ಬೆಂಗಳೂರು,ಮಾ.13- ಲೋಕಸಭಾ ಚುನಾವಣೆಗೆ ಸಾಕಷ್ಟು ಆಳೆದು ತೂಗಿ ಕೊನೆಗೂ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿರುವ ಕೇಂದ್ರ ಬಿಜೆಪಿ ವರಿಷ್ಠರು ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಇಂದು 18ರಿಂದ 20 ಕ್ಷೇತ್ರಗಳ ಪಟ್ಟಿಯನ್ನು ಬಡುಗಡೆ ಮಾಡುವ ಸಾಧ್ಯತೆ ಇದೆ.
ಒಂದಿಷ್ಟು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ಅಕೃತ ಘೋಷಣೆಯಷ್ಟೇ ಬಾಕಿಯಿದೆ. ಇದೇ ಸಂದರ್ಭದಲ್ಲಿ ಅನೇಕ ಟಿಕೆಟ್ ಆಕಾಂಕ್ಷಿಗಳಿಗೆ ಶಾಕ್ ಕಾದಿದೆ ಎನ್ನಲಾಗಿದೆ.17 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಬಹುತೇಕ ಅಂತಿಮವಾಗಿದ್ದು, ಕೊನೆ ಕ್ಷಣದ ಬದಲಾವಣೆ ಹೊರತುಪಡಿಸಿ ಬಹುತೇಕ ಇಂದೇ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಬಹುದು.
ಶೋಭಾ ಕರಂದ್ಲಾಜೆ ಅವರನ್ನು ಉಡುಪಿ – ಚಿಕ್ಕಮಗಳೂರಿನಿಂದ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ವರ್ಗಾಯಿಸುವ ಸಾಧ್ಯತೆ ಇದೆ. ಮೈಸೂರು-ಕೊಡಗು ಕ್ಷೇತ್ರದಿಂದ ಪ್ರತಾಪ್ ಸಿಂಹ ಹಾಗೂ ಉತ್ತರ ಕನ್ನಡ ಕ್ಷೇತ್ರದಿಂದ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ಕೈತಪ್ಪುತ್ತದೆ ಎನ್ನಲಾಗಿದೆ
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಹರಿಯಾಣದ ಕ್ಷೇತ್ರಗಳ ಬಗ್ಗೆ ಸೋಮವಾರದ ಸಿಇಸಿ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಎರಡನೇ ಪಟ್ಟಿಯಲ್ಲಿ 100ರಿಂದ 150 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ. ಅದರಲ್ಲಿ ರಾಜ್ಯದ 20ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರದ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಮೊದಲ ಹಂತದಲ್ಲಿ ಬಿಜೆಪಿ 195 ಕ್ಷೇತ್ರಗಳಿಗೆ ಹೆಸರನ್ನು ಘೋಷಿಸಿತ್ತು.
ರಾಜ್ಯದ 28 ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳನ್ನು ಜೆಡಿಎ¸ಗೆ ಮೀಸಲಿಡಲಾಗಿದೆ ಎಂದು ಬಿಜೆಪಿ ರಾಜಾ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಅವು ಮಂಡ್ಯ ಮತ್ತು ಹಾಸನ ಎಂದು ತಿಳಿದುಬಂದಿದೆ. ಇನ್ನು ಪಟ್ಟಿಯಲ್ಲಿ ಹಲವು ಅಚ್ಚರಿಗಳು ಇರಲಿವೆ. ಹೊಸ ಮುಖಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿರುವುದು ಕೂಡ ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕದ ಕೆಲವು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಕೆಲವು ಅಭ್ಯರ್ಥಿಗಳಿಗೆ ಪ್ರಬಲ ಬೆಂಬಲ ಮತ್ತು ವಿರೋಧ ಎರಡೂ ಇರುವುದರಿಂದ ಪಕ್ಷದ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ನಡುವೆ ಭಿನ್ನಾಭಿಪ್ರಾಯ ಇರುವುದರಿಂದ ಕೆಲವು ಕ್ಷೇತ್ರಗಳನ್ನು ತಡೆಹಿಡಿಯಲಾಗುತ್ತದೆ ಎಂದು ತಿಳಿದುಬಂದಿದೆ.
ಹಾಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಗೆ ಮೈಸೂರು-ಕೊಡಗು ಟಿಕೆಟ್ ನೀಡಬೇಕೆಂದು ನೆಟ್ಟಿಗರು ಮತ್ತು ಪಕ್ಷದ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಮೈಸೂರಿನಲ್ಲಿ ಪಕ್ಷದ ಕೆಲವು ಮುಖಂಡರು 32 ವರ್ಷದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.
ಉಡುಪಿ-ಚಿಕ್ಕಮಗಳೂರಿನಲ್ಲಿ ಹಾಲಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿ ಕಾರ್ಯಕರ್ತರ ತೀವ್ರ ವಿರೋಧ ವ್ಯಕ್ತವಾಗಿದ್ದು, ಗೋ ಬ್ಯಾಕ್ ಶೋಭಾ ಅಭಿಯಾನವನ್ನೂ ಆರಂಭಿಸಿದ್ದಾರೆ. ಒಂದು ವೇಳೆ ಶೋಭಾ ವಿರುದ್ಧ ವಿರೋಧ ಮುಂದುವರಿದರೆ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸಲು ಪಕ್ಷದ ಮುಖಂಡರು ಉತ್ಸುಕರಾಗಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ಹಾಲಿ ಸಂಸದ ಡಿ.ವಿ.ಸದಾನಂದಗೌಡ ಕೂಡ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಬೆಂಬಲವಿದ್ದರೂ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ.ದಕ್ಷಿಣ ಕನ್ನಡ ಸಂಸದ ನಳೀನ್ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನೀಡಲು ದೆಹಲಿಯ ಪಕ್ಷದ ನಾಯಕರು ಒಲವು ತೋರುತ್ತಿಲ್ಲ. ಅವರಿಗೆ ಟಿಕೆಟ್ ನೀಡದಿದ್ದರೆ ಹೆಗಡೆ ಮತ್ತು ಕರಂದ್ಲಾಜೆ ಅವರಿಗೂ ಟಿಕೆಟ್ ಸಿಗದಿರುವ ಸಾಧ್ಯತೆಗಳಿವೆ. ಪಕ್ಷದ ಹೈಕಮಾಂಡ್ ಈ ಬಗ್ಗೆ ಇನ್ನೂ ನಿರ್ಧರಿಸಿಲ್ಲ.
