ವಡೋದರಾ, ಮಾ 19 (ಪಿಟಿಐ) : ಲೋಕಸಭೆ ಚುನಾವಣೆಗೆ ಮುನ್ನ ಗುಜರಾತ್ ನ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಕೇತನ್ ಇನಾಮದಾರ್ ವಿಧಾನಸಭೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ವಡೋದರ ಜಿಲ್ಲೆಯ ಸಾವ್ಲಿ ಕ್ಷೇತ್ರದಿಂದ ಮೂರು ಅವಧಿಗೆ ಶಾಸಕರಾಗಿರುವ ಇನಾಮದಾರ್ ಅವರು ತಮ್ಮ ರಾಜೀನಾಮೆಯನ್ನು ವಿಧಾನಸಭಾ ಸ್ಪೀಕರ್ ಶಂಕರ್ ಚೌಧರಿ ಅವರಿಗೆ ಸಲ್ಲಿಸಿದ್ದಾರೆ. ಪತ್ರದಲ್ಲಿ, ಇನಾಮದಾರ್ ಅವರು ತಮ್ಮ ಒಳಗಿನ ಧ್ವನಿ ಆಲಿಸಿದ ನಂತರ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಇನಾಮದಾರ್ 2012ರ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಗೆದ್ದಿದ್ದರು. ನಂತರ ಬಿಜೆಪಿ ಸೇರಿ 2017 ಮತ್ತು 2022ರಲ್ಲಿ ಎರಡು ಬಾರಿ ಗೆದ್ದಿದ್ದರು. ಇದಕ್ಕೂ ಮೊದಲು, ಅವರು 2020 ರ ಜನವರಿಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು, ಆದರೆ ಅದನ್ನು ಸ್ಪೀಕರ್ ಅಂಗೀಕರಿಸಲಿಲ್ಲ.
ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಸಚಿವರು ತಮ್ಮನ್ನು ಮತ್ತು ತಮ್ಮ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿದ್ದಾರೆ ಮತ್ತು ಕೇಸರಿ ಪಕ್ಷದ ಅನೇಕ ಶಾಸಕರು ತಮ್ಮಂತೆ ಹತಾಶೆ ಅನುಭವಿಸುತ್ತಿದ್ದಾರೆ ಎಂದು ಇನಾಮದಾರ್ ಆಗ ಹೇಳಿಕೊಂಡಿದ್ದರು.ಗುಜರಾತ್ ವಿಧಾನಸಭೆಯ ಒಟ್ಟು 182 ಸ್ಥಾನಗಳಲ್ಲಿ ಪ್ರಸ್ತುತ ಬಿಜೆಪಿ 156 ಸ್ಥಾನಗಳನ್ನು ಹೊಂದಿದೆ. ಗುಜರಾತ್ನ ಎಲ್ಲಾ 26 ಲೋಕಸಭಾ ಕ್ಷೇತ್ರಗಳಿಗೆ ಮೇ 7 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.