ಬೆಂಗಳೂರು ಡಿ.14-ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಚಳಿಯ ಪ್ರಮಾಣ ಹೆಚ್ಚಾಗಿದ್ದು, ಜೊತೆಗೆ ಶೀತಗಾಳಿಯಿಂದ ಜನರು ಹೈರಾಣರಾಗಿದ್ದಾರೆ. ಕನಿಷ್ಠ ಹಾಗೂ ಗರಿಷ್ಠ ಉಷ್ಣಾಂಶದಲ್ಲಿ ಗಣನೀಯವಾಗಿ ಕುಸಿತವಾಗಿದೆ.
ಹವಾಮಾನ ವೈಫರೀತ್ಯದ ಪರಿಣಾಮದಿಂದ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ ಕುಸಿತವಾಗಿದೆ. ಶೀತಗಾಳಿ ಬೀಸಲಿದ್ದು, ಜನರು ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾಗಿ ಚಳಿಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ರಾತ್ರಿವೇಳೆ ಮೈ ಕೊರೆಯುವ ಚಳಿಯ ಜೊತೆಗೆ ಬೆಳಗಿನ ಜಾವ ಹಲವೆಡೆ ಮಂಜು ಕವಿಯುತ್ತಿದೆ. ಅಲ್ಲದೆ, ಆಗಾಗ್ಗೆ ತಂಪಾದ ಮೇಲೈ ಗಾಳಿ ಬೀಸುತ್ತಿದ್ದು, ಚಳಿಯ ಪ್ರಮಾಣವನ್ನು ಮತ್ತಷ್ಟೂಹೆಚ್ಚಿಸುತ್ತಿದೆ. ಹಗಲು ವೇಳೆ ಬಿಸಿಲಿದ್ದರೂ ಶೀತಗಾಳಿಯಿಂದಾಗಿ ಚಳಿಯ ಅನುಭವ ಹೆಚ್ಚಾಗುತ್ತಿದೆ. ಹೀಗಾಗಿ ಜನರು ಸ್ಪೆಟರ್ ಸೇರಿದಂತೆ ಬೆಚ್ಚನೆಯ ಹೊದಿಕೆಗಳ ಮೊರೆ ಹೋಗಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಬೀದರ್‌ನಲ್ಲಿ ಕನಿಷ್ಠ ತಾಪಮಾನ 7.4 ಡಿ.ಸೆ.ನಷ್ಟು ದಾಖಲಾಗಿದ್ದು, ಚಳಿಯಿಂದ ನಡುಗುವಂತಾಗಿದೆ. ಗರಿಷ್ಠ ತಾಪಮಾನ 36.6 ಡಿ.ಸೆ.ನಷ್ಟು ಕಾರವಾರದಲ್ಲಿ ದಾಖಲಾಗಿದೆ. ಕರಾವಳಿ ಭಾಗದಲ್ಲಿ ಕನಿಷ್ಠ ಹಾಗೂ ಗರಿಷ್ಠ ತಾಪಮಾನದಲ್ಲಿ ಹೆಚ್ಚಳವಿದೆ. ಆದರೆ, ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 15ಡಿ.ಸೆ.ಗಿಂತ ಕಡಿಮೆ ದಾಖಲಾಗುತ್ತಿದೆ. ಹೆಚ್ಚು ಕಡಿಮೆ ಇದೇ ರೀತಿಯ ವಾತಾವರಣ ನಾಲ್ಕೈದು ದಿನಗಳ ಕಾಲ ಮುಂದುವರೆಯುವ ಸಾಧ್ಯತೆಗಳಿವೆ.
ಬೆಳಗಾವಿಯಲ್ಲಿ 12 ಡಿ.ಸೆ., ವಿಜಯಪುರದಲ್ಲಿ 10 ಡಿ.ಸೆ., ಧಾರವಾಡದಲ್ಲಿ 9.5 ಡಿ.ಸೆ., ಗದಗದಲ್ಲಿ 10.6 ಡಿ.ಸೆ., ಕಲಬುರಗಿಯಲ್ಲಿ 15 ಡಿ.ಸೆ., ಕೊಪ್ಪಳದಲ್ಲಿ 13.3 ಡಿ.ಸೆ., ಹಾವೇರಿಯಲ್ಲಿ 10.2 ಡಿ.ಸೆ., ಆಗುಂಬೆಯಲ್ಲಿ 9.3 ಡಿ.ಸೆ., ಬೆಂಗಳೂರು ನಗರದಲ್ಲಿ 14.5 ಡಿ.ಸೆ., ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 12.9 ಡಿ.ಸೆ., ಚಿತ್ರದುರ್ಗದಲ್ಲಿ 14.9 ಡಿ.ಸೆ., ದಾವಣಗೆರೆಯಲ್ಲಿ 9 ಡಿ.ಸೆ., ಹಾಸನದಲ್ಲಿ 8.7 ಡಿ.ಸೆ., ಮಂಡ್ಯ, ಚಿಂತಾಮಣಿಯಲ್ಲಿ 11.2 ಡಿ.ಸೆ., ಮೈಸೂರಿನಲ್ಲಿ 15.2 ಡಿ.ಸೆ.ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು 28-29 ಡಿ.ಸೆ.ನಷ್ಟು ದಾಖಲಾಗಿರುತ್ತದೆ.
