Saturday, November 23, 2024
Homeರಾಜ್ಯರಾಮೇಶ್ವರಂ ಕೆಫೆ ಬಾಂಬರ್ ಸುಳಿವು ನೀಡಿದವರೆಗೆ 10 ಲಕ್ಷ ಬಹುಮಾನ ಘೋಷಣೆ

ರಾಮೇಶ್ವರಂ ಕೆಫೆ ಬಾಂಬರ್ ಸುಳಿವು ನೀಡಿದವರೆಗೆ 10 ಲಕ್ಷ ಬಹುಮಾನ ಘೋಷಣೆ

ಬೆಂಗಳೂರು, ಮಾ.6- ನಗರದ ಐಟಿಪಿಎಲ್ ರಸ್ತೆಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಸ್ಫೋಟಿಸಿ ಪರಾರಿಯಾಗಿರುವ ಆರೋಪಿಯ ಸುಳಿವು ನೀಡಿದವರಿಗೆ ಹತ್ತು ಲಕ್ಷ ರೂಪಾಯಿ ಬಹುಮಾನವನ್ನು ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಘೋಷಿಸಿದೆ.

ಮಾರ್ಚ್ ಒಂದರಂದು ಮಧ್ಯಾಹ್ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ ಶಂಕಿತ ಆರೋಪಿಯ ಭಾವಚಿತ್ರ ಬಿಡುಗಡೆ ಮಾಡಿರುವ ಎನ್ಐಎ, ಆರೋಪಿಯನ್ನು ಬಂಧಿಸಲು ಅನುಕೂಲವಾಗುವ ಮಾಹಿತಿ ನೀಡಿದವರಿಗೆ ಈ ನಗದು ಬಹುಮಾನ ನೀಡುವುದಾಗಿ ಪ್ರಕಟಿಸಿದೆ.

ಅಲ್ಲದೆ, ಆರೋಪಿಯ ಬಗ್ಗೆ ಸುಳಿವು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿಡುವುದಾಗಿ ಹೇಳಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-29510900, 8904241100, ಇ ಮೇಲ್: info.blr.nia@gov.in ಸಂಪರ್ಕಿಸಬಹುದಾಗಿದೆ ಎಂದು ಎನ್ಐಎ ಬಿಡುಗಡೆ ಮಾಡಿರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದೆ.

ಬಾಂಬರ್ ಪತ್ತೆಗೆ ಮ್ಯಾಪಿಂಗ್ :
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸೋಟಿಸಿ ಪರಾರಿಯಾಗಿರುವ ದುಷ್ಕರ್ಮಿಗಾಗಿ ಸಿಸಿಬಿ ಪೊಲೀಸ್ ತಂಡಗಳು ಮ್ಯಾಪಿಂಗ್ ಮಾಡಿ ಮಾಹಿತಿ ಕಲೆ ಹಾಕುತ್ತಿವೆ. ಸೋಟ ಸಂಭವಿಸಿ 5 ದಿನ ಕಳೆದರೂ ಆರೋಪಿಯ ಸುಳಿವು ಸಿಕ್ಕಿಲ್ಲ. ಆತನ ಪತ್ತೆಗಾಗಿ ಸಿಸಿಬಿ ಪೊಲೀಸ್ ತಂಡಗಳು ಹರಸಾಹಸಪಡುತ್ತಿವೆ. ವಿವಿಧ ಆಯಾಮಗಳಲ್ಲಿ ಆರೋಪಿಯ ಸುಳಿವಿಗಾಗಿ ಬೆನ್ನತ್ತಿರುವ ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದು, ಆತನ ಪತ್ತೆಗಾಗಿ ಮ್ಯಾಪಿಂಗ್ ಮಾಡಿದ್ದಾರೆ.

ಆರೋಪಿಯು ಕೆಫೆಗೆ ಬಂದು ಹೋದ ಮಾರ್ಗಗಳಲ್ಲಿ ಹಾಗೂ ಕೆಫೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮ್ಯಾಪಿಂಗ್ ನಡೆಸಿದ್ದಾರೆ.
ಆರೋಪಿಯು ಸ್ಥಳೀಯನೇ ಅಥವಾ ಹೊರರಾಜ್ಯದವನೇ, ಎಲ್ಲಿಂದ ಆತ ಪ್ರಯಾಣ ಆರಂಭಿಸಿದ, ಎಲ್ಲಿ ಪ್ರಯಾಣ ಕೊನೆಗೊಳಿಸಿ ಎಲ್ಲಿಗೆ ಹೋಗಿದ್ದಾನೆಂಬ ಯಾವುದಾದರೊಂದು ಮಾರ್ಗದಲ್ಲಿ ಸುಳಿವು ಸಿಕ್ಕಿದರೂ ಸಹ ಆರೋಪಿಯ ಪತ್ತೆಗೆ ಸಹಕಾರಿಯಾಗಲಿದೆ.
ಆತ ಎಲ್ಲಿಯೂ ತನ್ನ ಮುಖ ಚಹರೆ ಗುರುತು ಪತ್ತೆಯಾಗದಂತೆ ಟೋಪಿ ಧರಿಸಿ ಕನ್ನಡಕ ಹಾಕಿಕೊಂಡು ಮಾಸ್ಕ್ ಹಾಕಿ ಬಹಳ ಚಾಣಾಕ್ಷತೆ ವಹಿಸಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ.

