Friday, November 22, 2024
Homeರಾಜಕೀಯ | Politicsಚುನಾವಣೆ ಸಮೀಪಿಸಿದರೂ ಬಿಜೆಪಿಯಲ್ಲಿ ಮುಗಿಯದ ಆಂತರಿಕ ಕಚ್ಚಾಟ

ಚುನಾವಣೆ ಸಮೀಪಿಸಿದರೂ ಬಿಜೆಪಿಯಲ್ಲಿ ಮುಗಿಯದ ಆಂತರಿಕ ಕಚ್ಚಾಟ

ಬೆಂಗಳೂರು,ಮಾ.19- ಟಿಕೆಟ್ ವಂಚಿತರ ಅಸಮಾಧಾನ, ಬಂಡಾಯ,ಭಿನ್ನಮತ, ತಾರಕಕ್ಕೇರಿರುವ ಬೆನ್ನಲ್ಲೇ ಉಳಿದಿರುವ 5 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಕುರಿತಾಗಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆ ಇಂದು ನಡೆಯಲಿದೆ.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಿಇಸಿ ಸಭೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತಿತರ ಪ್ರಮುಖರು ಭಾಗಿಯಾಗಲಿದ್ದಾರೆ.

ಈಗಾಗಲೇ ಬಿಜೆಪಿ ಕರ್ನಾಟಕದ ಮೊದಲ ಪಟ್ಟಿಯಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಬಿಜೆಪಿ ಘೋಷಿಸಿತ್ತು. ಉಳಿದಿರುವ , ಚಿತ್ರದುರ್ಗ, ಬೆಳಗಾವಿ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ರಾಯಚೂರು ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯೇ ಬಿಜೆಪಿಗೆ ದೊಡ್ಡ ಸವಾಲು ಆಗಿದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವರು ಹಾಗೂ ಹಾಲಿ ಸಂಸದರಾದ ಎ. ನಾರಾಯಣಸ್ವಾಮಿ ಅವರಿಗೆ ಈ ಬಾರಿ ಟಿಕೆಟ್ ಕೈ ತಪ್ಪಲಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಅಲ್ಲದೇ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ತೀವ್ರ ಪೈಪೊಟಿ ಏರ್ಪಟ್ಟಿದ್ದು, ಎ. ನಾರಾಯಣಸ್ವಾಮಿ ಮತ್ತು ಮಾಜಿ ಸಂಸದ ಜನಾರ್ದನ ಸ್ವಾಮಿ ನಡುವೆ ಫೈಟ್ ಏರ್ಪಟ್ಟಿದೆ. ಇದರ ನಡುವೆ ಮಾದಾರ ಚನ್ನಯ್ಯ ಸ್ವಾಮೀಜಿ ಅವರ ಹೆಸರು ಕೂಡಾ ಕೇಳಿ ಬಂದಿದೆ.

ಇನ್ನೂ ಕುಂದಾನಗರಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಂಗಳಾ ಅಂಗಡಿ, ಮಹಾಂತೇಶ್ ಕವಟಗಿಮಠ, ರಮೇಶ್ ಕತ್ತಿ ನಡುವೆ ತೀವ್ರ ಪೈಪೊಟಿ ಏರ್ಪಟ್ಟಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಹಿಂದುತ್ವದ ಭದ್ರಕೋಟೆಯಾದ ಉತ್ತರ ಕನ್ನಡ ಕ್ಷೇತ್ರದಲ್ಲಿ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಅವರು ಈ ಹಿಂದೆ ಪಕ್ಷದ ಕಾರ್ಯಕ್ರಮಗಳಿಂದಲೂ ದೂರ ಉಳಿದಿದ್ದು, ಈ ಬಾರಿಯ ಚುನಾವಣೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಸಿಗುವುದು ಅನುಮಾನ ಎನ್ನುವ ಮಾತುಗಳು ಕೇಳಿ ಬಂದಿದ್ದು, ಈ ಕ್ಷೇತ್ರದಿಂದ ವಿಶ್ಚೇಶ್ವರ ಹೆಗಡೆ ಕಾಗೇರಿ, ಗೋಪಾಲ್ ಹೆಸರುಗಳು ಚರ್ಚೆಯಲ್ಲಿವೆ.

ಇತ್ತ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಡಾ. ಕೆ. ಸುಧಾಕರ್ ಮತ್ತು ಅಲೋಕ್ ವಿಶ್ವನಾಥ್ ನಡುವೆ ಫೈಟ್ ಏರ್ಪಟ್ಟಿದ್ದರೆ , ರಾಯಚೂರು ಕ್ಷೇತ್ರದಲ್ಲಿ ಹಾಲಿ ಸಂಸದ ರಾಜಾ ಅಮರೇಶ ನಾಯಕ್ ಮತ್ತು ಬಿ.ವಿ. ನಾಯಕ್ ನಡುವೆ ಟಿಕೆಟ್ ಗಾಗಿ ತೀವ್ರ ಜಟಾಪಟಿ ಏರ್ಪಟ್ಟಿದ್ದು, ಬಿಜೆಪಿ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

ಬಗೆಹರಿಯದ ಭಿನ್ನಮತ:
ಲೋಕಸಭಾ ಚುನಾವಣೆಯ ಹೊಸ್ತಿನಲ್ಲಿ ಬಿಜೆಪಿಯಲ್ಲಿ ಬಂಡಾಯ ತೀವ್ರಗೊಂಡಿದೆ. ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ತಮ್ಮ ಪುತ್ರನಿಗೆ ಟಿಕೆಟ್ ನೀಡಿಲ್ಲ, ಹಾಗೂ ರಾಜಕೀಯವಾಗಿ ನನ್ನನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಬಂಡಾಯ ಸಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೂ ಗೈರಾಗುವ ಮೂಲಕ ಬಿಎಸ್ವೈ ಬಣಕ್ಕೆ ಸಡ್ಡು ಹೊಡೆದಿದ್ದಾರೆ.

