ಬೆಂಗಳೂರು, ಮಾರ್ಚ್ 25- ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಮೀಲಾಗಿದ್ದರ ಹಿನ್ನೆಲೆ, ಜೈಲುವಾಸ ಅನುಭವಿಸಿ ಪಕ್ಷದಿಂದ ಅಮಾನತುಗೊಂಡಿದ್ದ ಗಾಲಿ ಜನಾರ್ಧನ ರೆಡ್ಡಿ 12 ವರ್ಷಗಳ ನಂತರ ತಮ್ಮ ಮಾತೃ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ತಾವೇ ಸ್ಥಾಪಿಸಿದ್ದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿಯೊಳಗೆ ವಿಲೀನಗೊಳಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆಯುವ ಮೂಲಕ ಬಿಜೆಪಿಯೊಳಗೆ ರಾಜಕೀಯ ಪುನರ್ಜನ್ಮ ಪಡೆಯಲು ರೆಡ್ಡಿ ಮುಂದಾಗಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಜಗನ್ನಾಥ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಆರ್‍ಪಿಪಿ ಪಕ್ಷದ ಸಂಸ್ಥಾಪಕರಾದ ಜನಾರ್ದನ ರೆಡ್ಡಿಯನ್ನು ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವರಾದ ಶ್ರೀರಾಮುಲು, ಸಿ.ಟಿ.ರವಿ, ಆನಂದ್ ಸಿಂಗ್, ಮಾಜಿ ಸಂಸದ ದೇವಂದ್ರಪ್ಪ, ರುಕ್ಮಿಣಿ ಜನಾರ್ಧನ ರೆಡ್ಡಿ ಸೇರಿದಂತೆ ಅಪಾರ ಸಂಖ್ಯೆಯ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಯಾದರು.
ಪಕ್ಷಕ್ಕೆ ಸೇರಿದ ಎಲ್ಲರಿಗೂ ಪ್ರಾಥಮಿಕ ಸದಸ್ಯತ್ವ ನೀಡಿ ಕೇಸರಿ ಶಾಲು ಹಾಕಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಪಕ್ಷ ಸೇರ್ಪಡೆಯಾದ ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ಜನಾರ್ದನ ರೆಡ್ಡಿ ಸೇರ್ಪಡೆಗೆ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಲ್ಲಿ ಆನೆಬಲ ಬಂದಂತಾಗಿದೆ. ಅವರು ಯಾವುದೇ ಷರತ್ತು ಇಲ್ಲದೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಬೇರೆ ಬೇರೆ ಕಾರಣಗಳಿಂದ ಪಕ್ಷದಿಂದ ದೂರವಾಗಿದ್ದರು. ಹಿಂದಿನ ಎಲ್ಲ ಕಹಿ ಘಟನೆಗಳನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ. ಜನಾರ್ದನ ರೆಡ್ಡಿಗೆ ಪಕ್ಷದಲ್ಲಿ ಯಾವ ಸ್ಥಾನಮಾನ ನೀಡಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ತೀರ್ಮಾನಿಸುತ್ತೇವೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯ್ಕಷ ಬಿ.ವೈ.ವಿಜಯೇಂದ್ರ ಮಾತನಾಡಿ, ಬಹಳ ಸಂತೋಷ ಆಗಿದೆ. ಆತ್ಮೀಯರಾಗಿರುವ ಗಾಲಿ ಜನಾರ್ದನ ರೆಡ್ಡಿ ಶಾಸಕರು ಹೌದು. ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಸ್ಥಾಪನೆ ಮಾಡಿ, ಶಾಸಕರಾಗಿದ್ದಾರೆ. ಅವರದ್ದೇ ಆದ ರೀತಿಯಲ್ಲಿ ಪಕ್ಷ ನಡೆಸಿಕೊಂಡು ಬಂದಿದ್ದರು. ಗಾಲಿ ಜನಾರ್ದನ ರೆಡ್ಡಿ ಅವರು ತಾವೇ ಸ್ಥಾಪಿಸಿದ ಪಕ್ಷ ವಿಸರ್ಜನೆ ಮಾಡಿ, ಬಿಜೆಪಿ ಜೊತೆಗೆ ವಿಲೀನ ಮಾಡಿದ್ದಾರೆ. ಅವರ ಸೇರ್ಪಡೆಯಿಂದ ನಮಗೆ ದೊಡ್ಡ ಶಕ್ತಿ ಬಂದಿದೆ. ಮೋದಿ ನಾಯಕತ್ವ ಒಪ್ಪಿ ಪಕ್ಷಕ್ಕೆ ಬಂದಿದ್ದಾರೆ ಎಂದರು.
ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಅದಕ್ಕೆ ಕರ್ನಾಟಕದಲ್ಲಿ ಅತ್ಯಂತ ಸ್ಥಾನ ಗೆಲ್ಲಬೇಕು. ಇದೊಂದೇ ವಿಚಾರ ಮುಂದಿಟ್ಟುಕೊಂಡು ಪಕ್ಷ ಸೇರ್ಪಡೆ ಆಗಿದ್ದಾರೆ. ಇಂದು ರಾಜ್ಯದಲ್ಲಿ ಬಿಜೆಪಿಯ ಪರವಾದ ವಾತಾವರಣ ಇದೆ.ಮುಂದಿನ ಲೋಕಸಭಾ ಚುನಾವಣೆ ದೇಶದ ಭವಿಷ್ಯ ನಿರ್ಮಿಸುವ ಚುನಾವಣೆ.ಪಕ್ಷದ ಬಾವುಟ ನೀಡಿ ಜನಾರ್ದನ ರೆಡ್ಡಿ ಅವರನ್ನು ಬಿವೈ ವಿಜಯೇಂದ್ರ ಮತ್ತೆ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಕೇಸರಿ ಪಕ್ಷದಲ್ಲಿ ಕೆಆರ್‍ಪಿಪಿ ಪಕ್ಷವನ್ನೂ ವಿಲೀನಗೊಳಿಸಲಾಗಿದೆ.
