ಬೆಳಗಾವಿ,ಡಿ.18-ಸದನದಲ್ಲಿ ಉತ್ತರಿಸಬೇಕಾದ ಸಚಿವರು ಇಲ್ಲದಿದ್ದರೆ,ಅನಿವಾರ್ಯವಾಗಿ ಸದನವನ್ನು ಮುಂದೂಡಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದ ಪ್ರಸಂಗ ಜರುಗಿತು.ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿಯ ಸದಸ್ಯ ಸಿ.ಟಿ.ರವಿ ಅವರು ಗೃಹ ಸಚಿವರಿಗೆ ಪ್ರಶ್ನೆ ಕೇಳಲು ಸೂಚಿಸಿದರು.
ಈ ವೇಳೆ ರವಿ, ಪ್ರಶ್ನೆ ಕೇಳಲು ಹಲವು ಸದಸ್ಯರು ಇದ್ದರೆ, ಉತ್ತರಿಸಲು ಇಬ್ಬರು ಸಚಿವರು ಹಾಗೂ ಕೆಲವೇ ಕೆಲವು ಸದಸ್ಯರು ಇದ್ದಾರೆ. ಹೀಗಾದರೆ, ನಾವು ಯಾರಿಗೆ ಪ್ರಶ್ನೆ ಕೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿದಿನ ಪ್ರಶ್ನೋತ್ತರ ಅವಧಿಯಲ್ಲಿ ಇಂತಹ ಸಚಿವರು ಹಾಗೂ ಅಧಿಕಾರಿಗಳು ಕಡ್ಡಾಯವಾಗಿ ಇರಲೇಬೇಕು ಎಂದು ಪೀಠದಿಂದ ಆದೇಶ ನೀಡುತ್ತೀರಿ. ಹಾಗಾದರೆ, ನಿಮ ಮಾತಿಗೆ ಬೆಲೆ ಇಲ್ಲವೇ ಎಂದು ಪ್ರಶ್ನೆಸಿದರು.
ಇದಕ್ಕೆ ಸಿಡಿಮಿಡಿಗೊಂಡ ಸಭಾಪತಿ ಹೊರಟ್ಟಿ ಅವರು, ಅಧಿವೇಶನ ನಡೆಯುತ್ತಿರುವಾಗ ಸಚಿವರು ಸದನಕ್ಕೆ ಬರಬೇಕು ಅಲ್ಲವೇ? ಅವರ ಕಾರ್ಯದರ್ಶಿ ಇಲ್ಲವೇ ಪಿ.ಎ ಗಳು ಈಗ ಬರುತ್ತಾರೆ, ಆಗ ಬರುತ್ತಾರೆ ಎಂದು ಹಾರಿಕೆ ಕೊಡುತ್ತಾರೆ. ಅವರಿಗೆ ಜವಬ್ದಾರಿ ಇಲ್ಲವೇ ಎಂದು ಸಭಾನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಆಗ ಸಭಾನಾಯಕ ಭೋಸರಾಜ್ ಅವರು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ. ಸದನವನ್ನು ಮುಂದೂಡಬೇಡಿ. ಸದನದಲ್ಲಿ ಸಚಿವರು ಮತ್ತು ಸದಸ್ಯರನ್ನು ಕರೆಸುವುದಾಗಿ ತಿಳಿಸಿದರು.
