ಬೆಂಗಳೂರು, ಆ.28- ಕೇಂದ್ರ ರೈಲ್ವೆ ಇಲಾಖೆ ಘೋಷಿಸಿರುವ ಹೊಸ ಯೋಜನೆಗಳಲ್ಲಿ ಕರ್ನಾಟಕಕ್ಕೆ ಸೂಕ್ತ ಆದ್ಯತೆ ನೀಡದೆ ಮಲತಾಯಿ ಧೋರಣೆ ಅನುಸರಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಆರೋಪಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಏಳು ರೈಲ್ವೆ ಮಾರ್ಗಗಳ ಯೋಜನೆಗಳನ್ನು ಘೋಷಿಸಿದ್ದು, ಇದರಲ್ಲಿ ನಾಲ್ಕು ಹೊಸ ಚತುಷ್ಪಥ ರೈಲು ಮಾರ್ಗಗಳೂ ಸೇರಿವೆ. ದೆಹಲಿ, ಮುಂಬೈ, ಚೆನ್ನೈ ಹಾಗೂ ಗೋವಾ ಸೇರಿದಂತೆ ವಿವಿಧ ನಗರಗಳನ್ನು ಸಂಪರ್ಕಿಸುವ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಆದರೆ, ಈ ಯೋಜನೆಗಳಲ್ಲಿ ಕರ್ನಾಟಕಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಪ್ರಮುಖ ರೈಲ್ವೆ ಮಾರ್ಗವೊಂದು ಹಾದುಹೋಗದ ರೀತಿಯಲ್ಲಿ ಯೋಜನೆ ರೂಪಿಸಿರುವುದು ಸರಿಯಲ್ಲ. ರಾಜ್ಯಕ್ಕೆ ನಿರಂತರವಾಗಿ ಮಲತಾಯಿ ಧೋರಣೆ ತೋರುತ್ತಿರುವುದು ಅನ್ಯಾಯ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಿಂದ 10ಕ್ಕೂ ಹೆಚ್ಚು ಬಿಜೆಪಿ ಸಂಸದರು ಹಾಗೂ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರಿದ್ದರೂ ರಾಜ್ಯದ ರೈಲ್ವೆ ಯೋಜನೆಗಳಿಗೆ ನಿರೀಕ್ಷಿತ ಆದ್ಯತೆ ದೊರೆಯುತ್ತಿಲ್ಲ. ಈ ಸಮಸ್ಯೆಯನ್ನು ರಾಜ್ಯದ ರೈಲ್ವೆ ಸಚಿವರು ಹೇಗೆ ಬಗೆಹರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.
ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ತುಮಕೂರು, ಬೆಂಗಳೂರು-ಕಲಬುರಗಿ ಹಾಗೂ ಬೆಂಗಳೂರು-ಮಂಗಳೂರು ಸೇರಿದಂತೆ ಹಲವು ಪ್ರಮುಖ ರೈಲ್ವೆ ಮಾರ್ಗಗಳ ಕುರಿತು ರಾಜ್ಯ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಕೇಂದ್ರದಿಂದ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಮಂಗಳೂರು ರೈಲ್ವೆ ವ್ಯಾಪ್ತಿಯ ವಿಚಾರದಲ್ಲೂ ಹಲವು ಸಮಸ್ಯೆಗಳಿವೆ. ಸುಮಾರು 330 ಕಿ.ಮೀ. ಉದ್ದದ ಕರಾವಳಿ ಪ್ರದೇಶ ಹೊಂದಿರುವ ಕರ್ನಾಟಕದಲ್ಲಿ ಸರಕು ಸಾಗಣೆ ಹಾಗೂ ಪ್ರಯಾಣಿಕರ ಸಂಚಾರ ಸುಗಮವಾಗಲು ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು.
ಬೆಂಗಳೂರು-ಮಂಗಳೂರು ಜೋಡಿ ರೈಲು ಮಾರ್ಗ, ಹುಬ್ಬಳ್ಳಿ-ಅಂಕೋಲಾ ಜೋಡಿ ಮಾರ್ಗ, ಬೆಂಗಳೂರು-ವಿಜಯಪುರ ಹಾಗೂ ಬೆಂಗಳೂರು-ಚೆನ್ನೈ ಸಂಪರ್ಕ ಸೇರಿದಂತೆ ಹಲವು ಯೋಜನೆಗಳಿಗೆ ಆದ್ಯತೆ ನೀಡಬೇಕು. ಜೋಡಿ ಹಾಗೂ ಚತುಷ್ಪಥ ರೈಲು ಮಾರ್ಗಗಳಿಂದ ಪ್ರಯಾಣಿಕರ ಜತೆಗೆ ಕೈಗಾರಿಕೆಗಳು ಮತ್ತು ಸರಕು ಸಾಗಣೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಬೆಂಗಳೂರು ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ, ಸಂಶೋಧನೆ ಹಾಗೂ ನವೋದ್ಯಮ ಕೇಂದ್ರವಾಗಿ ಬೆಳೆಯುತ್ತಿದೆ. ಹೀಗಾಗಿ ರಾಜ್ಯದ ರೈಲ್ವೆ ಮೂಲಸೌಕರ್ಯವನ್ನು ಬಲಪಡಿಸುವುದು ಅತ್ಯಗತ್ಯ. ದಾವಣಗೆರೆ-ತುಮಕೂರು ರೈಲು ಮಾರ್ಗವನ್ನೂ ಜೋಡಿ ಮಾರ್ಗವಾಗಿ ಅಭಿವೃದ್ಧಿಪಡಿಸಿದರೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಿದರು.
