ಬೆಂಗಳೂರು,ಮಾ.6- ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ 5, 8, 9 ಹಾಗೂ 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ರದ್ದುಪಡಿಸಿದೆ. ಹೈಕೋರ್ಟ್ ಈ ಆದೇಶದಿಂದ ಇದೇ ಮಾರ್ಚ್ 9ರಿಂದ 11 ರವರೆಗೆ ನಿಗದಿಯಾಗಿದ್ದ ಬೋರ್ಡ್ ಪರೀಕ್ಷೆಗಳು ರದ್ದಾದಂತಾಗಿದೆ.
ಕಳೆದ ಡಿಸೆಂಬರ್ನಲ್ಲಿ ರಾಜ್ಯ ಸರ್ಕಾರ 2024ನೇ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ 5, 8, 9, 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಯನ್ನು ನಿಗದಿಪಡಿಸಿ ಸುತ್ತೋಲೆ ಹೊರಡಿಸಿತ್ತು. ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಅನುದಾನರಹಿತ ಶಾಲೆಗಳ ಸಂಘ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ಎರಡೂ ಕಡೆಯ ವಾದವನ್ನು ಆಲಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ರವಿ ಹೊಸಮನಿ ಅವರು ಇಂದು ತೀರ್ಪು ಪ್ರಕಟಿಸಿ ಸರ್ಕಾರ ಹೊರಡಿಸಿದ್ದ ಸುತ್ತೋಲೆ ಯನ್ನು ರದ್ದುಪಡಿಸಿದರು.
ರಾಜ್ಯ ಶಿಕ್ಷಣ ಇಲಾಖೆ ಶಿಕ್ಷಣ ಕಾಯ್ದೆಯಡಿ 2023ರ ಅಕ್ಟೋಬರ್ 6 ಮತ್ತು 9ರಂದು ಎರಡು ಸುತ್ತೋಲೆಗಳನ್ನು ಹೊರಡಿಸಿ ಬೋರ್ಡ್ ಮಟ್ಟದ ಪರೀಕ್ಷೆ ನಡೆಸುವುದಕ್ಕೆ ತೀರ್ಮಾನಿಸಿತ್ತು. ಶಿಕ್ಷಣ ಇಲಾಖೆ ಸುತ್ತೋಲೆ ಕೇವಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ. ಇದು ಪಠ್ಯಕ್ರಮದ ಭಾಗವಲ್ಲ. ಆದರೆ, ಬೋರ್ಡ್ ಪರೀಕ್ಷೆಗೆ ಕಲಿಕಾ ಚೇತರಿಕೆ ಪಠ್ಯಕ್ರಮದಿಂದ ಪ್ರಶ್ನೆಗಳನ್ನು ಸಿದ್ಧಪಡಿಸಿರುವುದಾಗಿ ಸರ್ಕಾರ ಹೇಳುತ್ತಿದೆ. ಖಾಸಗಿ ಶಾಲೆಗಳ ಪಠ್ಯಕ್ರಮ ಹಾಗೂ ಸರ್ಕಾರಿ ಶಾಲೆಗಳ ಪಠ್ಯಕ್ರಮ ವಿಭಿನ್ನವಾಗಿವೆ. ಕಲಿಕಾ ಚೇತರಿಕೆ ಪಠ್ಯಕ್ರಮದ ಪ್ರಶ್ನೆಗಳಿಗೆ ಖಾಸಗಿ ಶಾಲಾ ಮಕ್ಕಳು ಉತ್ತರಿಸಲು ಕಷ್ಟ ಹಾಗಾಗಿ, ಎಲ್ಲ ಮಕ್ಕಳಿಗೂ ಅನ್ವಯವಾಗುವಂತೆ ಬೋರ್ಡ್ ಮಟ್ಟದ ಪರಿ ನಡೆಸುವುದಕ್ಕೆ ಅವಕಾಶ ನೀಡಬಾರದು ಎಂದು ಅರ್ಜಿದಾರರ ಸಂಘ ಕೋರಿತ್ತು.
ಖಾಸಗಿ ಶಾಲೆಗಳ ಪರವಾಗಿ ವಕೀಲ ಸುದರ್ಶನ್ ವಾದ ಮಂಡಿಸಿದ್ದರೆ, ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದ್ದರು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅಂದಿನ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು 5ನೇ ತರಗತಿ ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಮಾದರಿಯ ಮೌಲ್ಯಾಂಕನ ಪರೀಕ್ಷೆ ಜಾರಿಗೆ ತಂದಿದ್ದರು.
