ಮೈಸೂರು,ಡಿ.18- ಎರಡು ದಿನಗಳ ಹಿಂದೆ ಮೈಸೂರಿನ ಅಶೋಕಪುರಂ ರೈಲ್ವೆ ವರ್ಕ್‌ಶಾಪ್ ಬಳಿ ಇರುವ ಮರದ ಕೊಂಬೆ ಮೇಲೊಂದು ಚಿರತೆ ಕುಳಿತಿರುವ ಫೋಟೋ ಹರಿದಾಡಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.ಮುನ್ನೆಚ್ಚರಿಕೆ ಕ್ರಮವಾಗಿ ಮೈಸೂರಿನ ಜಯನಗರ, ಚಿಕ್ಕಹರದನಹಳ್ಳಿ ಪಂಪಾಪತಿ ರಸ್ತೆಯ ಅಂಗಡಿ ಬದಿ ವ್ಯಾಪಾರಸ್ಥರು ಹಾಗೂ ಸ್ಥಳೀಯರಿಗೆ ಸಂಜೆ 6 ಗಂಟೆ ನಂತರ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಅದರಂತೆ ಪ್ರತಿದಿನ ವ್ಯಾಪಾರಸ್ಥರು ಬೇಗ ಅಂಗಡಿಗಳನ್ನು ಮುಚ್ಚಿ ವ್ಯಾಪಾರ ಸ್ಥಗಿತಗೊಳಿಸಿ ಮನೆಗಳಿಗೆ ತೆರಳುತ್ತಿದ್ದಾರೆ. ಜೊತೆಗೆ ಸಂಜೆಯಾಗುತ್ತಿದ್ದಂತೆ ರಸ್ತೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಜನರು ಓಡಾಡುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ, ಇದೊಂದು ಎ1ನಲ್ಲಿ ಕ್ರಿಯೇಟ್ ಮಾಡಿರುವ ಫೋಟೋ ಆಗಿದ್ದು ಎರಡು ಮೂರು ಫೇಕ್ ಫೋಟೋಗಳನ್ನು ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ ಎಂದು ಹೇಳಲಾಗಿದೆ.
ಒಟ್ಟಾರೆ ಕಿಡಿಗೇಡಿಗಳು ಎ1 ಫೇಕ್ ಫೋಟೋವೊಂದನ್ನು ರಚಿಸಿ ಸ್ಥಳೀಯರಿಗೆ ಭಯವನ್ನುಂಟು ಮಾಡುವುದರ ಜೊತೆಗೆ ವ್ಯಾಪಾರಸ್ಥರ ವ್ಯಾಪಾರಕ್ಕೆ ಸಂಚಕಾರ ತಂದಿಟ್ಟಿದ್ದಾರೆ.
ಈ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿದ್ದು, ಈ ರೀತಿ ಫೇಕ್ ಫೋಟೋಗಳನ್ನು ಹರಿಬಿಡುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
