ಹನೂರು,ಮಾ.14- ಸಾರಿಗೆ ಬಸ್ಸನ್ನು ನಿರ್ವಾಹಕ ಚಾಲನೆ ಮಾಡಿದ್ದರಿಂದ ಅಪಘಾತ ಸಂಭವಿಸಿದ್ದು, ಪ್ರಯಾಣಿಕರು ಪ್ರಾಣಾಪಾದಯದಿಂದ ಪಾರಾಗಿರುವ ಘಟನೆ ತಾಲ್ಲೂಕಿನ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ಬಳಿ ನಡೆದಿದೆ. ಕೊಳ್ಳೇಗಾಲದಿಂದ ಮಂಗಲ ಚನ್ನಾಲಿಂಗನಹಳ್ಳಿ ಕಂಡಯ್ಯನಪಾಳ್ಯ ಲೊಕ್ಕನಹಳ್ಳಿ ಮಾರ್ಗವಾಗಿ ಬೈಲೂರಿನ ಕಡೆಗೆ ಸಾಗುತ್ತಿದ್ದ ಸರ್ಕಾರಿ ಸಾರಿಗೆ ವಾಹನವನ್ನು ಚಾಲಕನ ಬೇಜವಾಬ್ದಾರಿಯಿಂದ ತಾನು ಚಾಲನೆ ಮಾಡುವ ಬದಲು ಕಂಡಕ್ಟರ್ ಕೈಗೆ ಚಾಲನೆ ಮಾಡಲು ಬಸ್ಸನ್ನು ಕೊಟ್ಟಿದ್ದರಿಂದ ಅಪಘಾತಕ್ಕೆ ಕಾರಣವಾಗಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ವಾಹನ ತುಂಬಾ ಹಳೆಯದಾಗಿದೆ. ಮತ್ತು ಅಪಘಾತಕ್ಕೀಡಾದ ವಾಹನದಲ್ಲಿ ಶಾಲಾ ಮಕ್ಕಳು ಸೇರಿದಂತೆ 30 ರಿಂದ 35 ಮಂದಿ ಪ್ರಯಾಣಿಕರು ಇದ್ದರು. ಅದರಲ್ಲಿ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.ಚಾಲಕ ಮತ್ತು ಕಂಡಕ್ಟರ್ ಬೇಜವಾಬ್ದಾರಿ ಕರ್ತವ್ಯ ನಿರ್ವಹಣೆಯಿಂದ ಬಸ್ ಅಪಘಾತಕ್ಕೀಡಾಗಿದೆ.
ಈ ಇಬ್ಬರು ನೌಕರರನ್ನು ಸೇವೆಯಿಂದ ಅಮಾನತುಪಡಿಸಿ ಕಾನುನೂ ರೀತ್ಯಾ ಕ್ರಮ ಕೈಗೊಳ್ಳಬೇಕು ಮತ್ತು ಗ್ರಾಮೀಣ ಭಾಗಕ್ಕೆ ಹಳೆ ವಾಹನ ಬಿಡುವುದನ್ನು ನಿಲ್ಲಿಸಿ ಉತ್ತಮ ಹಾಗೂ ಹೊಸದಾದ ವಾಹನಗಳನ್ನು ಬಿಡಬೇಕು. ಕಳೆದೊಂದು ವರ್ಷದಲ್ಲಿ ಇದೆ ರೀತಿ ನಿರ್ಲಕ್ಷ್ಯ ವಹಿಸಿದ್ದರಿಂದ 5-6 ಮಂದಿ ಪ್ರಾಣ ಕಳೆದುಕೊಂಡರು. ಆಗಾಗಿ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದರು.
ನಿರ್ಲಕ್ಷ್ಯ ತೋರಿದ ಚಾಲನ ಮತ್ತು ನಿರ್ವಾಹಕನನ್ನು ತಕ್ಷಣ ಅಮಾನತುಪಡಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಪಿ.ಜಿ.ಪಾಳ್ಯ ಗ್ರಾ.ಪಂ. ಮಾಜಿ ಅಧ್ಯಕ್ಷ ಕೃಷ್ಣ ಮೂರ್ತಿ ಆಗ್ರಹಿಸಿದ್ದಾರೆ.