Monday, November 25, 2024
Homeರಾಜ್ಯಹನುಮಾನ್ ಚಾಲೀಸಾ ವಿವಾದ : ಹಿಂದೂ-ಬಿಜೆಪಿ ಕಾರ್ಯಕರ್ತರ ಭಾರಿ ಪ್ರತಿಭಟನೆ, ನಗರ್ತಪೇಟೆ ಉದ್ವಿಗ್ನ

ಹನುಮಾನ್ ಚಾಲೀಸಾ ವಿವಾದ : ಹಿಂದೂ-ಬಿಜೆಪಿ ಕಾರ್ಯಕರ್ತರ ಭಾರಿ ಪ್ರತಿಭಟನೆ, ನಗರ್ತಪೇಟೆ ಉದ್ವಿಗ್ನ

ಬೆಂಗಳೂರು, ಮಾ.19- ಮೊಬೈಲ್ ಶಾಪ್‍ನಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ಹಾಗೂ ಹಿಂದೂ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ನಗರ್ತಪೇಟೆಯಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಲ್ಲೆ ನಡೆಸಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರೂ, ಬಂಧನಕ್ಕೆ ಒಳಗಾದವರು ಹಲ್ಲೆ ಮಾಡಿದ ವ್ಯಕ್ತಿಗಳಲ್ಲ. ಹಲ್ಲೆ ಮಾಡಿದ ಯುವಕರನ್ನು ರಕ್ಷಿಸಲು ಬೇರೆ ಯುವಕರನ್ನು ಬಂಧಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಲು ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದರು.

ಹಲ್ಲೆಗೊಳಗಾದ ಯುವಕ ಮುಖೇಶ್ ಅಂಗಡಿಯಿಂದ ಭಾಗವಧ್ವಜದೊಂದಿಗೆ ಹನುಮಾನ್ ಚಾಲೀಸ ಪಠಣ ಮಾಡಿಕೊಂಡು ಶಾಂತಿಯುತ ಮೆರವಣಿಗೆಯಲ್ಲಿ ಹಮ್ಮಿಕೊಂಡಿದ್ದರು.ಇದರಂತೆ ನೂರಾರು ಸಂಖ್ಯೆಯ ಹಿಂದೂಪರ ಕಾರ್ಯಕರ್ತರು ನಗರತ್ ಪೇಟೆಗೆ ಸೇರಿದ್ದರು. ಈ ಮೆರವಣಿಗೆಗೆ ಬಿಜೆಪಿ ನಾಯಕರಾದ ಸುರೇಶ್ ಕುರ್ಮಾ, ಸಂಸದರಾದ ಶೋಭಾ ಕರಂದ್ಲಾಜೆ , ತೇಜಸ್ವೀ ಸೂರ್ಯ, ಪಿ.ಸಿ. ಮೋಹನ್ ಕೂಡ ಭಾಗಿಯಾಗಿದ್ದರು. ಆದರೆ, ಇದಕ್ಕೆ ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಹಿಂದೂಪರ ಸಂಘಟನೆಯ ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ನಡೆಯಿತು.

ಭಾರೀ ಸಂಖ್ಯೆಯಲ್ಲಿ ಸೇರಿದ್ದ ಹಿಂದೂ ಕಾರ್ಯಕರ್ತರು ಕೇಸರಿ ಶಾಲು ಧರಿಸಿ, ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿ, ಸ್ಥಳದಲ್ಲೇ ಭಜನೆ ಮಾಡಲು ಮುಂದಾದರು. ಜೊತೆಗೆ ನಮಗೆ ರ್ಯಾಲಿ ನಡೆಸಲು ಅನುಮತಿ ನೀಡಬೇಕು ಎಂದು ಪಟ್ಟು ಹಿಡಿದರು. ಆದರೆ, ಪೂರ್ವಾನುಮತಿ ಪಡೆಯದ ಕಾರಣ ಪೊಲೀಸರು ನಿರಾಕರಿಸಿದ್ದು, ಪರಿಸ್ಥಿತಿಯನ್ನು ಕೈ ಮೀರುವಂತೆ ಮಾಡಿತು.

