ಬೆಂಗಳೂರು,ಮಾ.19- ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮತದಾರರಿಗೆ ಹಂಚಲು ನಾಲ್ಕು ಲಕ್ಷ ಕುಕ್ಕರ್ಗಳನ್ನು ಕಾಂಗ್ರೆಸ್ನವರು ಲೋಡ್ ಮಾಡಿದ್ದಾರೆಂದು ಆರೋಪಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡಿ ಈ ರೀತಿಯ ಆಮಿಷವೊಡ್ಡುವುದನ್ನು ತಡೆಯಬೇಕೆಂದು ಒತ್ತಾಯಿಸಿದರು.
ಪದ್ಮನಾಭನಗರದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಚುನಾವಣಾ ಸಂದರ್ಭದಲ್ಲಿ ಕುಕ್ಕರ್ ಹಂಚುತ್ತಿದ್ದಾರೆಂದು ಪೊಟೋ ಸಹಿತ ಆರೋಪಿಸಿದರು.
ಯಾವುದೇ ಸ್ಟಿಕ್ಕರ್ ಇಲ್ಲದೆ ಹಂಚಿಕೆ ಮಾಡಲಾಗುತ್ತಿದೆ. ಮರಳವಾಡಿಯಲ್ಲಿ ಮತದಾರರಿಗೆ ಹಂಚಲು ತಂದಿದ್ದ 2 ಲಾರಿ ಕುಕ್ಕರ್ಗಳನ್ನು ಜೆಡಿಎಸ್ ಕಾರ್ಯಕರ್ತರು ಪತ್ತೆಹಚ್ಚಿದ್ದಾರೆ.ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳು ಹೋಗಿದ್ದಾಗ ಏನು ಇರಲಿಲ್ಲವೆಂದು ಹೇಳುತ್ತಾರೆಂದರು. ಈಗಾಗಲೇ ಸೀರೆ ಮತ್ತು ಕುಕ್ಕರ್ಗಳನ್ನು ಹಂಚಲಾಗಿದೆ.
ಮತ್ತೆ ಹಂಚಿಕೆ ಮಾಡಲು ಉದ್ದೇಶಿಸಿದ್ದಾರೆಂದು ಆರೋಪಿಸಿದರು. ಮತದಾರರಿಗೆ ಆಮಿಷವೊಡ್ಡುವುದನ್ನು ಚುನಾವಣಾ ಆಯೋಗ ಗಮನಿಸಬೇಕು. ಕಠಿಣ ಕ್ರಮ ಕೈಗೊಳ್ಳುವ ಅಧಿಕಾರಿಗಳನ್ನು ನಿಯೋಜಿಸಬೇಕೆಂದು ಹೇಳಿದರು. ಮಂಡ್ಯದಲ್ಲಿ ಒಂದು ಕೋಟಿ ರೂ. ಹಣ ಸೀಸ್ ಆಗಿದ್ದು, ಅದು ಅಡಿಕೆ ವ್ಯಾಪಾರಿಗೆ ಸಂಬಂಧಿಸಿದ್ದಾ? ಎಂದು ಪ್ರಶ್ನಿಸಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಅವರನ್ನು ಸೋಲಿಸಲು ಈ ರೀತಿಯ ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿದರು.
ಗೊಂದಲವಿಲ್ಲ:
ಬಿಜೆಪಿ ಮತ್ತು ಜೆಡಿಎಸ್ ನಡುವೆ ಯಾವುದೇ ರೀತಿಯ ಗೊಂದಲವಿಲ್ಲ. ನಿನ್ನೆ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚುನಾವಣಾ ಮೈತ್ರಿ ಬಗ್ಗೆ ಚರ್ಚೆ ಮಾಡಿದ್ದೇವೆ. ಈ ಕ್ಷಣದವರೆಗೂ ಯಾವ ಕ್ಷೇತ್ರ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ ಎಂದರು.
ದೇವೇಗೌಡರ ಸಲಹೆ ಮೇರೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಮೂರು ಕ್ಷೇತ್ರಗಳಲ್ಲಿ ನಾವು ಸ್ಪರ್ಧೆ ಮಾಡುವುದಾಗಿ ಹೇಳಿದ್ದೇವೆ. ಕೋರ್ ಕಮಿಟಿ ಸಭೆಯಲ್ಲಿ 2 ಕ್ಷೇತ್ರಗಳಿಗೆ ಮೈತ್ರಿ ಮಾಡಿಕೊಳ್ಳಬೇಕಿತ್ತಾ ಎಂಬ ವಿಚಾರ ಚರ್ಚೆಯಾಗಿತ್ತು. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕೆಂದು ಎರಡೂ ಪಕ್ಷಗಳೂ ಹೋರಾಟ ನಡೆಸುತ್ತಿವೆ.