ನವದೆಹಲಿ,ಮಾ.11- ಖಾಲಿ ಇರುವ ಇಬ್ಬರು ಚುನಾವಣಾ ಆಯುಕ್ತರುಗಳನ್ನು ಕೇಂದ್ರ ಸರ್ಕಾರ ನೇಮಿಸುವುದಕ್ಕೆ ತಡೆ ನೀಡುವಂತೆ ಕಾಂಗ್ರೆಸ್ ಮುಖಂಡರೊಬ್ಬರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಮಧ್ಯಪ್ರದೇಶದ ಕಾಂಗ್ರೆಸ್ ನಾಯಕರೊಬ್ಬರು 2023 ರ ತೀರ್ಪನ್ನು ಉಲ್ಲೇಖಿಸಿ ಸರ್ಕಾರವನ್ನು ಚುನಾವಣಾ ಆಯುಕ್ತರನ್ನು ನೇಮಿಸದಂತೆ ಸೂಚಿಸಬೇಕು ಎಂದು ಆಗ್ರಹಿಸಿ ಅರ್ಜಿ ಸಲ್ಲಿಸಿದ್ದಾರೆ.
ಅರುಣ್ ಗೋಯೆಲ್ ಅವರ ಇತ್ತೀಚಿನ ರಾಜೀನಾಮೆ ಮತ್ತು ಕಳೆದ ತಿಂಗಳು ಅನುಪ್ ಚಂದ್ರ ಪಾಂಡೆ ಅವರ ನಿವೃತ್ತಿಯ ನಂತರ ಎರಡು ಚುನಾವಣಾ ಆಯುಕ್ತರ ಹುದ್ದೆಗಳು ಖಾಲಿ ಇವೆ. ಮೂರು ಸದಸ್ಯರ ಭಾರತೀಯ ಚುನಾವಣಾ ಆಯೋಗವು ಈಗ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರೊಂದಿಗೆ ಮಾತ್ರ ಉಳಿದಿದೆ. ಹೀಗಾಗಿ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯ ತ್ರಿಸದಸ್ಯ ಸಮಿತಿಯ ಶಿಫರಸಿನ ಮೇರೆಗೆ ರಾಷ್ಟ್ರಪತಿಗಳು ಚುನಾವಣಾ ಆಯುಕ್ತರನ್ನು ನೇಮಿಸುತ್ತಾರೆ. ಕೇಂದ್ರ ಕಾನೂನು ಸಚಿವ ಮತ್ತು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧುರಿ ಅವರನ್ನು ಒಳಗೊಂಡಿರುವ ಉನ್ನತಾಧಿಕಾರ ಸಮಿತಿಯು ಮಾರ್ಚ್ 15 ರಂದು ಸಭೆ ಸೇರುವ ನಿರೀಕ್ಷೆಯಿದೆ.
ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯ ಸಲಹೆಯ ಮೇರೆಗೆ ಚುನಾವಣಾ ಆಯುಕ್ತರನ್ನು ನೇಮಿಸಬೇಕು ಎಂದು ತೀರ್ಪು ನೀಡಿದ ಸಂವಿಧಾನ ಪೀಠದ 2023 ರ ಆದೇಶವನ್ನು ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. 2023ರ ನಿರ್ಧಾರಕ್ಕೆ ಅನುಗುಣವಾಗಿ ಚುನಾವಣಾ ಆಯೋಗಗಳ ನೇಮಕಕ್ಕೆ ಸುಪ್ರೀಂ ಕೋರ್ಟ್‍ಗೆ ನಿರ್ದೇಶನ ನೀಡುವಂತೆ ಠಾಕೂರ್ ಕೋರಿದ್ದಾರೆ.