ಬೆಳಗಾವಿ, ಡಿ.18- ತಾಜ್ಯ ನೀರನ್ನು ಸಂಸ್ಕರಿಸದೆ ನದಿಗಳಿಗೆ ಹರಿಸುವ 11 ಸ್ಥಳೀಯ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿಂದು ಮೇಲುಕೋಟೆ ಕ್ಷೇತ್ರದ ದರ್ಶನ್ ಪುಟ್ಟಣ್ಣಯ್ಯ ಅವರು ಪ್ರಶ್ನೆ ಕೇಳಿ, ರಾಜ್ಯದ 12 ನದಿಗಳಿಗೆ ಸಂಸ್ಕರಿಸದ ತ್ಯಾಜ್ಯ ನೀರನ್ನು ಹರಿಸಲಾಗುತ್ತಿದೆ. ಪಾಂಡವಪುರದಲ್ಲಿ ಕಾವೇರಿ ನದಿಗೆ ಮಲಿನ ನೀರು ಸೇರುತ್ತಿದೆ, ಅದು ಬೆಂಗಳೂರಿಗೆ ಸರಬರಾಜಾಗುತ್ತಿದೆ. ಸಂಸ್ಕರಿಸಿದ ಬಳಿಕವೇ ನೀರನ್ನು ನದಿಗೆ ಹರಿಸಲು ಕ್ರಮ ಕೈಗೊಳ್ಳಬೇಕು. ಈ ಕೆಲಸಕ್ಕೆ ಸಾಮಾಜಿಕ ಹೊಣೆಗಾರಿಕೆಯನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಉತ್ತರ ನೀಡಿದ ಸಚಿವರು, ಅರ್ಕಾವತಿ, ಲಕ್ಷ್ಮಣತೀರ್ಥ, ತುಂಗಭದ್ರಾ, ಕಾವೇರಿ, ಕಬಿನಿ, ಶಿಂಷಾ, ಭೀಮಾ ಮತ್ತು ನೇತ್ರಾವತಿ ಸೇರಿ 12 ನದಿಗಳ ವ್ಯಾಪ್ತಿಯಲ್ಲಿ 30 ಸ್ಥಳೀಯ ಸಂಸ್ಥೆಗಳಿವೆ. ಎಲ್ಲಾ ಕಡೆ ಅಗತ್ಯ ತಪಾಸಣೆಗಳನ್ನು ನಡೆಸಲಾಗುತ್ತಿದೆ. ರಾಜ್ಯದ ಈ ನದಿಗಳ ಭಾಗದಲ್ಲಿ 814 ಮಿಲಿಯನ್ ಲೀಟರ್(ಎಂಎಲ್‌ಡಿ) ಘನತಾಜ್ಯ ನೀರು ಉತ್ಪಾದನೆಯಾಗುತ್ತಿದೆ. ಅದರಲ್ಲಿ 17 ಎಂ ಎಲ್ ಡಿ ನೀರು ಮಾತ್ರ ಸಂಸ್ಕರಣೆಯಾಗುತ್ತಿದೆ. 614 ಎಂಎಲ್‌ಡಿಯಷ್ಟು ನೀರು ಸಂಸ್ಕರಣೆಗೆ ಘಟಕಗಳಿವೆ. ಬಾಕಿ ಇರುವ 203 ಎಂಎಲ್‌ಡಿ ಸಂಸ್ಕರಣೆಗೆ ಘಟಕಗಳಿಲ್ಲ ಎಂದರು.
ನೀರು ಸಂಸ್ಕರಣೆಯ ಮೇಲೆ ಸುಪ್ರೀಂ ಕೋರ್ಟ್‌ನ ಹಸಿರುಪೀಠ ಮತ್ತು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿಗಾ ಇರಿಸಿದೆ. ತ್ಯಾಜ್ಯ ನೀರು ಸಂಸ್ಕರಿಸದ 11 ಸ್ಥಳೀಯ ಸಂಸ್ಥೆಗಳ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
ಬಿಡಬ್ಲ್ಯೂಎಸ್‌ಎಸ್‌ಬಿ, ಕೆಯುಡಬ್ಲ್ಯೂಎಸ್‌ಎಸ್‌ಬಿ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ 19 ತ್ಯಾಜ್ಯ ನೀರು ಸಂಸ್ಕರಣ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ 48 ಎಂಎಲ್‌ಡಿ ನೀರು ಸಂಸ್ಕರಿಸುವ ಸಾಮರ್ಥ್ಯವಿದೆ. ನೀರನ್ನು ಶುದ್ಧವಾಗಿಟ್ಟುಕೊಳ್ಳಲು ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದರು.
