ಹಾಸನ, ಮಾ.13- ಜಿಲ್ಲೆಯಲ್ಲಿಯೇ ನೀರಿಗೆ ಬರ ಎದುರಾಗಿರುವಾಗ ಗೊರೂರಿನ ಹೇಮಾವತಿ ಜಲಾಶಯದಿಂದ ತುಮಕೂರಿಗೆ ಸುಮಾರು ಎರಡು ಟಿಎಂಸಿ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.ತುಮಕೂರು ಜಿಲ್ಲಾ ವ್ಯಾಪ್ತಿಯ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲು ಹೇಮಾವತಿ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ.ಈ ಸಂಬಂಧ ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಹಾಗೂ ಸೂಪರಿಂಟೆಂಡೆಂಟ್ ಇಂಜಿನಿರ್ಯ ಜಿ.ಕೆ. ಜ್ಯೋತಿ ಆದೇಶ ಹೊರಡಿಸಿದ್ದಾರೆ.
ಹೇಮಾವತಿ ಜಲಾಶಯದಿಂದ ಹೇಮಾವತಿ ನಾಲಾ ವಲಯದ ತುಮಕೂರು ವ್ಯಾಪ್ತಿಯಲ್ಲಿ ಬರುವ ಶಾಖಾ ನಾಲೆಯಿಂದ ಬುಗುಡನಹಳ್ಳಿ ಜಲ ಸಂಗ್ರಹಾರ ಹಾಗೂ ಇತರೆ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಹರಿಸಲಾಗುತ್ತಿದೆ.
ಪ್ರಸ್ತುತ ಲಭ್ಯವಿರುವ ನೀರಿನ ಪ್ರಮಾಣ ತುಂಬಾ ಕಡಿಮೆ ಹಾಗೂ ಖಾಲಿಯಾಗಿರುವುದರಿಂದ ಇದನ್ನು ಗಮನಿಸಿ ಮಾರ್ಚ್ 11 ರಂದು ಹೇಮಾವತಿ ಜಲಾಶಯದಲ್ಲಿ ಬಳಕೆ ಮಾಡಬಹುದಾದ ಲಭ್ಯವಿರುವ ನೀರನ್ನು ಬಿಡಲಾಗುತ್ತಿದೆ. 2023 ಅಕ್ಟೋಬರ್ 19ರಂದು ನಡೆದ ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು ತುಮಕೂರು ನಾಲಾವಲಯಕ್ಕೆ ಕುಡಿಯುವ ನೀರಿಗಾಗಿ ಎರಡು ಟಿಎಂಸಿ ಪ್ರಮಾಣದಷ್ಟು ನೀರನ್ನು ಹರಿಸಲು ಸಮಿತಿ ಅಧ್ಯಕ್ಷರು ನಿರ್ದೇಶನ ನೀಡಿದ್ದಾರೆ.
ಅದರಂತೆ ಕುಡಿಯುವ ನೀರಿಗಾಗಿ ಮೀಸಲಿಟ್ಟಿರುವ ಪ್ರಮಾಣದಷ್ಟು ನೀರನ್ನು ಮಾರ್ಚ್ 12 ರಿಂದ ಹೇಮಾವತಿ ಜಲಾಶಯದ ಎಡದಂಡೆ ನಾಲೆ ಮೂಲಕ ಹರಿಸಲಾಗುತ್ತಿದೆ. ಪ್ರಸ್ತುತ ಬರಗಾಲವಿರುವುದರಿಂದ ನೀರಿನ ಅಭಾವವಿದೆ ನೀರಿನ ಅಚ್ಚು ಕಟ್ಟು ವ್ಯಾಪ್ತಿಯಲ್ಲಿನ ಯಾವುದೇ ಕೃಷಿ ಚಟುವಟಿಕೆಗಳಿಗೆ ಬಳಸತಕ್ಕದ್ದಲ್ಲ ಈ ಸಂದರ್ಭದಲ್ಲಿ ಯೋಜನೆ ವ್ಯಾಪ್ತಿಯಲ್ಲಿನ ಸಂಬಂಧ ಪಟ್ಟ ಎಲ್ಲಾ ಅಧಿಕಾರಿಗಳು ನೀರು ಪೊಲಾಗದಂತೆ ಎಲ್ಲ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ .
ಎಡದಂಡೆ ನಾಲೆಯ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ಹಾಗೂ ರೈತರಿಗೆ ಸೂಕ್ತ ತಿಳುವಳಿಕೆ ನೀಡಬೇಕು ಅಗತ್ಯ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ ಹಾಗೂ ಈ ಬಗ್ಗೆ ಯೋಜನಾ ವ್ಯಾಪ್ತಿಯಲ್ಲಿ ಬರುವಂತಹ ರೈತರಿಗೆ ಸಾರ್ವಜನಿಕರಿಗೆ ಸುಗಮ ನೀರು ನಿರ್ವಹಣೆ ನಡೆಸುವ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.