ಕರ್ನಾಟಕಕ್ಕೂ ಹೈಸ್ಪೀಡ್ ರೈಲು ಯೋಜನೆ ಅಗತ್ಯವಿದೆ. ಮುಂಬೈ-ಪುಣೆ ಹಾಗೂ ಹೈದರಾಬಾದ್ ಕಡೆಗೆ ಹೈಸ್ಪೀಡ್ ರೈಲು ಯೋಜನೆಗಳ ಕುರಿತು ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಮುಂಬೈ-ಬೆಂಗಳೂರು ಹೈಸ್ಪೀಡ್ ರೈಲು ಸಂಪರ್ಕಕ್ಕೂ ಆದ್ಯತೆ ನೀಡಬೇಕು. ಈ ಕುರಿತು ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಿದೆ ಎಂದರು.
ಬೆಂಗಳೂರು-ಹುಬ್ಬಳ್ಳಿ-ಪುಣೆ ಮಾರ್ಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಮೇಲೂ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚತುಷ್ಪಥ ರೈಲು ಮಾರ್ಗಗಳನ್ನು ನಿರ್ಮಿಸಿದರೆ ರಸ್ತೆ ಜಾಲದ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ರೈಲ್ವೆ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು 50:50 ಅನುಪಾತದಲ್ಲಿ ಸಹಭಾಗಿತ್ವ ವಹಿಸುತ್ತಿವೆ. ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಇನ್ನಷ್ಟು ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.
ಈ ಕುರಿತು ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ ಪಾಟೀಲ್, ಮುಖ್ಯಮಂತ್ರಿ ಅವರಿಂದಲೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಸುವಂತೆ ಮನವಿ ಮಾಡುವುದಾಗಿ ಹೇಳಿದರು. ‘ರಾಜ್ಯಕ್ಕೆ ಸೂಕ್ತ ನ್ಯಾಯ ಸಿಗಬೇಕು. ಈ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ’ ಎಂದರು.
ಕೆಪಿಎಸ್ಸಿ ವಿಚಾರದಲ್ಲೂ ಕುಮಾರಸ್ವಾಮಿಗೆ ತಿರುಗೇಟು
ಉಪ ಮುಖ್ಯಮಂತ್ರಿ ಹುದ್ದೆ ಕುರಿತು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಕೈಗೊಂಡಿದೆ. ಹೆಚ್ಚು ಹುದ್ದೆಗಳಿದ್ದರೆ ಗೊಂದಲ ಉಂಟಾಗಬಹುದು ಎಂಬ ಕಾರಣಕ್ಕೆ ಒಂದೇ ಉಪ ಮುಖ್ಯಮಂತ್ರಿ ಹುದ್ದೆ ಉಳಿಸಿಕೊಂಡಿರಬಹುದು. ಪರಮೇಶ್ವರ್ ಹಿರಿಯ ನಾಯಕರಾಗಿದ್ದು, ಅವರಿಗೆ ಅವಕಾಶ ಸಿಕ್ಕಿರುವುದು ವೈಯಕ್ತಿಕವಾಗಿ ಸಂತೋಷ ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ತಮ್ಮೊಂದಿಗೆ ಚರ್ಚಿಸುವಾಗ ಒಂದೇ ಉಪ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಸೂಚನೆ ನೀಡಿದ್ದರು ಎಂದು ಪಾಟೀಲ್ ಹೇಳಿದರು.
ತಾವು ಅಧಿಕಾರಕ್ಕೆ ಬಂದರೆ ಕೆಪಿಎಸ್ಸಿಯನ್ನು ಸ್ವಚ್ಛಗೊಳಿಸುವುದಾಗಿ ಎಚ್.ಡಿ. ಕುಮಾರಸ್ವಾಮಿ ಹೇಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಈ ಹಿಂದೆ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಕೆಪಿಎಸ್ಸಿಯನ್ನು ಏಕೆ ಸ್ವಚ್ಛಗೊಳಿಸಲಿಲ್ಲ?’ ಎಂದು ಪ್ರಶ್ನಿಸಿದರು.
ಕೆಪಿಎಸ್ಸಿಗೆ ಅಧ್ಯಕ್ಷರನ್ನು ನೇಮಿಸಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ. ನೈಸ್ ಯೋಜನೆ ಹಾಗೂ ಬಿಡದಿ ಉಪನಗರ ಯೋಜನೆಗಳ ಸೃಷ್ಟಿಕರ್ತರು ಕುಮಾರಸ್ವಾಮಿ ಹಾಗೂ ಅವರ ಪಕ್ಷವೇ. ಅವರೇ ನಿರ್ಧಾರಗಳನ್ನು ಕೈಗೊಂಡು ಇದೀಗ ಬೇರೆಯವರ ಮೇಲೆ ಹೊಣೆ ಹೊರಿಸುತ್ತಿದ್ದಾರೆ ಎಂದು ಪಾಟೀಲ್ ಟೀಕಿಸಿದರು.