ಮತ್ತೊಂದು ಕಡೆಯಲ್ಲಿ ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರು ಕೂಡಾ ಬಂಡಾಯದ ಸುಳಿವನ್ನು ನೀಡಿದ್ದಾರೆ. ಬೆಂಗಳೂರು ಉತ್ತರದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಕೊನೆಯ ಗಳಿಗೆಯಲ್ಲಿ ಟಿಕೆಟ್ ಮಿಸ್ ಆಗಿದೆ. ಇದರಿಂದ ಅವರು ಅಸಮಾಧಾನಗೊಂಡಿದ್ದಾರೆ.
ಈಶ್ವರಪ್ಪ ಆಕ್ರೋಶ ನೇರವಾಗಿ ಪಕ್ಷದ ಹೈಕಮಾಂಡ್ ವಿರುದ್ಧ ಅಲ್ಲ. ಅಥವಾ ರಾಷ್ಟ್ರೀಯ ಮಟ್ಟದ ನಾಯಕರ ವಿರುದ್ಧವೂ ಅಲ್ಲ. ಬದಲಾಗಿ ಅವರ ವಿರೋಧ ಇರುವುದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಕುರಿತಾಗಿ. ಬಿಎಸ್ವೈ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ.

ತಮ್ಮವರಿಗೆ ಟಿಕೆಟ್ ಕೊಡಿಸುತ್ತಿದ್ದಾರೆ. ಇತರರನ್ನು ಉದ್ದೇಶಪೂರ್ವಕವಾಗಿ ದೂರ ಮಾಡುತ್ತಿದ್ದಾರೆ ಎಂಬುವುದು ಇವರ ಆರೋಪವಾಗಿದೆ. ಈ ಕಾರಣಕ್ಕಾಗಿ ನನ್ನ ಹೋರಾಟ ಬಿಜೆಪಿಯ ಮೂಲ ಸಿದ್ಧಾಂತದ ಪರವಾಗಿ ಎಂದು ಪದೇ ಪದೇ ಉಲ್ಲೇಖ ಮಾಡುತ್ತಿದ್ದಾರೆ. ಆದರೆ ಡಿವಿ ಸದಾನಂದ ಗೌಡ ಅವರ ಅಸಮಾಧಾನಕ್ಕೆ ಬಿಎಸ್ ಯಡಿಯೂರಪ್ಪ ಕಾರಣ ಅಲ್ಲ.

ಇವರ ಬಂಡಾಯ ಇರುವುದು ಹೈಕಮಾಂಡ್ ನ ಕೆಲವು ನಾಯಕರ ವಿರುದ್ಧ. ಬೆಂಗಳೂರು ಉತ್ತರ ಟಿಕೆಟ್ ಕೈತಪ್ಪುತ್ತೆ ಎಂದು ಗೊತ್ತಾದಾಗ ತಮ್ಮ ನೋವನ್ನು ಬಹಿರಂಗವಾಗಿ ತೋಡಿಕೊಂಡಿದ್ದ ಇವರಿಗೆ ಬಿಎಸ್ ಯಡಿಯೂರಪ್ಪ ಅವರು ಸಾಂತ್ವನ ಹೇಳಿದ್ದರು. ಯಾವಾಗ ಪಕ್ಷದ ಹಿಡಿತ ಬಿಎಸ್ವೈ ಬಣಕ್ಕೆ ಸಿಕ್ಕಿತೋ ಅಂದಿನಿಂದ ಡಿವಿಎಸ್ ಮಾತಿನ ವರಸೆ ಕೂಡಾ ಬದಲಾಗಿತ್ತು. ಪಕ್ಷದಲ್ಲಿ ಅವರು ಮತ್ತೆ ಸಕ್ರಿಯರಾಗಿದ್ದರು. ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದ ಅವರು, ಮತ್ತೆ ತಾನು ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡಿದ್ದರು.

ಆದರೆ ಇದೀಗ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಇದಕ್ಕೆ ಅವರ ಪರೋಕ್ಷವಾಗಿ ಬೆಟ್ಟು ಮಾಡುತ್ತಿರುವುದು ಹೈಕಮಾಂಡ್ ನಾಯಕರ ಮೇಲೆ. ಅದರಲ್ಲೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ( ಸಂಘ ಟನೆ) ಬಿಎಲ್ ಸಂತೋಷ್ ವಿರುದ್ಧ. ನೇರವಾಗಿ ಅವರು ಇದನ್ನು ಉಲ್ಲೇಖ ಮಾಡದೆ ಇದ್ದರೂ ಸಂದರ್ಭ ಸಿಕ್ಕಾಗೆಲ್ಲಾ ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ಇವರ ಮೇಲೆ ಹಾಕುತ್ತಿದ್ದಾರೆ ಎಂಬುವುದು ಗಮನಾರ್ಹ. ಡಿವಿಎಸ್ಗೆ ಟಿಕೆಟ್ ಕೈತಪ್ಪಲು ಒಂದು ಬಣ ಕಾರಣವಾದರೆ ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೈತಪ್ಪಲು ಮತ್ತೊಂದು ಬಣ ಕಾರಣವಾಗಿದೆ. ಈ ಎರಡು ಬಣಗಳ ಶೀತಲ ಸಮಯ ಈಶ್ವರಪ್ಪ ಹಾಗೂ ಡಿವಿಎಸ್ ಮೂಲಕ ಬಹಿರಂಗವಾಗುತ್ತಿದೆ.

RELATED ARTICLES

Latest News