Homeರಾಜ್ಯಕೆಪಿಎಸ್‌‍ಸಿ ಹಗರಣ : ರಾಜ್ಯದಲ್ಲಿ Gen-Z ಮಾದರಿಯ ಪ್ರತಿಭಟನೆಗೆ ಸಜ್ಜಾದ ಯುವಜನತೆ

ಕೆಪಿಎಸ್‌‍ಸಿ ಹಗರಣ : ರಾಜ್ಯದಲ್ಲಿ Gen-Z ಮಾದರಿಯ ಪ್ರತಿಭಟನೆಗೆ ಸಜ್ಜಾದ ಯುವಜನತೆ

ಬೆಂಗಳೂರು, ಸೆ.6- ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ವ್ಯಾಪಕ ಅಕ್ರಮ ಹಾಗೂ ಗೋಲ್‌ಮಾಲ್‌ ಪ್ರಕರಣ ರಾಜ್ಯದಲ್ಲಿ ತೀವ್ರ ರಾಜಕೀಯ ಮತ್ತು ಸಾಮಾಜಿಕ ಸಂಚಲನಕ್ಕೆ ಕಾರಣವಾಗಿದೆ.ಸಿಐಡಿ ತನಿಖೆ ತೀವ್ರಗೊಂಡಿರುವ ಬೆನ್ನಲ್ಲೇ, ಹಗರಣವನ್ನು ಖಂಡಿಸಿ ಹಾಗೂ ವಿವಾದಿತ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಮರುಪರೀಕ್ಷೆ ನಡೆಸುವಂತೆ ಒತ್ತಾಯಿಸಿ ರಾಜ್ಯದ ಯುವಜನತೆ ಮತ್ತು ವಿದ್ಯಾರ್ಥಿ ಸಂಘಟನೆಗಳು ಬೀದಿಗಿಳಿಯಲು ಸಜ್ಜಾಗಿವೆ.

ದೆಹಲಿಯಲ್ಲಿ ನಡೆದ ನೀಟ್‌ ಪ್ರತಿಭಟನೆಯ ಮಾದರಿಯಲ್ಲಿ ರಾಜ್ಯದಲ್ಲೂ ಜೆನ್‌-ಝೀ ಶೈಲಿಯ ವಿನೂತನ ಹಾಗೂ ತೀವ್ರ ಹೋರಾಟ ನಡೆಸಲು ಸಿದ್ಧತೆಗಳು ನಡೆಯುತ್ತಿವೆ. ಇದೇ ತಿಂಗಳ ಎರಡನೇ ವಾರದಿಂದ ಬೆಂಗಳೂರು ಕೇಂದ್ರಿತವಾಗಿ ಪ್ರತಿಭಟನೆ ಆರಂಭಿಸಲು ವಿದ್ಯಾರ್ಥಿ ಸಂಘಟನೆಗಳು ಚರ್ಚೆ ನಡೆಸುತ್ತಿದ್ದು, ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಹೋರಾಟಕ್ಕೆ ಕೈಜೋಡಿಸುವ ಸಾಧ್ಯತೆಯಿದೆ.

ಮರುಪರೀಕ್ಷೆಗೆ ಆಗ್ರಹ

ಪಶುವೈದ್ಯಾಧಿಕಾರಿಗಳ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಒಎಂಆರ್‌ ಶೀಟ್‌ ತಿರುಚಿರುವ ಆರೋಪಗಳು ಕೇಳಿಬಂದಿವೆ. ಹೀಗಾಗಿ ಪ್ರಕರಣದ ಸಮಗ್ರ ತನಿಖೆ ನಡೆಸುವುದರ ಜತೆಗೆ ವಿವಾದಿತ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಮರುಪರೀಕ್ಷೆ ನಡೆಸಬೇಕು ಎಂಬುದು ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳ ಪ್ರಮುಖ ಆಗ್ರಹವಾಗಿದೆ.

ಈಗಾಗಲೇ ಹೈದರಾಬಾದ್‌-ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ನೂರಾರು ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳ ಪ್ರಮುಖರು ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಸರ್ಕಾರದ ವಿರುದ್ಧದ ಆಕ್ರೋಶವನ್ನು ಬೀದಿಗೆ ತಂದು ಹೋರಾಟ ನಡೆಸಲು ಯುವಪಡೆ ಸಜ್ಜಾಗುತ್ತಿದೆ.

ರೆಸಾರ್ಟ್‌ಗಳಲ್ಲಿ ಅಭ್ಯರ್ಥಿಗಳಿಗೆ ತರಬೇತಿ?

ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿನ ಅವ್ಯವಹಾರಗಳ ಕುರಿತು ಸಿಐಡಿ ನಡೆಸುತ್ತಿರುವ ತನಿಖೆಯಲ್ಲಿ ಹಲವು ಗಂಭೀರ ಆರೋಪಗಳು ಬೆಳಕಿಗೆ ಬಂದಿವೆ. ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ ಅವರ ಬಂಧನದ ಬಳಿಕ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ.ಬೆಂಗಳೂರಿನ ಹೊರವಲಯದ ರೆಸಾರ್ಟ್‌ಗಳಲ್ಲಿ ಅಭ್ಯರ್ಥಿಗಳನ್ನು ಒಟ್ಟಿಗೆ ಇರಿಸಿ, ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ನೀಡಿ ತರಬೇತಿ ನೀಡಲಾಗಿತ್ತು ಎಂಬ ಆರೋಪವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಪಡೆದು ಒಎಂಆರ್‌ ಶೀಟ್‌ಗಳಲ್ಲಿ ತಿರುಚಾಟ ನಡೆಸಲಾಗಿದೆ ಎಂಬ ಆರೋಪದ ಬಗ್ಗೆಯೂ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ನಂಟು ಇದೆಯೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.

ಸಾಮಾಜಿಕ ಜಾಲತಾಣಗಳ ಮೂಲಕವೂ ಹೋರಾಟ

ಈ ಹೋರಾಟದ ಮತ್ತೊಂದು ಪ್ರಮುಖ ಅಂಶವೆಂದರೆ ಸಾಂಪ್ರದಾಯಿಕ ಪ್ರತಿಭಟನೆಯ ಜತೆಗೆ ಸಾಮಾಜಿಕ ಜಾಲತಾಣಗಳನ್ನು ವ್ಯಾಪಕವಾಗಿ ಬಳಸಿಕೊಳ್ಳುವ ಯೋಜನೆ. ವಿದ್ಯಾರ್ಥಿ ಸಂಘಟನೆಗಳು ಒಗ್ಗೂಡಿ ಬೆಂಗಳೂರಿನಲ್ಲಿ ಹೋರಾಟ ರೂಪಿಸುವ ಸಿದ್ಧತೆಯಲ್ಲಿದ್ದು, ಇದೇ ತಿಂಗಳ ಎರಡನೇ ವಾರದಿಂದ ಪ್ರತಿಭಟನೆ ಆರಂಭಿಸುವ ಕುರಿತು ಚರ್ಚೆ ನಡೆಸಿವೆ ಎನ್ನಲಾಗಿದೆ.

‘ಇದು ಕೇವಲ ಒಂದು ನೇಮಕಾತಿ ಪರೀಕ್ಷೆಯ ಪ್ರಶ್ನೆಯಲ್ಲ; ಸರ್ಕಾರಿ ಉದ್ಯೋಗಕ್ಕಾಗಿ ಪ್ರಾಮಾಣಿಕವಾಗಿ ಸ್ಪರ್ಧಿಸುತ್ತಿರುವ ಲಕ್ಷಾಂತರ ಯುವಕರ ಭವಿಷ್ಯ ಮತ್ತು ನಂಬಿಕೆಯ ಪ್ರಶ್ನೆ’ ಎಂಬ ಸಂದೇಶವನ್ನು ಜನರಿಗೆ ತಲುಪಿಸಲು ಹೋರಾಟಗಾರರು ಮುಂದಾಗಿದ್ದಾರೆ.

ವಿದ್ಯಾರ್ಥಿಗಳ ಹೋರಾಟ ಆರಂಭವಾದರೆ ಸರ್ಕಾರದ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಆಗಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ನೇಮಕಾತಿ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡಲಾಗುವುದು ಎಂದು ಸರ್ಕಾರದ ಪರವಾಗಿ ಈಗಾಗಲೇ ಹೇಳಿಕೆಗಳು ಬಂದಿವೆ.

ಲಕ್ಷಾಂತರ ನಿರುದ್ಯೋಗಿ ಯುವಜನರ ಭವಿಷ್ಯದೊಂದಿಗೆ ಚೆಲ್ಲಾಟ ನಡೆಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ವ್ಯವಸ್ಥೆಯ ವಿರುದ್ಧ ಯುವ ಸಮುದಾಯದಲ್ಲಿ ಅಸಮಾಧಾನ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರೂಪುಗೊಳ್ಳುತ್ತಿರುವ ಜೆನ್‌-ಝೀ ಮಾದರಿಯ ಹೋರಾಟ ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಸಂಚಲನ ಸೃಷ್ಟಿಸುವ ಸಾಧ್ಯತೆಯಿದೆ.

RELATED ARTICLES
spot_img

Latest News