ಕುರುಕ್ಷೇತ್ರ, ಆ.24- ಮಹಿಳೆಯೊಬ್ಬರು ಪತಿಯನ್ನು ಕೊಲೆ ಮಾಡಿ, ಬಳಿಕ ಆತನ ಹೊಟ್ಟೆ ಬಗೆದು ಹೊರಬಂದಿದ್ದ ಕರುಳನ್ನು ಪ್ಲಾಸ್ಟಿಕ್ ಚೀಲಕ್ಕೆ ತುಂಬಿದ ಭೀಕರ ಘಟನೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದಿದೆ. ಪೆಹೋವಾ ರಸ್ತೆಯ ರಾಜ್ ಪ್ಯಾಲೇಸ್ ಸಮೀಪದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಮೃತನನ್ನು ಉತ್ತರ ಪ್ರದೇಶದ ಧಾಂಪುರ ಗ್ರಾಮದ ನಿವಾಸಿ ರಾಜೇಶ್ (40) ಎಂದು ಗುರುತಿಸಲಾಗಿದೆ. ಅವರು ಸುಮಾರು ಒಂದು ವರ್ಷದಿಂದ ಪತ್ನಿ ವಿಮ್ಲಾ ದೇವಿ ಜತೆ ಇಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರಾಜೇಶ್ ಖಾಸಗಿ ಕಂಪನಿಯೊಂದರಲ್ಲಿ ನೀರು ಪೂರೈಕೆ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಮನೆಯ ಮಾಲೀಕ ರಿಂಕು ಅವರ ಪ್ರಕಾರ, ಶನಿವಾರ ಸಂಜೆ ಸುಮಾರು 5 ಗಂಟೆಗೆ ದಂಪತಿ ಜೋರಾಗಿ ಜಗಳವಾಡುತ್ತಿರುವುದು ಕೇಳಿಸಿತ್ತು. ಮಹಡಿಗೆ ತೆರಳಿ ನೋಡಿದಾಗ ರಾಜೇಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಹೊಟ್ಟೆಯಲ್ಲಿ ಆಳವಾದ ಗಾಯವಾಗಿತ್ತು. ಅಲ್ಲದೆ, ವಿಮ್ಲಾ ದೇವಿ ಆತನ ಹೊಟ್ಟೆಯಿಂದ ಹೊರಬಂದಿದ್ದ ಕರುಳನ್ನು ಪ್ಲಾಸ್ಟಿಕ್ ಚೀಲಕ್ಕೆ ಹಾಕುತ್ತಿದ್ದುದನ್ನು ಕಂಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಮನೆಯ ಮಾಲೀಕನನ್ನು ನೋಡಿದ ದೇವಿ ಗಾಬರಿಗೊಂಡು ಮಹಡಿಯಿಂದ ಕೆಳಗೆ ಜಿಗಿದಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ನಡುವೆ, ಮರಣೋತ್ತರ ಪರೀಕ್ಷೆಯಲ್ಲಿ ಮೃತನ ಯಕೃತ್ತಿನ ಅರ್ಧದಷ್ಟು ಭಾಗ ಹಾಗೂ ಬಲ ಮೂತ್ರಪಿಂಡ ನಾಪತ್ತೆಯಾಗಿರುವುದು ಪತ್ತೆಯಾಗಿದೆ. ಅಂಗಗಳು ನಾಪತ್ತೆಯಾಗಿರುವುದಕ್ಕೂ ಕೊಲೆಗೂ ಸಂಬಂಧವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಿಂದ ವಿವಿಧ ಗಾತ್ರದ ಮೂರು ಚಾಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮನೆಯ ಮಾಲೀಕರ ಪ್ರಕಾರ, ದೇವಿ ಸಾಂಪ್ರದಾಯಿಕ ಚಿಕಿತ್ಸೆ ಹಾಗೂ ಮಾಟ-ಮಂತ್ರದಂತಹ ಆಚರಣೆಗಳಲ್ಲಿ ತೊಡಗಿಸಿಕೊಂಡಿದ್ದರು. ದಂಪತಿ ಆಗಾಗ್ಗೆ ಜಗಳವಾಡುತ್ತಿದ್ದರು ಎನ್ನಲಾಗಿದೆ. ಹಲವು ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಗೆ ಮಕ್ಕಳಿರಲಿಲ್ಲ. ಆದರೆ, ಕೊಲೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ದೇವಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸುಧಾರಿಸಿದ ಬಳಿಕ ಅವರನ್ನು ವಿಚಾರಣೆ ನಡೆಸಲಾಗುವುದು ಎಂದು ಆದರ್ಶ ಪೊಲೀಸ್ ಠಾಣೆಯ ಸುರೇಂದ್ರ ಸಂಧು ತಿಳಿಸಿದ್ದಾರೆ. ಬಳಿಕ ಬಂಧನ ಹಾಗೂ ವಿಚಾರಣೆಗೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಕೊಲೆಯ ಹಿಂದಿನ ಕಾರಣ ಹಾಗೂ ಯಕೃತ್ತು ಮತ್ತು ಮೂತ್ರಪಿಂಡ ನಾಪತ್ತೆಯಾಗಿರುವುದರ ನಡುವಿನ ಸಂಬಂಧದ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