ರ್ಯಾಲಿಗೆ ಅನುಮತಿ ನೀಡಲು ಪೊಲೀಸರು ನಿರಾಕರಿಸಿದ್ದಕ್ಕೆ ಸ್ಥಳದಲ್ಲೇ ಜಮಾಯಿಸಿದ್ದ ಕಾರ್ಯಕರ್ತರು ಪೊಲೀಸರ ವರ್ತನೆಗೆ ಕಿಡಿಕಾರಿದರು. ಘಟನಾ ಸಂಬಂಧ ರ್ಯಾಲಿಯಲ್ಲಿ ಅಂಗಡಿ ಮಾಲೀಕನಾದ ಮುಖೇಶ್ ಕೂಡ ಭಾಗಿಯಾಗಿದ್ದ. ಆತನನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋಗುತ್ತಿದ್ದಾಗ ರ್ಯಾಲಿಗೆ ಬಂದಿದ್ದ ಶಾಸಕ ಸುರೇಶ್ ಅವರು ಪೊಲೀಸ್ ಜೀಪಿಗೆ ಅಡ್ಡ ನಿಂತರು. ಈ ವೇಳೆ ಪೊಲೀಸರು ಸುರೇಶ್ ಕುಮಾರ್ ಅವರನ್ನೇ ಎಳೆದಾಡಿದ ಘಟನೆ ನಡೆಯಿತು.

ಸುರೇಶ್ ಕುಮಾರ್ ಅವರನ್ನು ಪೊಲೀಸರು ಕೈ ಹಿಡಿದು ಎಳೆದಾಡಿದ್ದು, ಪರಿಸ್ಥಿತಿಯನ್ನು ಇನ್ನಷ್ಟು ವಿಕೋಪಕ್ಕೆ ತಿರುಗುವಂತೆ ಮಾಡಿತು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಕಂಡ ಪೊಲೀಸರು ದಾರಿಮಧ್ಯೆಯೇ ಧರಣಿ ನಡೆಸಲು ಮುಂದಾಗಿದ್ದ ಶೋಭಾ ಕರದ್ಲಾಂಜೆ , ಸುರೇಶ್ ಕುಮಾರ್ ಅವರನ್ನು ವಶಕ್ಕೆ ಪಡೆಯಲು ಮುಂದಾದಗ ತಳ್ಳಾಟ-ನೂಕಾಟ, ಗದ್ದಲ-ಕೋಲಾಹಲ ಉಂಟಾಯಿತು.

ಮುಖೇಶ್ ಮೇಲೆ ಹಲ್ಲೆಖಂಡಿಸಿ ಆ ರಸ್ತೆಯಲ್ಲಿನ ವರ್ತಕರು ಪೊಲೀಸ್ ಠಾಣೆ ಮುಂದೆ ನ್ಯಾಯಕ್ಕಾಗಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟಿಸಿದರು. ಕೆಲವು ವರ್ತಕರು ಮುಖೇಶ್ ಅಂಗಡಿ ಬಳಿ ಹನುಮಾನ್ ಚಾಲೀಸಾ ಪಠಿಸಿದರೆ, ಇನ್ನೂ ಕೆಲವರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಿದ್ದರು.

ಹಿಂದೂ ವಿರೋಧಿ ಸರ್ಕಾರ:
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರದ್ಲಾಂಜೆ, ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರ ಆಡಳಿತದಲ್ಲಿದೆ. ಒಂದು ಕೋಮಿನವರು ತಾವು ಏನು ಬೇಕಾದರೂ ಮಾಡಬಹುದು. ನಮ್ಮನ್ನು ಸರ್ಕಾರ ರಕ್ಷಣೆ ಮಾಡುತ್ತದೆ ಎಂಬ ಭಾವನೆ ಇದೆ. ಹನುಮಾನ್ ಚಾಲೀಸಾ ಹಾಕಿದ್ದ ಎಂಬ ಒಂದೇ ಒಂದು ಕಾರಣಕ್ಕಾಗಿ ಅಮಾನುಷವಾಗಿ ಹಲ್ಲೆ ಮಾಡುತ್ತಾರೆ ಎಂದರೆ, ಇವರಿಗೆ ಕುಮ್ಮಕ್ಕು ಕೊಟ್ಟವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರು ಬಂಧಿಸಿರುವುದಕ್ಕೂ ಈ ಪ್ರಕಣಕ್ಕೂ ಸಂಬಂಧವೇ ಇಲ್ಲ. ಪ್ರಮುಖ ಆರೋಪಿಗಳನ್ನು ಬಿಟ್ಟು, ಬೇರೆಯವರನ್ನು ಬಂಧಿಸಿದ್ದಾರೆ. ಮೇಲ್ನೋಟಕ್ಕೆ ಈ ಪ್ರಕಣದಲ್ಲಿ ಪೊಲೀಸರು ಶಾಮೀಲಾಗಿರುವಂತೆ ಕಂಡು ಬಂದಿದೆ. ಈಗ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಸರಿಯಾದ ತನಿಖೆ ನಡೆಯುವುದು ಅನುಮಾನ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಒಂದು ಸಮುದಾಯದವರ ಆಟಾಟೋಪ ಹೇಳತೀರದಾಗಿದೆ. ಇದಕ್ಕೆ ಸರ್ಕಾರ ಕೂಡಾ ಕುಮ್ಮಕ್ಕು ನೀಡುತ್ತಿದೆ. ಇದು ಸ್ಪಷ್ಟವಾಗಿ ಹಿಂದೂ ವಿರೋಧಿ ಸರ್ಕಾರವಾಗಿದೆ. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.

