ಬೆಂಗಳೂರು, ಮಾ.20- ಸಾಫ್ಟ್ ವೇರ್ ಎಂಜಿನಿಯರ್ ಪತ್ನಿ ತನ್ನ ಎರಡು ವರ್ಷದ ಕರುಳ ಕುಡಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ನಂತರ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಕೆ.ಆರ್. ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮೂಲತಃ ಆಂಧ್ರಪ್ರದೇಶದ ಚಿತ್ತೂರು ನಿವಾಸಿ ಲಕ್ಷ್ಮಿನಾರಾಯಣ ಎಂಬುವರ ಪುತ್ರಿ ಶೃತಿಕಾ(2) ಹೆತ್ತ ತಾಯಿಯಿಂದಲೇ ಕೊಲೆಯಾದ ಮಗು.ಲಕ್ಷ್ಮಿನಾರಾಯಣ ಅವರು ಸಾಫ್ಟ್ ವೇರ್ ಎಂಜಿನಿಯರ್. ಮೂರು ತಿಂಗಳ ಹಿಂದೆಯಷ್ಟೇ ಸೀಗೆಹಳ್ಳಿಯಲ್ಲಿ ಮನೆ ಮಾಡಿ ಪತ್ನಿ ಹಾಗೂ ಮಗಳೊಂದಿಗೆ ಈ ಕುಟುಂಬ ವಾಸವಾಗಿತ್ತು.
ಲಕ್ಷ್ಮೀನಾರಾಯಣ ಅವರ ಪತ್ನಿ ಚಿನ್ನಾ(24) ಅವರು ಡೆಲಿವರಿಗಾಗಿ ತವರು ಮನೆಗೆ ಹೋಗಿದ್ದು, ಮಗಳು ಹುಟ್ಟಿದ ನಂತರವೂ ಹಲವು ತಿಂಗಳುಗಳ ಕಾಲ ತವರು ಮನೆಯಲ್ಲೇ ಇದ್ದುದ್ದರಿಂದ ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳವಾಗುತ್ತಿತ್ತು.ಈ ನಡುವೆ ಆರೋಗ್ಯ ಸಮಸ್ಯೆ ಹಾಗೂ ಕೌಟುಂಬಿಕ ಕಲಹದಿಂದಾಗಿ ಚಿನ್ನಾ ಅವರು ಮಾನಸಿಕವಾಗಿ ನೊಂದಿದ್ದರು.
ಮಾ. 17ರಂದು ಬೆಳಗ್ಗೆ ಪತಿ ಹೊರಗೆ ಹೋಗಿದ್ದಾಗ 10 ಗಂಟೆ ಸುಮಾರಿನಲ್ಲಿ ಚಿನ್ನಾ ಅವರು ಎರಡು ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಚಾಕುವಿನಿಂದ ತನ್ನ ಕತ್ತುಕೊಯ್ದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇವರ ಮನೆಯಿಂದ ಕಿರುಚಾಟ, ಕೂಗಾಟ ಕೇಳಿ ನೆರೆಹೊರೆಯವರು ಮನೆ ಬಳಿ ಹೋಗಿ ಬೆಂಕಿಯನ್ನು ನಂದಿಸಿ ಅವರ ಪತಿಗೆ ವಿಷಯ ತಿಳಿಸಿ ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ. ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಚಿನ್ನಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಕೆಆರ್ ಪುರ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.