ನವದೆಹಲಿ, ಆ.28- ಸಹೋದರ-ಸಹೋದರಿಯರ ನಡುವಿನ ಪವಿತ್ರ ಪ್ರೀತಿ ಮತ್ತು ಬಾಂಧವ್ಯದ ಸಂಕೇತವಾದ ರಕ್ಷಾಬಂಧನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಶುಭಾಶಯ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ‘ರಕ್ಷಾಬಂಧನದ ಈ ಪವಿತ್ರ ಸಂದರ್ಭದಲ್ಲಿ ಎಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು. ಈ ಪಾವನ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಸುಖ, ಸಮೃದ್ಧಿ ಮತ್ತು ಯಶಸ್ಸನ್ನು ತರಲಿ’ ಎಂದು ಹಾರೈಸಿದ್ದಾರೆ. ಸಹೋದರ-ಸಹೋದರಿಯರ ನಡುವಿನ ವಾತ್ಸಲ್ಯ, ಪರಸ್ಪರ ನಂಬಿಕೆ ಹಾಗೂ ಪ್ರೀತಿಯ ಪವಿತ್ರ ಬಾಂಧವ್ಯ ಸದಾ ಅಚಲವಾಗಿ, ಎಂದಿಗೂ ಮುರಿಯದಂತೆ ಶಾಶ್ವತವಾಗಿ ಉಳಿಯಲಿ ಎಂದು ಅವರು ಆಶಿಸಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ಪ್ರಧಾನಿ ಮೋದಿ ಅವರ ಅಧಿಕೃತ ನಿವಾಸದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿನಿಯರು ಸೇರಿದಂತೆ ಸಾರ್ವಜನಿಕರು ಪ್ರಧಾನಿಗೆ ರಾಖಿ ಕಟ್ಟಿ ರಕ್ಷಾಬಂಧನವನ್ನು ಸಂಭ್ರಮದಿಂದ ಆಚರಿಸಿದರು.ದೇಶದ ಗಡಿ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಸೇನೆ ಹಾಗೂ ಭದ್ರತಾ ಪಡೆಗಳ ಯೋಧರಿಗೂ ದೇಶಾದ್ಯಂತ ಮಹಿಳೆಯರು ಮತ್ತು ಮಕ್ಕಳು ಪ್ರೀತಿಯಿಂದ ರಾಖಿ ಕಳುಹಿಸುವ ಮೂಲಕ ರಕ್ಷಾಬಂಧನದ ಶುಭಾಶಯಗಳನ್ನು ತಿಳಿಸಿದ್ದಾರೆ.
ರಕ್ಷಾಬಂಧನ ಕೇವಲ ರಾಖಿ ಕಟ್ಟುವ ಹಬ್ಬವಲ್ಲ. ಇದು ಮಹಿಳೆಯರ ಗೌರವ, ಸುರಕ್ಷತೆ ಹಾಗೂ ನಾರಿ ಶಕ್ತಿಯ ಸಬಲೀಕರಣದ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುವ ಸಂದರ್ಭವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಗಣ್ಯರು ಶುಭ ಹಾರೈಸಿದ್ದಾರೆ.
