಿವಿಜ್ಞಾನ ಪ್ರಯೋಗಾಲಯ (ಎಫ್‍ಎಸ್‍ಎಲ್)ದ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ವಿಧಾನ ಸೌಧದ ಒಳಗೆ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಎಫ್‍ಎಸ್‍ಎಲ್ ವರದಿಯಲ್ಲಿ ಬಹಿರಂಗವಾಗಿದೆ.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು ನಾಸೀರ್ ಸಾಬ್ ಜಿಂದಾಬಾದ್ ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ ಎಫ್‍ಎಸ್‍ಎಲ್ ವರದಿಯಲ್ಲಿ ಬಟಾ ಬಯಲಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ. ಸತ್ಯವನ್ನೇ ತಿರುಚಿ ಸುಳ್ಳು ಮಾಡಿ ಪ್ರಚಾರ ಮಾಡಿದ ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂಬುದನ್ನು ವೈಜ್ಞಾನಿಕ ವರದಿ ಬಹಿರಂಗಪಡಿಸಿದೆ. ರಾಷ್ಟ್ರ ವಿರೋಧಿ ಧೋರಣೆಯ ಕಾಂಗ್ರೆಸ್ ಹಾಗೂ ಸುಳ್ಳು ಸುದ್ದಿಗಳ ಕಾರ್ಖಾನೆಯ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಈಗಲಾದರೂ ತಮ್ಮ ದೇಶದ್ರೋಹದ ಕೃತ್ಯವನ್ನು ಒಪ್ಪಿಕೊಂಡು ವಿಧಾನಸೌಧದ ಎದುರು ಸಾಷ್ಟಾಂಗ ನಮಸ್ಕಾರ ಮಾಡಿ ಕನ್ನಡಿಗರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದೆ.
ಫೆ.27ರಂದು ರಾಜ್ಯಸಭೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್‍ನ ಮೂವರು ಮತ್ತು ಬಿಜೆಪಿಯ ಓರ್ವ ಅಭ್ಯರ್ಥಿ ವಿಜಯಶಾಲಿಯಾದರು. ಕಾಂಗ್ರೆಸ್ ಅಭ್ಯರ್ಥಿ ಸಯ್ಯದ್ ನಾಸಿರ್ ಹುಸೇನ್ ಗೆಲುವಿನ ಸಂಭ್ರಮಾಚರಣೆ ವೇಳೆ ಅವರ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸುದ್ದಿ ಸಾಕಷ್ಟು ಚರ್ಚೆಯಾಗಲು ಆರಂಭವಾಗುತ್ತಿದ್ದಂತೆ ಪಾಕ್ ಪರ ಘೋಷಣೆ ಕೇಳಿ ಬಂದಿದೆ ಎನ್ನಲಾಗಿರುವ ವಿಡಿಯೋ ತುಣಕನ್ನು ಪರೀಕ್ಷಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ವಿಡಿಯೋ ತುಣುಕು ಎಫ್‍ಎಸ್‍ಎಲ್ ವರದಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಧೃಡಪಟ್ಟಿದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಸರ್ಕಾರ ಈ ಬಗ್ಗೆ ಅಧಿಕೃತವಾಗಿ ಯಾವುದೇ ವರದಿ, ಹೇಳಿಕೆಯನ್ನು ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟ್ವೀಟ್ ಮಾಡಿ, ಖಾಸಗಿ ಎಫ್‍ಎಸ್‍ಎಲ್ ವರದಿ ಈಗಾಗಲೇ ಈ ಕುರಿತು ಧೃಡೀಕರಣ ನೀಡಿಯಾಗಿದೆ, ಸರ್ಕಾರಿ ವರದಿ ಕೂಡ ನಿಮ್ಮ ಕೈ ಸೇರಿದೆ ಆದಾಗ್ಯೂ ವರದಿ ಇನ್ನೂ ತಲುಪಿಲ್ಲ ಎಂಬ ಹಸೀ ಸುಳ್ಳು ಹೇಳುತ್ತಿರುವ ನಿಮ್ಮ ನಡೆ, ನಿಮ್ಮ ರಾಷ್ಟ್ರ ಬದ್ಧತೆಯನ್ನು ಪ್ರಶ್ನಿಸುವಂತಾಗಿದೆ ಎಂದು ಕಿಡಿಕಾರಿದ್ದಾರೆ. ಬೆಂದ ಮನೆಯಲ್ಲಿ ಗಳ ಇರಿಯುವ ರಾಜಕಾರಣ ಮಾಡುವ ದುರ್ಗತಿ ಬಿಜೆಪಿಗೆ ಬಂದಿಲ್ಲ ವಿಧಾನ ಸೌಧದಲ್ಲೇ ಪಾಕಿಸ್ತಾನ್ ಜಿಂದಾಬಾದ್‍ಘೋಷಣೆ ಕೇಳಿಬಂದರೆ ನಾವು ಕೈಕಟ್ಟಿ ಕೂರಬೇಕೇ ಈ ಸಂಬಂಧ ಮಾಧ್ಯಮಗಳ ವರದಿ ನೀವು ನಂಬಲ್ಲಿಲ್ಲ, ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಲಿಸಲಿಲ್ಲ, ರಾಷ್ಟ್ರ ಹಿತಾಸಕ್ತಿಯ ಈ ಗಂಭೀರ ಪ್ರಕರಣದ ಬಗ್ಗೆ ತಾತ್ಸಾರ ತೋರುತ್ತಿರುವುದರ ನಿಮ್ಮ ವರ್ತನೆ ರಾಷ್ಟ್ರ ದ್ರೋಹಿಗಳನ್ನು ರಕ್ಷಿಸಲು ಆದ್ಯತೆ ನೀಡುತ್ತಿರುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಹಾಗೂ ಜನರ ಹಿತಾಸಕ್ತಿಯೇ ನಮ್ಮ ಮೊದಲ ಆದ್ಯತೆ, ದೇಶದ್ರೋಹಿ ಉಗ್ರರು ಹಾಗೂ ಪಾತಕಿಗಳಿಗೆ ಕರ್ನಾಟಕ ನೆಲೆಯಾಗಬಾರದೆಂಬುದಷ್ಟೇ ನಮ್ಮ ಪ್ರಾಮಾಣಿಕ ಕಾಳಜಿ, ಪ್ರಜಾಪ್ರಭುತ್ವದ ಹೃದಯ ಮಂದಿರ ವಿಧಾನಸೌಧಕ್ಕೆ ಧಾವಿಸಿ ಬಂದು ಪೋಲಿಸರ ಎದುರೇ ಪಾಕಿಸ್ತಾನ್ ಜಿಂದಾಬಾದ್ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದ ಆವರಣದಲ್ಲೇ ಪಾಕ್ ಪರ ಘೋಷಣೆ ಕೂಗುವಷ್ಟರ ಮಟ್ಟಿಗೆ ವಿದ್ರೋಹಿಗಳು ಧೈರ್ಯ ತೋರಿದ್ದಾರೆ. ಇದರ ಬೆನ್ನಲೇ ರಾಜಧಾನಿಯಲ್ಲಿ ಬಾಂಬ್ ಸ್ಪೋಟವಾಗುತ್ತದೆ ಎಂದರೆ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿ ಅಡಗಿ ಕುಳಿತಿದೆ ಎಂಬುದು ಬಹುದೊಡ್ಡ ಪ್ರಶ್ನೆಯಾಗಿ ರಾಜ್ಯದ ಜನರನ್ನು ಕಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭೂಗತ ಶಕ್ತಿಗಳಿಗೆ ಸ್ವತಂತ್ರ್ಯ ದೊರೆತ ವಾತಾವರಣ ನಿರ್ಮಾಣವಾಗಿದೆ, ಜನರು ಆತಂಕದ ನೆರಳಿನಲ್ಲಿ ಬದುಕುವ ಸ್ಥಿತಿ ಬಂದೊದಗಿದೆ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಫೆ.27ರಂದು ರಾಜ್ಯಸಭೆಯ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಗೆಲುವಿನ ಸಂಭ್ರಮಾಚರಣೆ ವೇಳೆ ಅವರ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾರೆ ಎಂದು ಆರೋಪಿಸಲಾಗಿತ್ತು. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿತ್ತು. ಪಾಕಿಸ್ತಾನ ಜಿಂದಾಬಾದ್ ಕೂಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಪ್ರಿಯಾಂಕ ಖರ್ಗೆ, ಲಕ್ಷ್ಮಿ ಹೆಬ್ಬಾಳ್ಕರ್ ಸಮರ್ಥಿಸಿಕೊಂಡಿದ್ದರು.