ಘಟನೆ ಹಿನ್ನೆಲೆ:
ನಮಾಜ್ ಮಾಡುವ ಸಮಯಕ್ಕೆ ಹನುಮಾನ್ ಚಾಲೀಸಾ ಹಾಕಿದ ಎಂಬ ಕಾರಣಕ್ಕೆ ಅನ್ಯಕೋಮಿನ ಕೆಲ ಯುವಕರು ಮೊಬೈಲ್ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿದ್ದರು. ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನಗರ್ತಪೇಟೆಯ ಸಿದ್ದಣ್ಣ ಗಲ್ಲಿಯಲ್ಲಿ ಭಾನುವಾರ ಸಂಜೆ ನಡೆದಿತ್ತು.

ಅಂಗಡಿ ಮಾಲೀಕ ಕಬ್ಬನ್ ಪೇಟೆ ನಿವಾಸಿಯಾಗಿರುವ ಮುಖೇಶ್ (26) ನಗರ್ತಪೇಟೆಯ ಸಿದ್ದಣ್ಣ ಗಲ್ಲಿಯ ಮಸೀದಿ ರಸ್ತೆಯಲ್ಲಿ ಅಂಗಡಿ ಇಟ್ಟಿದ್ದರು. ಇವರ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ್ದರು. ಘಟನೆ ಬಳಿಕ ಬಿಜೆಪಿ ಇಬ್ಬರು ಸಂಸದರು ಅಂಗಡಿ ಮಾಲೀಕನನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು.

ಮೊಬೈಲ್ ಬಿಡಿಭಾಗಗಳ ಅಂಗಡಿಯ ಮುಖೇಶ್ ಮೇಲೆ ಭಾನುವಾರ ದಾಳಿ ನಡೆಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಬಳಿಕ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಮುಖೇಶ್ ದೂರು ನೀಡಿದ್ದಾರೆ.

ಹಲ್ಲೆಗೊಳಗಾದ ಮುಖೇಶ್ ಕೃಷ್ಣ ಟೆಲಿಕಾಂ ಹೆಸರಿನಲ್ಲಿ ಅಂಗಡಿ ನಡೆಸುತ್ತಿದ್ದ. ಘಟನೆ ದಿನ ಹನುಮಾನ್ ಚಾಲೀಸಾ ಹಾಕಿ ಕೇಳುತ್ತಿದ್ದ. ಈ ವೇಳೆ ಅಲ್ಲಿಗೆ ಬಂದ ಈ ಬಂತ ಮೂವರು ಆರೋಪಿಗಳು ನಿನ್ನ ಅಂಗಡಿಯಿಂದ ಹೆಚ್ಚು ಸೌಂಡ್ ಬಂದು ಬೇರೆಯವರಿಗೆ ತೊಂದರೆ ಆಗುತ್ತಿದೆ ಎಂದು ಕೆಣದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ.

ನೋಡ ನೋಡುತ್ತಿದ್ದಂತೆ ಅಂಗಡಿ ಒಳಗಿನಿಂದ ಮುಖೇಶ್ನನ್ನು ಎಳೆದಾಡಿದ್ದಾರೆ. ಮೂವರು ಸೇರಿ ರಸ್ತೆ ಎಳೆದು ತಂದು ಆತನನ್ನು ಕೆಡವಿ ಮನಬಂದಂತೆ ಥಳಿಸಿದ್ದಾರೆ. ಉಗುರುಗಳಿಂದ ಮುಖ ಪರಚಿದ್ದಾರೆ ಎನ್ನಲಾಗಿದೆ. ಕಾಲಲ್ಲಿ ಒದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬಳಿಕ ಅಲ್ಲಿಂದ ಆರೋಪಿಗಳು ತೆರಳಿದ್ದಾರೆ. ಹಲ್ಲೆಗೆ ಒಳಗಾದ ಸಂತ್ರಸ್ತ ಕೂಡಲೇ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

RELATED ARTICLES

Latest News