ಬೆಂಗಳೂರು,ಆ.9- ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ಮತ್ತೆ ಜಟಾಪಟಿ ಶುರುವಾಗಿದೆ. ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿರುವ ಮತ್ತು ಇತ್ತೀಚೆಗಷ್ಟೇ ಸಂಪುಟಕ್ಕೆ ಮರಳಿ ಸಚಿವರಾಗಿರುವ ಬಿ. ನಾಗೇಂದ್ರ ಅವರು ನ್ಯಾಯಾಲಯದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ ದೆಹಲಿಗೆ ಪ್ರವಾಸ ಕೈಗೊಂಡಿದ್ದಾರೆಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್‌್ಸನಲ್ಲ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಆರ್. ಅಶೋಕ್, ನ್ಯಾಯಾಲಯದ ಪೂರ್ವಾನುಮತಿ ಪಡೆಯದೆ ಜುಲೈ 15 ಮತ್ತು ಜುಲೈ 26ರಂದು ಸಚಿವ ನಾಗೇಂದ್ರ ಅವರು ದೆಹಲಿಗೆ ಪ್ರವಾಸ ಬೆಳೆಸಿದ್ದಾರೆ. ನಾಗೇಂದ್ರ ಅವರ ದೆಹಲಿ ಪ್ರವಾಸಕ್ಕೆ ಸಂಬಂಧಿಸಿದಂತೆ ವಿಮಾನ ನಿಲ್ದಾಣದ ದಾಖಲೆಗಳು ಹಾಗೂ ಸಿಸಿಟಿವಿ ದೃಶ್ಯಗಳನ್ನು ಇ.ಡಿ (ED) ಪರಿಶೀಲನೆ ನಡೆಸುತ್ತಿರುವುದಾಗಿ ವರದಿಯಾಗಿದೆ. ಕಾನೂನಿಗೆ ಗೌರವ ನೀಡದ ಕಳಂಕಿತ ಸಚಿವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕೆಂದು ಎಂದು ಅಶೋಕ್ ಒತ್ತಾಯಿಸಿದ್ದಾರೆ.
ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ, ನ್ಯಾಯಾಲಯದ ಕಣ್ಣಿಗೆ ಮಣ್ಣೆರಚಿ ದೆಹಲಿಗೆ ಓಡಾಡುವಷ್ಟು ಅಧಿಕಾರದ ಮದ ಏರಿದೆಯೇ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ. ಒಂದೆಡೆ ಇ.ಡಿ ತನಿಖೆಗೆ ಕಾಲಾವಕಾಶ ಕೋರುತ್ತಾ, ಮತ್ತೊಂದೆಡೆ ನ್ಯಾಯಾಲಯದ ಅನುಮತಿಯನ್ನೇ ಪಡೆಯದೆ ಪ್ರಯಾಣ ಬೆಳೆಸುವುದು ಕಾಂಗ್ರೆಸ್ ಪಕ್ಷಕ್ಕೆ ಕಾನೂನು ಮತ್ತು ನ್ಯಾಯ ವ್ಯವಸ್ಥೆಯ ಮೇಲಿರುವ ಗೌರವವನ್ನು ಎತ್ತಿ ತೋರಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿ, ನಿಮಗೆ ನ್ಯಾಯಾಲಯದ ಆದೇಶ ದೊಡ್ಡದೋ ಅಥವಾ ಹೈಕಮಾಂಡ್ ಆದೇಶ ದೊಡ್ಡದೋ? ಭ್ರಷ್ಟಾಚಾರ ಮತ್ತು ಕಾನೂನು ಉಲ್ಲಂಘನೆ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ರಾಜಕೀಯ ಅಭಯ ನೀಡುವುದೇ ನಿಮ ಪಾರದರ್ಶಕ ಆಡಳಿತವೇ? ಎಂದು ವ್ಯಂಗ್ಯವಾಡಿದ್ದಾರೆ.
ವಾಲೀಕಿ ನಿಗಮದ ಹಗರಣದ ಮೂಲಕ ಈಗಾಗಲೇ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿರುವ ರಾಜ್ಯ ಸರ್ಕಾರಕ್ಕೆ, ಸಚಿವ ನಾಗೇಂದ್ರ ಅವರ ಈ ನೂತನ ದೆಹಲಿ ಪ್ರವಾಸದ ವಿವಾದ ಮತ್ತಷ್ಟು ಮುಜುಗರ ತಂದಿಟ್ಟಿದೆ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಲಾಗಿದೆ ಎನ್ನಲಾದ ಈ ಪ್ರಕರಣದ ಕುರಿತು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಕೂಡಲೇ ಸ್ಪಷ್ಟನೆ ನೀಡಬೇಕು ಹಾಗೂ ಕಳಂಕಿತ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂಬ ಒತ್ತಡ ಸಾರ್ವಜನಿಕ ವಲಯದಲ್ಲೂ ಜೋರಾಗಿದೆ.
