ಬೆಂಗಳೂರು,ಅ.8- ಹೊಸದಾಗಿ ಮದ್ಯದಂಗಡಿಗಳಿಗೆ ಪರವಾನಗಿ ಕೊಡಲು ಅನುಮತಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಆಡಳಿತಾರೂಢ ಪಕ್ಷದ ಶಾಸಕರು ಭಾರೀ ಒತ್ತಡ ಹೇರಲಾರಂಭಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಂಪುಟದ ಬಹುತೇಕ ಸಚಿವರು, ಕಾಂಗ್ರೆಸ್ ಶಾಸಕರು, ವಿರೋಧ ಪಕ್ಷದಲ್ಲಿರುವ ಕೆಲವು ಶಾಸಕರೂ ಕೂಡ ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡಬೇಕು ಎಂದು ಮುಖ್ಯಮಂತ್ರಿಯವರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವೆ ಈ ವಿಷಯದಲ್ಲಿ ಭಿನ್ನ ಅಭಿಪ್ರಾಯಗಳು ಕೇಳಿಬಂದಿವೆ. ಕಳೆದ 30 ವರ್ಷಗಳಿಂದಲೂ ಹೊಸ ಮದ್ಯ ಮಾರಾಟದ ಸನ್ನದ್ಧುಗಳನ್ನು ನೀಡಿಲ್ಲ. ಈಗಿರುವ ಪರವಾನಗಿಗಳನ್ನೇ ನಾಲ್ಕರಿಂದ ಐದು ಕೋಟಿ ರೂ.ಗಳಿಗೆ ಮಾರಾಟ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಹೊಸ ಸನ್ನದ್ಧುಗಳನ್ನು ನೀಡಬೇಕು, ಇದರಿಂದ ಉದ್ಯೋಗವಕಾಶಗಳು ಹೆಚ್ಚುತ್ತವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಆದರೆ ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರಾಸಗಟಾಗಿ ತಳ್ಳಿಹಾಕಿದ್ದು, ನನ್ನ ಪ್ರಕಾರ ಹೊಸ ಮದ್ಯ ಮಾರಾಟಕ್ಕೆ ಪರವಾನಗಿಗಳನ್ನು ನೀಡುವ ಅಗತ್ಯ ಇಲ್ಲ ಎಂದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಲವಾರು ಜನಪರ ಭರವಸೆಗಳನ್ನು ನೀಡಿದ್ದಂತೆ ಬಂಡವಾಳಿಶಾಹಿಗಳಿಗೂ ಕೆಲವು ಆಶ್ವಾಸನೆಗಳನ್ನು ಕೊಟ್ಟಿತ್ತು. ಸಂಪನ್ಮೂಲ ಕ್ರೂಢೀಕರಣ, ಪಕ್ಷ ಸಂಘಟನೆ ದೃಷ್ಟಿಯಿಂದಾಗಿ ಕಾಲಕಾಲಕ್ಕೆ ಕೆಲವು ಭರವಸೆಗಳನ್ನು ನೀಡಲಾಗಿದೆ. ಅವುಗಳ ಈಡೇರಿಕೆಗೆ ಸಂಪುಟದಲ್ಲಿ ಸದಸ್ಯರಾಗಿರುವವರು ಹರಸಾಹಸ ನಡೆಸುತ್ತಿದ್ದಾರೆ.
ಉತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳನ್ನು ಪ್ರಶಂಸಿಸಿದ ರಾಜ್ಯಪಾಲ ಗೆಹ್ಲೋಟ್
ಒಂದು ವೇಳೆ ಹೊಸ ಪರವಾನಗಿಗಳನ್ನು ನೀಡಲು ಮುಂದಾದರೆ ಸಾವಿರಾರು ಕೋಟಿ ರೂ.ಗಳ ಭ್ರಷ್ಟಾಚಾರ ನಡೆಯುವ ಆತಂಕ ಇದೆ. ಇದು ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷಗಳಿಗೆ ಅಸ್ತ್ರವಾಗಲಿದೆ ಎಂದು ಗುಪ್ತಚರ ಇಲಾಖೆ ಮುಖ್ಯಮಂತ್ರಿಯವರಿಗೆ ವರದಿ ನೀಡಿದೆ.
ಇತ್ತೀಚೆಗೆ ಕಲ್ಬುರ್ಗಿ, ಬಿಜಾಪುರ, ಬಾಗಲಕೋಟೆ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗ್ರಾಮೀಣ ಭಾಗದಲ್ಲಿ ಮದ್ಯ ಮಾರಾಟವನ್ನು ವಿರೋಸಿ ಸ್ತ್ರೀಶಕ್ತಿ ಸಂಘಗಳ ನೇತೃತ್ವದಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಅದಕ್ಕೆ ಬೆಂಬಲವಾಗಿ ಆಡಳಿತಾರೂಢ ಕಾಂಗ್ರೆಸ್‍ನ ಅಳಂದ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ಮದ್ಯ ಮಾರಾಟ ಮಾಡಿದ ಪಾಪದ ಹಣದಲ್ಲಿ ಸರ್ಕಾರ ನಡೆಸಬಾರದು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.
