Homeರಾಷ್ಟ್ರೀಯಪ್ಯಾರಿಸ್‌ನಲ್ಲಿ ಸ್ವಾಮಿನಾರಾಯಣ ದೇವಾಲಯದ ಉದ್ಘಾಟನೆ : ಭಾರತ-ಫ್ರಾನ್ಸ್ ಸಂಬಂಧಕ್ಕೆ ಹೊಸ ಆಯಾಮ

ಪ್ಯಾರಿಸ್‌ನಲ್ಲಿ ಸ್ವಾಮಿನಾರಾಯಣ ದೇವಾಲಯದ ಉದ್ಘಾಟನೆ : ಭಾರತ-ಫ್ರಾನ್ಸ್ ಸಂಬಂಧಕ್ಕೆ ಹೊಸ ಆಯಾಮ

ನವದೆಹಲಿ, ಸೆ.7- ಭಾರತ ಮತ್ತು ಫ್ರಾನ್ಸ್ ನಡುವಿನ ಸಂಬಂಧಗಳು ಹೊಸ ಎತ್ತರಕ್ಕೆ ತಲುಪಿದ್ದು, ದೀರ್ಘಕಾಲದ ಸಾಂಸ್ಕೃತಿಕ ಹಾಗೂ ರಾಜಕೀಯ ಬಾಂಧವ್ಯದ ಭದ್ರ ಬುನಾದಿಯ ಮೇಲೆ ಉಭಯ ದೇಶಗಳ ಕಾರ್ಯತಂತ್ರದ ಪಾಲುದಾರಿಕೆ ರೂಪುಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪ್ಯಾರಿಸ್‌ನಲ್ಲಿ ಸ್ವಾಮಿನಾರಾಯಣ ದೇವಾಲಯದ ಉದ್ಘಾಟನಾ ಸಮಾರಂಭವನ್ನು ವರ್ಚುವಲ್‌ ಆಗಿ ಉದ್ದೇಶಿಸಿ ಮಾತನಾಡಿದ ಅವರು, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರೊಂದಿಗೆ ಭಾರತವು ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತಿದೆ ಎಂದರು.

ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ರಕ್ಷಣೆ, ಬಾಹ್ಯಾಕಾಶ ಹಾಗೂ ಹವಾಮಾನ ಕ್ರಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ಮತ್ತು ಫ್ರಾನ್ಸ್ ಹೊಸ ಉತ್ಸಾಹದೊಂದಿಗೆ ಮುನ್ನಡೆಯುತ್ತಿವೆ. 2026ನೇ ವರ್ಷವನ್ನು ಭಾರತ-ಫ್ರಾನ್ಸ್ ನಾವೀನ್ಯತಾ ವರ್ಷವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಭಾರತೀಯ ಸೈನಿಕರ ತ್ಯಾಗ, ಫ್ರೆಂಚ್‌ ವಿದ್ವಾಂಸರು ಸಂಸ್ಕೃತದ ಜನಪ್ರಿಯತೆಗೆ ನೀಡಿದ ಕೊಡುಗೆ ಹಾಗೂ ಯೋಗದ ಮೂಲಕ ಉಭಯ ದೇಶಗಳ ಜನರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ ಎಂದು ಮೋದಿ ಹೇಳಿದರು.

ಪ್ಯಾರಿಸ್‌ನಲ್ಲಿರುವ ಸ್ವಾಮಿನಾರಾಯಣ ದೇವಾಲಯವು ಭಾರತ-ಫ್ರಾನ್ಸ್‌ ನಡುವಿನ ಸಾಂಸ್ಕೃತಿಕ ಸಂಬಂಧಕ್ಕೆ ಹೊಸ ಆಯಾಮ ನೀಡಲಿದೆ. ದೇವಾಲಯದ ಹಲವು ಕಲ್ಲುಗಳನ್ನು ಭಾರತದಲ್ಲಿ ಕೆತ್ತಲಾಗಿದ್ದು, ಫ್ರಾನ್ಸ್‌ನ ಆಧುನಿಕ ಎಂಜಿನಿಯರಿಂಗ್‌ ಜತೆಗೆ ಭಾರತದ ಪ್ರಾಚೀನ ಕಲೆಗಾರಿಕೆಯನ್ನು ಸಂಯೋಜಿಸಲಾಗಿದೆ ಎಂದು ವಿವರಿಸಿದರು.

ಭಾರತದಲ್ಲಿ ತಯಾರಾಗಿ, ಫ್ರಾನ್ಸ್‌ನಲ್ಲಿ ನಿರ್ಮಾಣಗೊಂಡಿರುವ ಈ ಭವ್ಯ ದೇವಾಲಯವು ಶತಮಾನಗಳ ಕಾಲ ಉಭಯ ದೇಶಗಳ ಸಹಕಾರ ಮತ್ತು ಸ್ನೇಹದ ಸಂಕೇತವಾಗಿ ನಿಲ್ಲಲಿ ಎಂದು ಪ್ರಧಾನಿ ಆಶಿಸಿದರು.

ದೇವಾಲಯವು ಕೇವಲ ಭಕ್ತಿ ಮತ್ತು ಆಧ್ಯಾತ್ಮಿಕತೆಯ ಕೇಂದ್ರವಾಗಿರದೆ, ಸಮಾಜ ಸೇವೆಯ ಕೇಂದ್ರವಾಗಿಯೂ ರೂಪುಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಇದರ ಮೂಲಕ ಭಾರತೀಯ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳು ಯುರೋಪಿನಾದ್ಯಂತ ಮತ್ತಷ್ಟು ಪಸರಿಸಲಿ ಎಂದು ಆಶಿಸಿದರು.

RELATED ARTICLES
spot_img

Latest News