ಲೋಕಸಭಾ ಚುನಾವಣೆ ಹೊತ್ತಲ್ಲೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾಯಕ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಇಂದು ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ನೋಡಲು ಪಕ್ಷದ ಹಲವಾರು ಸದಸ್ಯರೊಂದಿಗೆ ಬಿಜೆಪಿ ಸೇರುತ್ತಿರುವುದಾಗಿ ಗಣಿ ಧಣಿ ಜನಾರ್ದನ ರೆಡ್ಡಿ ಹೇಳಿದ್ದಾರೆ ಇದರಿಂದ ನಮಗೆ ಹೆಚ್ಚಿನ ಬಲ ಬಂದಿದೆ ಎಂದು ಹೇಳಿದರು.
ಪಕ್ಷಕ್ಕೆ ಸೇರ್ಪಡೆಯಾದ ಜನಾರ್ದನ ರೆಡ್ಡಿ ಮಾತನಾಡಿ, ನನ್ನ ರಕ್ತದ ಕಣಕಣದಲ್ಲೂ ಬಿಜೆಪಿ ಇದೆ. ನಾನು ಯಾವುದೇ ಷರತ್ತುಗಳನ್ನು ವಿಸದೆ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಇದು ನನ್ನ ಪಾಲಿಗೆ ಹೊಸ ಅಧ್ಯಾಯ ಎಂದು ಬಣಿಸಿದರು. ನಾನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿಯೊಂದಿಎಗ ವಿಲೀನ ಮಾಡಿದ್ದಾನೆ. ಯಡಿಯೂರಪ್ಪರ ಆಶೀರ್ವಾದದಿಂದ, ವಿಜಯೇಂದ್ರರ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾಗಿದ್ದೇನೆ. ನನ್ನ ಆತ್ಮೀಯ ಗೆಳೆಯ ಶ್ರೀರಾಮುಲು ಅವರಿಗೆ ಧನ್ಯವಾದಗಳು ಎಂದು ಹೇಳಿದರು.
ದೇಶವನ್ನು ಪ್ರಪಂಚದಲ್ಲಿ ಗುರುತಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವಗುರು ಅಂತಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಗೆ ಕರೆಸಿದರು. ಬಾಹ್ಯ ಬೆಂಬಲ ಅಲ್ಲ. ನೀವು ಬರಬೇಕು ಅಂದರು. ಈಗ ನಾನು ಬಿಜೆಪಿ ಸೇರ್ಪಡೆ ಆಗಿದ್ದೇನೆ ಎಂದರು.ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಬಿಜೆಪಿಯಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸಚಿವನಾಗಿ ಕೆಲಸ ಮಾಡಿದ ಅನುಭವವಿದೆ.
ಇಂದು ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರು. ತಂದೆ ಮತ್ತು ಮಗನ ಜೊತೆಗೆ ಕೆಲಸ ಮಾಡುವ ಸೌಭಾಗ್ಯ ಒದಗಿದೆ. ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ಇಡೀ ದೇಶವೇ ಸಜ್ಜಾಗಿದೆ. ಈ ಸಂದರ್ಭದಲ್ಲಿ ನಾನು ಬಿಜೆಪಿಗೆ ಬಂದಿದ್ದೇನೆ. ಯಾವುದೇ ಕಂಡೀಷನ್ ಇಲ್ಲದೇ ಬಿಜೆಪಿಗೆ ಬಂದಿದ್ದೇನೆ. ಪಕ್ಷ ಯಾವ ಜವಾಬ್ದಾರಿ ಕೊಟ್ಟರೂನಿಭಾಯಿಸುತ್ತೇನೆ ಎಂದು ಹೇಳಿದರು.
ಸಾಮಾನ್ಯ ಕಾರ್ಯಕರ್ತನಾಗಿ, ದುಡಿಯುತ್ತೇನೆ ಎಂದ ಗಾಲಿ ಜನಾರ್ದನ ರೆಡ್ಡಿ
ವೇದಿಕೆ ನೋಡುತ್ತಿದ್ದೆರ ನನ್ನ ಮನೆಗೆ ನಾನು ವಾಪಸ್ ಬಂದಿದ್ದೇನೆ ಅನ್ನಿಸುತ್ತಿದೆ. ಬಿಜೆಪಿಯ ತಾಯಿಯ ಮಡಲಿಗೆ ಸುರಕ್ಷಿತವಾಗಿ ಬಂದು ಸೇರಿದ್ದೇನೆ. ನಾನು 13 ವರ್ಷಗಳ ಬಳಿಕ ಬಂದಿದ್ದೇನೆ ಅನ್ನಿಸುತ್ತಿಲ್ಲ. ನಿನ್ನೆ ಹೋಗಿ ಇಂದು ಬಂದಂತೆ ಭಾಸವಾಗುತ್ತಿದೆ ಎಂದು ಜನಾರ್ದನ ರೆಡ್ಡಿ ಹೇಳಿದರು.