ಬೆಂಗಳೂರು, ಸೆ.6- ಕೆಪಿಎಸ್‌ಸಿ ಪಶುವೈದ್ಯಕೀಯ ಹುದ್ದೆಗಳ ನೇಮಕಾತಿ ಹಗರಣದ ತನಿಖೆ ಮುಂದುವರಿದಂತೆ ಒಂದೊಂದೇ ಬೆಚ್ಚಿಬೀಳಿಸುವ ಮಾಹಿತಿ ಹೊರಬರುತ್ತಿದೆ. ಹಗರಣದ ಪ್ರಮುಖ ಆರೋಪಿಗಳಾದ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಹಾಗೂ ಕಿಂಗ್‌ಪಿನ್ ಬಸವರಾಜ್ ಕನ್ನಾಳೆ ಅವರ ಜಾಲದಲ್ಲಿ ಬರೋಬ್ಬರಿ 15 ಅಭ್ಯರ್ಥಿಗಳು ಸಿಲುಕಿಕೊಂಡಿರುವುದು ಸಿಐಡಿ ತನಿಖೆಯಿಂದ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಬಸವರಾಜ್ ಕನ್ನಾಳೆ ಮೂಲಕ ಅಕ್ರಮವಾಗಿ ಪ್ರಶ್ನೆಪತ್ರಿಕೆ ಪಡೆದುಕೊಂಡಿದ್ದ 15 ಅಭ್ಯರ್ಥಿಗಳು ಸಿಐಡಿ ವಿಚಾರಣೆ ವೇಳೆ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ಪರೀಕ್ಷೆಗೂ ಮುನ್ನವೇ ಕನ್ನಾಳೆ ನೇತೃತ್ವದ ಜಾಲದ ಮೂಲಕ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ತಲುಪಿಸಲಾಗಿತ್ತು ಎನ್ನಲಾಗಿದ್ದು, ವಿಚಾರಣೆ ಎದುರಿಸುತ್ತಿರುವ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ತಾವು ಯಾವ ರೀತಿ ಭಾಗಿಯಾಗಿದ್ದರು ಹಾಗೂ ಅಕ್ರಮಕ್ಕೆ ಹೇಗೆ ಕೈಜೋಡಿಸಿದ್ದರು ಎಂಬುದರ ಕುರಿತು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಹಣದ ವಹಿವಾಟಿನ ಮೇಲೂ ನಿಗಾ
ಮಧ್ಯವರ್ತಿಗಳಿಗೆ ಹಣ ನೀಡಿದ ದಿನಾಂಕ, ಹಣ ಪಾವತಿಯ ವಿಧಾನ, ನೇಮಕಾತಿಗೆ ಸಂಬಂಧಿಸಿದಂತೆ ನೀಡಲಾಗಿದ್ದ ಭರವಸೆ ಹಾಗೂ ನಡೆದಿದ್ದ ಒಪ್ಪಂದಗಳ ಕುರಿತು ಅಭ್ಯರ್ಥಿಗಳಿಂದ ಮಾಹಿತಿ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಪ್ರಶ್ನೆಪತ್ರಿಕೆ ಪಡೆಯಲು ಹಣ ಪಾವತಿಸಲಾಗಿತ್ತೇ? ಪಾವತಿಸಿದ್ದರೆ ಯಾರಿಗೆ ಹಾಗೂ ಯಾವ ಮಾರ್ಗದಲ್ಲಿ ಹಣ ವರ್ಗಾವಣೆಯಾಗಿತ್ತು? ಅಭ್ಯರ್ಥಿಗಳಿಗೆ ನೇಮಕಾತಿ ಕುರಿತು ಯಾವ ರೀತಿಯ ಭರವಸೆ ನೀಡಲಾಗಿತ್ತು ಎಂಬ ಪ್ರಶ್ನೆಗಳು ಇದೀಗ ಸಿಐಡಿ ತನಿಖೆಯ ಪ್ರಮುಖ ಅಂಶಗಳಾಗಿವೆ.
ಅಭ್ಯರ್ಥಿಗಳ ಹೇಳಿಕೆಗಳನ್ನು ದೃಢೀಕರಿಸಲು ಬ್ಯಾಂಕ್ ಖಾತೆಗಳ ವಹಿವಾಟು, ಆನ್‌ಲೈನ್ ಹಣ ವರ್ಗಾವಣೆ, ಮೊಬೈಲ್ ಕರೆ ದಾಖಲೆಗಳು ಹಾಗೂ ಇತರ ಡಿಜಿಟಲ್ ಸಾಕ್ಷ್ಯಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.
