Homeಜಿಲ್ಲಾ ಸುದ್ದಿಗಳುಚಿಕನ್ ಪೀಸ್‌ಗಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ

ಚಿಕನ್ ಪೀಸ್‌ಗಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ

ಬೆಳಗಾವಿ, ಆ.31- ಪಾರ್ಟಿಯಲ್ಲಿ ಚಿಕನ್ ಪೀಸ್‌ ತಿನ್ನುವ ವಿಚಾರಕ್ಕೆ ಆರಂಭವಾದ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ದಾರುಣ ಘಟನೆ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ನಡೆದಿದೆ.ಮೃತನನ್ನು ಉತ್ತರ ಪ್ರದೇಶದ ಪಿಲಿಭಿತ್‌ ಜಿಲ್ಲೆಯ ಕಬೀರಗಂಜ್‌ ಗ್ರಾಮದ ಸೀತಾರಾಮ್‌ ಎಂದು ಗುರುತಿಸಲಾಗಿದ್ದು, ಅದೇ ಗ್ರಾಮದ ಅರುಣ್‌ಕುಮಾರ್‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರೂ ಮೂಡಲಗಿ ಪಟ್ಟಣದ ಸ್ಟೀಲ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಆ.30ರ ರಾತ್ರಿ ಇಬ್ಬರೂ ಸೇರಿ ಚಿಕನ್‌ ಪಾರ್ಟಿ ಮಾಡುತ್ತಿದ್ದ ವೇಳೆ, ಹೆಚ್ಚು ಚಿಕನ್‌ ಪೀಸ್‌ ಬೇಕೆಂಬ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಜಗಳ ತಾರಕಕ್ಕೇರಿದಾಗ ಅರುಣ್‌ಕುಮಾರ್‌ ಚಾಕುವಿನಿಂದ ಸೀತಾರಾಮ್‌ ಅವರ ಎದೆಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡ ಸೀತಾರಾಮ್‌ ಅವರನ್ನು ಅರುಣ್‌ಕುಮಾರ್‌ ಗೋಕಾಕ್‌ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ, ಕಟ್ಟಡದ ಮೇಲಿಂದ ಬಿದ್ದು ಗಾಯಗೊಂಡಿದ್ದಾರೆ ಎಂದು ಬಿಂಬಿಸುವ ಮೂಲಕ ಪೊಲೀಸರನ್ನು ದಾರಿ ತಪ್ಪಿಸಲು ಆರೋಪಿ ಯತ್ನಿಸಿದ್ದ ಎನ್ನಲಾಗಿದೆ.

ಘಟನೆ ಕುರಿತು ಮಾಹಿತಿ ಪಡೆದ ಘಟಪ್ರಭಾ ಠಾಣೆ ಪೊಲೀಸರು ಆಸ್ಪತ್ರೆಗೆ ತೆರಳಿ ಅರುಣ್‌ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತೀವ್ರ ವಿಚಾರಣೆ ವೇಳೆ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈ ನಡುವೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೀತಾರಾಮ್‌ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಘಟಪ್ರಭಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

RELATED ARTICLES
spot_img

Latest News