ಬೆಂಗಳೂರು,ಮಾ.12- ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದರೂ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಸಮಪರ್ಕವಾಗಿ ನಿರ್ವಹಣೆ ಮಾಡಿಲ್ಲ ಎಂದು ಪ್ರತಿಪಕ್ಷ ಬಿಜೆಪಿ, ನೀರಿಲ್ಲ ನೀರಿಲ್ಲ ಎಂದು ಹೇಳುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿತು.
ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಶಾಸಕರಾದ ರವಿ ಸುಬ್ರಹ್ಮಣ್ಯ, ಸಿ.ಕೆ.ರಾಮಮೂರ್ತಿ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್.ಹರೀಶ್, ಸೆಂಟ್ರಲ್ ಅಧ್ಯಕ್ಷ ಸಪ್ತಗಿರಿ ಗೌಡ, ಮುಖ್ಯ ವಕ್ತಾರ ಅಶ್ವಥ್ ನಾರಾಯಣ, ಬಿಬಿಎಂಪಿ ಮಾಜಿ ಸದಸ್ಯರು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಮುಖಂಡರಾದ ಉಮೇಶ್ ಶೆಟ್ಟಿ, ಅರುಣ್ ಸೋಮಣ್ಣ ಸೇರಿದಂತೆ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಕುದುರೆ ಮೇಲೆ ಗಾಡಿಯ ಮೇಲೆ ಖಾಲಿ ಟ್ಯಾಂಕ್, ಅದರ ಮೇಲೆ ಕೊಡ ಇಟ್ಟು ನೂರಾರು ಮಹಿಳೆಯರು ಖಾಲಿ ಹಿಡಿದು ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು.ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸಿರುವ ನೀರಿಲ್ಲ ನೀರಿಲ್ಲ, ಸರ್ಕಾರದ ಬಳಿ ಹಣ ಇಲ್ಲ, ಎಲ್ಲವೂ ಪಾಪರ್ ಎಂದು ವಿನೂತನವಾಗಿ ಕೂಗುತ್ತಾ ಪ್ರತಿಭಟನೆಯನ್ನು ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದ ಬರಗಾಲ ಆವರಿಸಿದೆ. ಕುಡಿಯಲು ನೀರಿಲ್ಲದೆ ಜನರು ಗುಳೇ ಹೋಗುತ್ತಿದ್ದಾರೆ. ಜಾನುವಾರುಗಳು ಕೂಡ ನೀರಿಲ್ಲದಂತಾಗಿದೆ. ಸರ್ಕಾರ ಜನರ ಪಾಲಿಗೆ ಇದ್ದ ಇಲ್ಲದಂತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಬರ ನಿರ್ವಹಣೆ ಮಾಡಬೇಕಿರುವ ಸರ್ಕಾರ ಗ್ಯಾರಂಟಿ ಸಮಾವೇಶಗಳನ್ನು ನಡೆಸುತ್ತಾ ಜನರ ಸಂಕಷ್ಟಗಳಿಗೆ ಸ್ಪಂದಿಸುವುದನ್ನೇ ಮರೆತಿದೆ. ಯಾವೊಬ್ಬ ಸಚಿವರು ಜಿಲ್ಲಾ ಪ್ರವಾಸವನ್ನಾಗಲಿ, ಇಲ್ಲವೇ ಕೆಡಿಪಿ ಸಭೆಯನ್ನು ನಡೆಸಿಲ್ಲ. ಇಂಥ ಸರ್ಕಾರ ನಮಗೆ ಬೇಕೆ ಎಂದು ಪ್ರಶ್ನೆ ಮಾಡಿದರು.
ರಾಜ್ಯದಲ್ಲಿ ನಮಗೆ ನೀರೇ ಇಲ್ಲದಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಿ ಅಲ್ಲಿನ ಡಿಎಂಕೆ ಸರ್ಕಾರವನ್ನು ಸಂತೃಪ್ತಗೊಳಿಸಲು ಹೊರಟಿದೆ. ಕನ್ನಡಿಗರ ವಿಶ್ವಾಸದ್ರೋಹಿ ಸರ್ಕಾರಕ್ಕೆ ಲೋಕಸಭೆ ಚುನಾವಣೆಯಲ್ಲಿ ಸ್ವಾಭಿಮಾನಿ ಕನ್ನಡಿಗರು ತಕ್ಕ ಪಾಠ ಕಲಿಸಬೇಕೆಂದು ಹರೀಶ್ ಕರೆ ಕೊಟ್ಟರು.