ಇನ್ನೂ 5ರಿಂದ 10 ಅಭ್ಯರ್ಥಿಗಳ ಮೇಲೆ ಅನುಮಾನ
ಈ 15 ಅಭ್ಯರ್ಥಿಗಳಷ್ಟೇ ಅಲ್ಲದೆ, ಇದೇ ರೀತಿಯ ಅಕ್ರಮ ಮಾರ್ಗದ ಮೂಲಕ ಪ್ರಶ್ನೆಪತ್ರಿಕೆ ಅಥವಾ ನೇಮಕಾತಿಗೆ ಸಂಬಂಧಿಸಿದ ನೆರವು ಪಡೆದಿರಬಹುದಾದ ಇನ್ನೂ 5ರಿಂದ 10 ಅಭ್ಯರ್ಥಿಗಳ ಬಗ್ಗೆಯೂ ಸಿಐಡಿಗೆ ಅನುಮಾನವಿದೆ ಎನ್ನಲಾಗಿದೆ. ಹೀಗಾಗಿ ಅಭ್ಯರ್ಥಿಗಳ ನಡುವಿನ ಸಂಪರ್ಕ, ಹಣಕಾಸಿನ ವ್ಯವಹಾರ, ಕರೆ ದಾಖಲೆಗಳು, ಡಿಜಿಟಲ್ ಸಂವಹನ ಹಾಗೂ ಪ್ರಶ್ನೆಪತ್ರಿಕೆ ಅವರ ಕೈಗೆ ತಲುಪಿದ ರೀತಿಯ ಕುರಿತು ತನಿಖಾಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
ಕನ್ನಾಳೆ ಸಂಪರ್ಕಿತರ ಪಟ್ಟಿ ಪರಿಶೀಲನೆ
ಪ್ರಕರಣದ ಪ್ರಮುಖ ಆರೋಪಿ ಎಂದು ತನಿಖಾ ಸಂಸ್ಥೆ ಶಂಕಿಸಿರುವ ಬಸವರಾಜ್ ಕನ್ನಾಳೆ ಅವರ ಸಂಪರ್ಕದಲ್ಲಿದ್ದವರ ಪಟ್ಟಿಯನ್ನೂ ಸಿಐಡಿ ಪರಿಶೀಲಿಸುತ್ತಿದೆ ಎನ್ನಲಾಗಿದೆ. ಅವರೊಂದಿಗೆ ನೇರವಾಗಿ ಅಥವಾ ಮಧ್ಯವರ್ತಿಗಳ ಮೂಲಕ ಸಂಪರ್ಕ ಹೊಂದಿದ್ದ ಅಭ್ಯರ್ಥಿಗಳು ಹಾಗೂ ಇತರ ವ್ಯಕ್ತಿಗಳ ವಿವರಗಳನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.
ನೇಮಕಾತಿ ವ್ಯವಸ್ಥೆಯ ಪಾರದರ್ಶಕತೆಗೆ ಧಕ್ಕೆ ತಂದಿರುವ ಈ ಜಾಲದ ವ್ಯಾಪ್ತಿ ಎಷ್ಟಿದೆ ಎಂಬುದನ್ನು ಪತ್ತೆಹಚ್ಚಲು ಸಿಐಡಿ ತನಿಖೆ ಮುಂದುವರಿದಿದೆ. ತಪ್ಪು ಒಪ್ಪಿಕೊಂಡಿರುವ ಅಭ್ಯರ್ಥಿಗಳ ವಿರುದ್ಧವೂ ಕಾನೂನು ಕ್ರಮಕ್ಕೆ ಸಿದ್ಧತೆ ನಡೆಸಲಾಗುತ್ತಿದ್ದು, ಪ್ರಕರಣದಲ್ಲಿ ಇನ್ನಷ್ಟು ಅಭ್ಯರ್ಥಿಗಳು, ಮಧ್ಯವರ್ತಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಹೆಸರುಗಳು ಹೊರಬರುವ ಸಾಧ್ಯತೆಯಿದೆ.
