ಲಖ್ನೋ,ಮಾ.26- ಉತ್ತರಪ್ರದೇಶದ ಬಂದಾ ಜೈಲಿನಲ್ಲಿರುವ ದರೋಡೆಕೋರ ಹಾಗೂ ರಾಜಕಾರಣಿ ಮುಖ್ತಾರ್ ಅನ್ಸಾರಿ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಆತನನ್ನು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಮೂರು ದಿನಗಳಿಂದ ಮೂತ್ರದ ಸೋಂಕಿನಿಂದ ಬಳಲುತ್ತಿದ್ದ ಅನ್ಸಾರಿ ಮುಖ್ತಾರ್ ಪ್ರಸ್ತುತ ವೈದ್ಯಕೀಯ ಕಾಲೇಜಿನ ತುರ್ತು ನಿಗಾಘಟಕದಲ್ಲಿ(ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ಮುಖ್ತಾರ್ ಅನ್ಸಾರಿಗೆ ಸ್ವಲ್ಪ ಹೊಟ್ಟೆ ನೋವು ಕಾಣಿಸಿಕೊಂಡಿತು ಮತ್ತು ಶೌಚಾಲಯಕ್ಕೆ ಹೋಗುವಾಗ ಬಿದ್ದಿದ್ದಾರೆ. ಇದಾದ ಬಳಿಕ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಸದ್ಯ ಯಾವುದೇ ಆತಂಕದ ಪರಿಸ್ಥಿತಿ ಇಲ್ಲ ಮತ್ತು ಮುಖ್ತಾರ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಜೈಲು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. ಮುಖ್ತಾರ್ ಕುಟುಂಬಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಅವರನ್ನು ಆಸ್ಪತ್ರೆಗೆ ತಲುಪುವಂತೆ ತಿಳಿಸಲಾಗಿದೆ ಎಂದು ಜೈಲು ಆಡಳಿತ ತಿಳಿಸಿದೆ.
ಇತ್ತೀಚೆಗಷ್ಟೇ ಮುಖ್ತಾರ್ ಅನ್ಸಾರಿ ಬಂದಾ ಜೈಲಿನಲ್ಲಿ ತನಗೆ ಜೀವ ಬೆದರಿಕೆಯ ಕುರಿತು ಹೇಳಿದ್ದು, ಸ್ಲೋ ಪಾಯ್ಸನ್ ನೀಡಿರುವುದಾಗಿ ಆರೋಪಿಸಿದ್ದರು. ಆದರೆ ಬಂದಾ ಜೈಲು ಆಡಳಿತವು ಮುಕ್ತಾರ್ ಅನ್ಸಾರಿ ಆರೋಪವನ್ನು ತಳ್ಳಿಹಾಕಿದೆ.
ಸೋದರನ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡುತ್ತಿಲ್ಲ:
ಮುಕ್ತರ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಬಂದಾದ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದಾರೆ ಎಂದು ನಮಗೆ ಮೊಹಮ್ಮದಾಬಾದ್ ಪೊಲೀಸ್ ಠಾಣೆಯಿಂದ ಸಂದೇಶ ಬಂದಿದೆ. ಅವರ ಸಹಾಯಕ್ಕೆ ಬರುವಂತೆ ಕುಟುಂಬ ಸದಸ್ಯರನ್ನು ಕೇಳಲಾಗಿದೆ ಎಂದು ಅಫ್ಜಲ್ ಅನ್ಸಾರಿ ತಿಳಿಸಿದ್ದಾರೆ.
ಆದರೆ ಜಿಲ್ಲಾ, ಜೈಲು ಮತ್ತು ಆಸ್ಪತ್ರೆ ಅಧಿಕಾರಿಗಳು ಮುಖ್ತಾರ್ ಆರೋಗ್ಯ ಸ್ಥಿತಿಯ ಕುಟುಂಬದ ವಿವರಗಳನ್ನು ನೀಡುತ್ತಿಲ್ಲ. ಇದಷ್ಟೇ ಅಲ್ಲ, ಮುಖ್ತಾರ್ ಅವರ ವಕೀಲರಿಗೂ ಅವರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಹೇಳಿದ್ದಾರೆ. ಬಂದಾಗೆ ತೆರಳುವ ಮೊದಲು ಮುಖ್ಯಮಂತ್ರಿ ಕಚೇರಿಗೆ ಕರೆ ಮಾಡಿದ್ದೆ ಆದರೆ ಗೋರಖ್‍ಪುರದಲ್ಲಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಬಂದಾ ಮೆಡಿಕಲ್ ಕಾಲೇಜಿನಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಮುಖ್ತಾರ್ ಅವರನ್ನು ಲಕ್ನೋದ ಮೇದಾಂತ ಆಸ್ಪತ್ರೆಗೆ ಅಥವಾ ಇನ್ನಾವುದೇ ದೊಡ್ಡ ಆಸ್ಪತ್ರೆಗೆ ದಾಖಲಿಸುವಂತೆ ಮನವಿ ಮಾಡಲು ಮುಖ್ಯಮಂತ್ರಿಗಳ ಕಚೇರಿಗೆ ಕರೆ ಮಾಡಿದ್ದಾಗಿ ಅವರು ತಿಳಿಸಿದ್ದಾರೆ.