ಕೆಲವರು ಸ್ವಯಂ ನಿವೃತ್ತಿ ಘೋಷಿಸಿದರೆ, ಪಕ್ಷದ ನಾಯಕರು ಸಂಸದರ ಕಾರ್ಯವೈಖರಿ, ಜಾತಿ ಸಂಯೋಜನೆ ಮತ್ತು ಇತರ ಅಂಶಗಳನ್ನು ಪರಿಗಣಿಸುತ್ತಾರೆ, ಇವೆಲ್ಲವನ್ನೂ ಪರಿಗಣಿಸಿ ಹಲವು ಬದಲಾವಣೆಗಳಾಗಬಹುದು. ನಮ್ಮ ಪಕ್ಷವು ನಿರಂತರವಾಗಿ ಬದಲಾಗುತ್ತಿರುತ್ತದೆ ಮತ್ತು ಹೊಸ ಮುಖಗಳಿಗೆ ಅವಕಾಶಗಳನ್ನು ನೀಡುತ್ತದೆ, ನಾವು ಆಶ್ಚರ್ಯಕರ ಮುಖಗಳನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಪಕ್ಷದ ಪ್ರಮುಖರೊಬ್ಬರು ತಿಳಿಸಿದ್ದಾರೆ.
ಯಾರಿಗೆ ಲಕ್?
ಬೆಳಗಾವಿ – ಜಗದೀಶ್ ಶೆಟ್ಟರ್
ಚಿಕ್ಕೋಡಿ – ರಮೇಶ್ ಕತ್ತಿ
ಹುಬ್ಬಳ್ಳಿ – ಧಾರವಾಡ – ಪ್ರಹ್ಲಾದ್ ಜೋಶಿ
ವಿಜಯಪುರ – ಗೋವಿಂದ ಕಾರಜೋಳ
ಕಲಬುರಗಿ – ಡಾ.ಉಮೇಶ್ ಜಾಧವ್
ಹಾವೇರಿ – ಬಸವರಾಜ ಬೊಮ್ಮಾಯಿ
ಶಿವಮೊಗ್ಗ – ಬಿ.ವೈ.ರಾಘವೇಂದ್ರ
ಚಿತ್ರದುರ್ಗ – ನಾರಾಯಣಸ್ವಾಮಿ
ತುಮಕೂರು – ವಿ.ಸೋಮಣ್ಣ
ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ
ಬೆಂಗಳೂರು ಕೇಂದ್ರ – ಪಿ.ಸಿ.ಮೋಹನ್
ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ
ಬೆಂಗಳೂರು ಗ್ರಾಮಾಂತರ – ಡಾ ಸಿ.ಎನ್. ಮಂಜುನಾಥ್
ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ್/ ಅಲೋಕ್ ವಿಶ್ವನಾಥ್
ದಕ್ಷಿಣ ಕನ್ನಡ – ಬ್ರಿಜೇಶ್ ಚೌಟಾ (ಎಲ್)
ಚಾಮರಾಜನಗರ – ಡಾ ಮೋಹನ್ ಕುಮಾರ್
ಬಳ್ಳಾರಿ – ಬಿ.ಶ್ರೀರಾಮುಲು
ಉಡುಪಿ-ಚಿಕ್ಕಮಂಗಳೂರು- ಸಿ.ಟಿ.ರವಿ/ಜೀವರಾಜ್
ಕೊಡಗು-ಮೈಸೂರು -ಯದುವೀರ್ ಒಡೆಯರ್
ಉತ್ತರಕನ್ನಡ- ಗೋಪಾಲ್ ಹೆಗಡೆ
ಯಾರಿಗೆ ಶಾಕ್?
ಮೈಸೂರು – ಕೊಡಗು – ಪ್ರತಾಪ್ ಸಿಂಹ
ಉತ್ತರ ಕನ್ನಡ – ಅನಂತ್ ಕುಮಾರ್ ಹೆಗಡೆ
ದಾವಣಗೆರೆ – ಜಿಎಂ ಸಿದ್ದೇಶ್ವರ್
ದಕ್ಷಿಣ ಕನ್ನಡ – ನಳಿನ್ ಕುಮಾರ್ ಕಟೀಲ್
ಕೊಪ್ಪಳ – ಸಂಗಣ್ಣ ಕರಡಿ
ಬಳ್ಳಾರಿ – ವೈ ದೇವೇಂದ್ರಪ್ಪ
ವಿಜಯಪುರ – ರಮೇಶ್ ಜಿಗಜಿಣಗಿ
ಬೆಳಗಾವಿ – ಮಂಗಳಾ ಅಂಗಡಿ
ಬೆಂಗಳೂರು ಉತ್ತರ – ಡಿವಿ ಸದಾನಂದ ಗೌಡ
ಬೀದರ್ – ಭಗವಂತ್ ಖೂಬಾ