ಬೆಂಗಳೂರು,ಮಾ.7- ಲೋಕಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ದೆಹಲಿಯಲ್ಲಿಂದು ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯುತ್ತಿದ್ದು, ರಾಜ್ಯದ ಕ್ಷೇತ್ರಗಳಿಗೆ ಮತ್ತಷ್ಟು ಹುರಿಯಾಳುಗಳನ್ನು ಆಖೈರುಗೊಳಿಸುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ರಾಷ್ಟ್ರಮಟ್ಟದಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧಪಟ್ಟಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕೇಂದ್ರ ಚುನಾವಣಾ ಸಮಿತಿ ಸಭೆ ಸಂಜೆ ನಡೆಯಲಿದ್ದು, ಅದರಲ್ಲಿ ಸದಸ್ಯರಾದ ಸೋನಿಯಾಗಾಂಧಿ, ರಾಹುಲ್‍ಗಾಂಧಿ, ಅಂಬಿಕಾ ಸೋನಿ, ಅಭಿರಂಜನ್ ಚೌಧರಿ, ಡಾ.ಅಮಿ ಯಾಗ್ನಿಕ್, ಕೆ.ಸಿ.ವೇಣುಗೋಪಾಲ್, ಕರ್ನಾಟಕದ ಕೆ.ಜೆ.ಜಾರ್ಜ್, ಮಧುಸೂದನ್ ಮಿಸ್ತ್ರಿ, ಡಾ.ಮೊಹಮ್ಮದ್ ಜಾವೇದ್, ಪಿ.ಎಲ್.ಪೂನಿಯಾ, ಪ್ರತಿಮಾ ಸಿಂಗ್, ಸಲ್ಮಾನ್ ಖುರ್ಷಿದ್, ಓಂಕಾರ್ ಮಕ್ರಮ್, ಟಿ.ಎಸ್.ಸಿಂಗ್ ಡಿಯೊ ಉಪಸ್ಥಿತರಿರುವ ಸಾಧ್ಯತೆಗಳಿವೆ.
ರಾಜ್ಯಗಳ ಉಸ್ತುವಾರಿಯಾಗಿರುವ ರಣದೀಪ್ ಸಿಂಗ್ ಸುರ್ಜೆವಾಲ ಮತ್ತು ಕರ್ನಾಟಕದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಪಟ್ಟಂತೆ ಉನ್ನತ ಮೂಲದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ದೆಹಲಿ ಪ್ರಯಾಣವನ್ನು ಮುಂದೂಡಿದ್ದಾರೆ.
ಎಐಸಿಸಿಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ನಾಳೆ ದೆಹಲಿಗೆ ಆಗಮಿಸಲಿದ್ದು, ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ. ಆ ಬಳಿಕ ಅಂತಿಮವಾಗಿ ಎಐಸಿಸಿಗೆ ಪಟ್ಟಿಯನ್ನು ರವಾನಿಸುವ ಸಾಧ್ಯತೆಯಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಪಟ್ಟಂತೆ ಈಗಾಗಲೇ ಎರಡು ಬಾರಿ ಸ್ಕ್ರೀನಿಂಗ್ ಸಮಿತಿ ಹಾಗೂ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಸಿ ಚರ್ಚಿಸಲಾಗಿದೆ.
ಹಲವು ಕ್ಷೇತ್ರಗಳಿಗೆ ಅನ್ಯ ಪಕ್ಷಗಳಿಂದ ವಲಸೆ ಬರುವ ನಾಯಕರಿಗೆ ಮಣೆ ಹಾಕುವ ಸಾಧ್ಯತೆ ಇರುವುದರಿಂದ ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
BIG NEWS : ಬೆಂಗಳೂರಲ್ಲಿ ವಾಟರ್ ಟ್ಯಾಂಕರ್‌ಗೆ ರೇಟ್ ಫಿಕ್ಸ್, ಇಲ್ಲಿದೆ ಡೀಟೇಲ್ಸ್
ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಭೆ ನಡೆದ ಬಳಿಕ ಒಮ್ಮೆಲೇ 28 ಕ್ಷೇತ್ರಗಳಿಗೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಲಿದೆ ಎಂದು ತಿಳಿದುಬಂದಿದೆ. ದೆಹಲಿಯಲ್ಲಿಂದು ನಡೆಯಲಿರುವ ಸಭೆಯಲ್ಲಿ ಈಗಾಗಲೇ ರವಾನೆಯಾಗಲಿರುವ ಸಂಭವನೀಯ ಪಟ್ಟಿಯ ಬಗ್ಗೆ ಚರ್ಚಿಸಲಾಗುತ್ತಿದೆ. ಗೊಂದಲ ಇರುವ ಕ್ಷೇತ್ರಗಳ ಬಗ್ಗೆ ಹೈಕಮಾಂಡ್‍ನ ನಿರ್ದೇಶನವನ್ನು ಪಡೆದು ಡಿ.ಕೆ.ಶಿವಕುಮಾರ್ ಮರಳಲಿದ್ದಾರೆ ಎನ್ನಲಾಗಿದೆ. ಬಳಿಕ ರಾಜ್ಯದಲ್ಲಿ ನಡೆಯುವ ಸಭೆ ಮಹತ್ವದ್ದಾಗಲಿದ್ದು, ಕೆಲವೇ ದಿನಗಳಲ್ಲಿ ಟಿಕೆಟ್ ಘೋಷಣೆಯಾಗಲಿದೆ.