ಓಡಾಡಿದ ಸ್ಥಳಗಳಲ್ಲಿ ಆತ ಚಾಲಾಕಿತನದಿಂದ ಎಲ್ಲಿಯೂ ತನ್ನ ಮುಖ ಕಾಣದಂತೆ ಮರೆಮಾಚಿದ್ದಾನೆ. ಸಿಸಿ ಕ್ಯಾಮೆರಾ ದೃಶ್ಯಾವಳಿಗಳಲ್ಲೂ ಕೂಡ ಸ್ಪಷ್ಟವಾಗಿ ಆತನ ಮುಖ ಕಾಣುತ್ತಿಲ್ಲ. ಸ್ವಲ್ಪ ಸ್ವಲ್ಪ ಮಾತ್ರ ಕಾಣುತ್ತಿದ್ದು, ಯಾವುದಾದರೂ ಸಿಸಿಕ್ಯಾಮೆರಾದಲ್ಲಿ ಸಂಪೂರ್ಣ ಮುಖ ಕಾಣಿಸುತ್ತದೆಯೇ ಎಂದು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸಿಸಿಕ್ಯಾಮೆರಾಗಳನ್ನು ಕೂಲಂಕುಷವಾಗಿ ತಂಡಗಳು ಪರಿಶೀಲನೆ ನಡೆಸುತ್ತಿವೆ.

ಆರೋಪಿಯು ಕೆಫೆಗೆ ಬಂದು ಇಡ್ಲಿ ತಿಂದು ತನ್ನ ಬಳಿ ಇದ್ದ ಕಪ್ಪು ಬಣ್ಣದ ಬ್ಯಾಗ್ನ್ನು ಕೈತೊಳೆಯುವ ಜಾಗದಲ್ಲಿಟ್ಟು, ಹೊರಗೆ ನಡೆದುಕೊಂಡು ಹೋಗಿ ಕುಂದಲಹಳ್ಳಿಯಲ್ಲಿ ಬಸ್ ಹತ್ತಿ ಕಾಡುಗೋಡಿಯಲ್ಲಿ ಇಳಿದಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.ಆ ಸ್ಥಳದಿಂದ ಆರೋಪಿ ಎಲ್ಲಿಗೆ ಹೋಗಿದ್ದಾನೆಂಬ ಬಗ್ಗೆ ಸ್ಪಷ್ಟ ಸುಳಿವು ಸಿಕ್ಕಿಲ್ಲ. ಹೀಗಾಗಿ ಕುಂದಲಹಳ್ಳಿ, ಕೆ.ಆರ್.ಪುರ, ಬಯ್ಯಪ್ಪನಹಳ್ಳಿ ಮೆಟ್ರೊ ನಿಲ್ದಾಣ, ಮಾರತ್ತಹಳ್ಳಿ , ಹೆಬ್ಬಾಳ ಹಾಗೂ ಎಚ್ಎಎಲ್ ಸೇರಿದಂತೆ ರಾಮೇಶ್ವರ ಕೆಫೆ ವ್ಯಾಪ್ತಿಯ ನಾಲ್ಕೈದು ಕಿ.ಮೀ ಸುತ್ತಮುತ್ತಲಿನ ಮಾರ್ಗದ ಪ್ರಮುಖ ರಸ್ತೆಗಳು, ಮುಖ್ಯರಸ್ತೆ ಕೂಡುವ ಸಣ್ಣ ರಸ್ತೆಗಳು, ಆಯಾಯ ಪ್ರದೇಶಗಳ ರಸ್ತೆಗಳಲ್ಲಿರುವ ಎಲ್ಲಾ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಎರಡು ರೀತಿಯಲ್ಲಿ ಮ್ಯಾಪಿಂಗ್ ನಡೆಸಿದ್ದಾರೆ.

ಒಂದು ರಿವರ್ಸ್ ಮ್ಯಾಪಿಂಗ್ ಮತ್ತೊಂದು ಫಾರ್ವಡ್ ಮ್ಯಾಪಿಂಗ್ ಮಾಡಿ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಆರೋಪಿಯು ಘಟನೆಗೂ ಮುನ್ನ ಯಾವ ಮಾರ್ಗದಲ್ಲಿ ಹೇಗೆ ಕೆಫೆಗೆ ಬಂದ ನಂತರ ಯಾವ ಮಾರ್ಗದಲ್ಲಿ ಹೇಗೆ ಹೋದ ಎಂಬ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.ಒಟ್ಟಾರೆ ಈ ಪ್ರಕರಣ ನಗರ ಪೊಲೀಸರ ನಿದ್ದೆಗೆಡಿಸಿದ್ದು, ಆರೋಪಿ ಪತ್ತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.

RELATED ARTICLES

Latest News