ಆನಂತರ ಅಧಿಕಾರ ಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 9ನೇ ತರಗತಿ ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೂ ಬೋರ್ಡ್ ಪರೀಕ್ಷೆ ನಡೆಸುವ ಚಿಂತನೆ ಮಾಡಿತ್ತು. 9ನೇ ತರಗತಿ ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೂ ಪಬ್ಲಿಕ್ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಗಂಭೀರತೆ ಕಾಣಬಹುದು ಎಂದು ಹಾಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧುಬಂಗಾರಪ್ಪ ಈ ಹಿಂದೆ ಹೇಳಿದ್ದರು.
ಈ ಹಿಂದೆ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷದಿಂದಲೇ ಶಾಲಾ ಮಟ್ಟದ ಮೌಲ್ಯಮಾಪನಕ್ಕೆ ಬದಲಾಗಿ ರಾಜ್ಯ ಮಟ್ಟದ ಮಂಡಳಿ ಪರೀಕ್ಷೆ ನಡೆಸುವ ರಾಜ್ಯ ಶಿಕ್ಷಣ ಇಲಾಖೆಯ ನಿರ್ಧಾರಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘದ (ರುಪ್ಸಾ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮೇಲ್ಮನವಿ ಸಲ್ಲಿಸಿದ್ದರು. 2022-23ನೇ ಶೈಕ್ಷಣಿಕ ಸಾಲಿನಲ್ಲಿ 5 ಮತ್ತು 8ನೇ ತರಗತಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ ವಿಧಾನವನ್ನು ಬದಲಿಸುವ ಕುರಿತಂತೆ 2022ರ ಡಿಸೆಂಬರ್ 12 ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ಕ್ರಮ ಪ್ರಶ್ನಿಸಿ ಸಂಘವು ತಕರಾರು ಅರ್ಜಿ ಸಲ್ಲಿಸಿತ್ತು.
ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಮೌಲ್ಯಮಾಪನ ಬದಲಾವಣೆಗೆ ಸರ್ಕಾರ ಕೈಗೊಂಡಿರುವ ನಿರ್ಣಯವು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದು ಸಂಘದ ಆಕ್ಷೇಪಣೆಯಾಗಿತ್ತು.
ಶಿಕ್ಷಣ ಇಲಾಖೆ ವಾರ್ಷಿಕ ಚಟುವಟಿಕೆಗಳ ಪಟ್ಟಿಯಲ್ಲಿ ಐದು ಮತ್ತು ಎಂಟನೇ ತರಗತಿ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದಾಗಿ ಪ್ರಕಟಿಸಿರಲಿಲ್ಲ. ಏಕಾಏಕಿಯಾಗಿ ತೀರ್ಮಾನವನ್ನು ಪ್ರಕಟಿಸಿತ್ತು. ಇದರ ನಡುವೆ ಸರ್ಕಾರಿ ಶಾಲೆಗಳಿಗೆ ಪಬ್ಲಿಕ್ ಪರೀಕ್ಷೆಯ ಪಠ್ಯಪುಸ್ತಕ ನೀಡಿತ್ತು. ಆದರೆ ಖಾಸಗಿ ಶಾಲೆಗಳಿಗೆ ಅದನ್ನು ನೀಡಲೇ ಇಲ್ಲ. ಇಡೀ ರಾಜ್ಯಕ್ಕೆ ಒಂದೇ ಮಾದರಿ ಪರೀಕ್ಷೆ ನಡೆಸಬೇಕು ಎಂದು ಏಕಪಕ್ಷೀಯ ಆದೇಶವನ್ನು ನೀಡಿತ್ತು.
ಹಿನ್ನೆಲೆ:
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ ರಾಜ್ಯ ಪಠ್ಯಕ್ರಮ ಅಳವಡಿಸಿಕೊಂಡಿರುವ ಸರ್ಕಾರಿ ಅನುದಾನಿತ ಮತ್ತು ಅನುದಾನಿತ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 9ನೇ ತರಗತಿ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮËಲ್ಯಮಾಪನ-2 ಹಾಗು 11 ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮËಲ್ಯನಿರ್ಣಯ ಮಂಡಳಿಯಿಂದಲೇ ನಡೆಸುವಂತೆ 12 ಷರತ್ತುಗಳೊಂದಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ಈಗಾಗಲೇ 5, 8ನೇ ತರಗತಿಗೆ ಮೌಲ್ಯಾಂಕನ ಹಾಗೂ ಎಸ್ಸೆಸ್ಸೆಲ್ಸಿ ದ್ವಿತೀಯ ಪಿಯುಸಿಗೆ ವಾರ್ಷಿಕ ಪರೀಕ್ಷೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ನಡೆಸಲಾಗುತ್ತಿತ್ತು.