ಅಬಕಾರಿ ಸಚಿವರು ಗ್ರಾಮ ಪಂಚಾಯಿತಿಗೊಂದರಂತೆ ಮದ್ಯ ಮಾರಾಟ ಪರವಾನಗಿ ನೀಡುವ ಚಿಂತನೆ ನಡೆಸಿದ್ದಾರೆ. ಇದು ಒಳ್ಳೆಯದಲ್ಲ. ಗ್ರಾಮೀಣ ಭಾಗದಲ್ಲಿ ಮಹಿಳೆಯರು ಮದ್ಯ ಮಾರಾಟದ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದಾರೆ. ನಮಗೆ ಉಚಿತ ಅಕ್ಕಿ ಬೇಡ, ಗೃಹಲಕ್ಷ್ಮಿ ಹಣವೂ ಬೇಡ, ಮದ್ಯ ಮಾರಾಟವನ್ನು ನಿಲ್ಲಿಸಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಅನಕೃತವಾದ ಮದ್ಯ ಮಾರಾಟದಿಂದ ಸಾಮಾಜಿಕ ಸ್ವಾಸ್ಥ್ಯ ಕೆಡುತ್ತಿದೆ, ಸಂಸಾರಗಳು ಬೀದಿಪಾಲಾಗುತ್ತಿವೆ. ಹೀಗಾಗಿ ಹೆಚ್ಚುವರಿ ಮದ್ಯ ಮಾರಾಟಕ್ಕೆ ಅನುಮತಿ ನೀಡಬಾರದು ಎಂದು ಬಿ.ಆರ್.ಪಾಟೀಲ್ ಒತ್ತಾಯಿಸಿದರು.
ಶಾಸಕರ ವಲಯದಲ್ಲಿ ವಿರೋಧ ವ್ಯಕ್ತಪಡಿಸುವ ಒಂದು ವರ್ಗವಿದ್ದರೆ, ಪರವಾನಗಿ ನೀಡಲೇಬೇಕು ಎಂದು ಹಠ ಹಿಡಿಯುತ್ತಿರುವ ಮತ್ತಷ್ಟು ಶಾಸಕರು ವಾದ, ವಿವಾದಗಳಿಗೆ ತಲೆ ಕೆಡಿಸಿಕೊಳ್ಳದೆ ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಪಟಾಕಿ ದುರಂತ : ಉನ್ನತ ಮಟ್ಟದ ತನಿಖೆಗೆ ಹೆಚ್‌ಡಿಕೆ ಆಗ್ರಹ
ಪಂಚಖಾತ್ರಿಗಳನ್ನು ಜಾರಿಗೊಳಿಸಿರುವ ರಾಜ್ಯಸರ್ಕಾರ ಅದಕ್ಕೆ ಅಗತ್ಯವಾದ ಹಣಕಾಸು ಕ್ರೂಢೀಕರಣಕ್ಕೆ ವಿವಿಧ ರೀತಿಯ ಮೂಲಗಳನ್ನು ಆಶ್ರಯಿಸಿದೆ. ಅದರಲ್ಲಿ ಪ್ರಮುಖವಾಗಿ ಅಬಕಾರಿ ತೆರಿಗೆಯೂ ಸೇರಿದೆ.
ಪ್ರತಿ ತಾಲೂಕಿನಲ್ಲೂ ಶೇ. 30 ರಷ್ಟು ಹೆಚ್ಚು ಮದ್ಯ ಮಾರಾಟ ಮಾಡಬೇಕು ಎಂಬ ಗುರಿ ನಿಗದಿ ಪಡಿಸಲಾಗಿದೆ. ಹೀಗಾಗಿ ಸರ್ಕಾರದ ಅಧಿಕೃತ ಸಂಸ್ಥೆ ಎಂಎಸ್‍ಐಎಲ್‍ಗಳೂ ಸೇರಿದಂತೆ ಹಲವಾರು ಕಡೆ ಗ್ರಾಮೀಣ ಭಾಗದ ಅನಧಿಕೃತ ಮಾರಾಟಕ್ಕೆ ಮದ್ಯ ಪೂರೈಕೆ ಮಾಡಲಾಗುತ್ತಿದೆ.
ಅನಧಿಕೃತವಾದ ಮದ್ಯ ಮಾರಾಟದಿಂದ ಸರ್ಕಾರಕ್ಕೂ ಆದಾಯ ಬರುವುದಿಲ್ಲ. ಸಮಾಜದ ಸ್ವಾಸ್ಥ್ಯವೂ ಪಾಲನೆ ಆಗುವುದಿಲ್ಲ. ಹೀಗಾಗಿ ನೇರವಾಗಿ ಪರವಾನಗಿ ನೀಡುವುದೇ ಸೂಕ್ತ ಎಂಬ ವಾದಗಳು ಇವೆ. ವಾದ ವಿವಾದ ಏನೇ ಇದ್ದರೂ ಒಂದು ಕಾಲದಲ್ಲಿ ಸರ್ಕಾರವನ್ನೆ ಅಲುಗಾಡಿಸುತ್ತಿದ್ದ ಅಬಕಾರಿ ಲಾಬಿ ಈಗ ಮತ್ತೊಮ್ಮೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ನಡುವೆಯೇ ಭಿನ್ನಾಭಿಪ್ರಾಯ ಸೃಷ್ಟಿಸುವ ಸಾಧ್ಯತೆಗಳಿವೆ.