Homeರಾಜಕೀಯನಮೂನೆ-7 ದುರುಪಯೋಗ ಸಾಬೀತಾದರೆ ಒಂದು ವರ್ಷ ಜೈಲು : ಪ್ರಿಯಾಂಕ್‌ ಖರ್ಗೆ

ನಮೂನೆ-7 ದುರುಪಯೋಗ ಸಾಬೀತಾದರೆ ಒಂದು ವರ್ಷ ಜೈಲು : ಪ್ರಿಯಾಂಕ್‌ ಖರ್ಗೆ

ಬೆಂಗಳೂರು, ಅ.5- ಚುನಾವಣಾ ಆಯೋಗದ ಅರ್ಜಿ ನಮೂನೆ-7ಅನ್ನು ದುರುಪಯೋಗ ಪಡಿಸಿಕೊಂಡು ತಪ್ಪು ಮಾಹಿತಿ ನೀಡಿರುವುದು ಸಾಬೀತಾದರೆ ಒಂದು ವರ್ಷ ಜೈಲು ಮತ್ತು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌‍ಐಆರ್‌ ಪ್ರಕ್ರಿಯೆಯಲ್ಲಿ ಅರ್ಜಿ ನಮೂನೆ-7 ಅನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಇದೊಂದು ಸಂಘಟಿತ ಅಪರಾಧ ಕೂಡ ಎಂದು ಹೇಳಿದರು.

ಬಿಹಾರ, ಪಶ್ಚಿಮ ಬಂಗಾಳ, ಹೈದರಾಬಾದ್‌, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಒಂದೇ ಮಾದರಿಯ ಅರ್ಜಿ ನಮೂನೆ-7 ಸಲ್ಲಿಕೆಯಾಗುತ್ತಿರುವುದನ್ನು ನೋಡಿದರೆ, ಇದರ ಹಿಂದೆ ರಾಷ್ಟ್ರ ಮಟ್ಟದಲ್ಲಿ ಕೇಂದ್ರಿಕೃತ ಸಂಚು ನಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದರು. ಬಿಜೆಪಿ ಕಾರ್ಯಕರ್ತರಿಗೆ ಸಂಪೂರ್ಣ ಮಾಹಿತಿ ಇರುವ ಪೂರ್ವ ಮುದ್ರಿತ ಅರ್ಜಿ ನಮೂನೆ-7 ಹೇಗೆ ಸಿಗುತ್ತಿವೆ? ಅದು ಕೂಡ ಯಂತ್ರ ಓದುವ ಮಾದರಿಯಲ್ಲಿ ಕರಾರುವಕ್ಕಾದ ಮಾಹಿತಿಗಳನ್ನೊಳಗೊಂಡ ಅರ್ಜಿ ನಮೂನೆಗಳನ್ನು ಮುದ್ರಿಸಿ ನೀಡುತ್ತಿರುವವರು ಯಾರು? ಎಂದು ಪ್ರಶ್ನಿಸಿದರು.

ಬಳ್ಳಾರಿ, ಬೆಳಗಾವಿ, ಮೂಡಿಗೆರೆ ಸೇರಿದಂತೆ ಹಲವು ಕಡೆಗಳಲ್ಲಿ ಬದುಕಿರುವವರನ್ನು ಸತ್ತಿದ್ದಾರೆ ಎಂದು ಅರ್ಜಿ ನಮೂನೆ-7ರ ಅಡಿ ಮನವಿ ಸಲ್ಲಿಸಿ ಮತದಾರರ ಪಟ್ಟಿಯಿಂದ ಹೆಸರು ತೆಗೆಸಿ ಹಾಕುವ ಸಂಚು ನಡೆಸಲಾಗಿದೆ. ನಾನು ಬದುಕಿದ್ದೇನೆ ಎಂದು ಅರ್ಜಿದಾರರು ಖುದ್ದಾಗಿ ಬಂದು ಮಾಹಿತಿ ನೀಡುತ್ತಿದ್ದಾರೆ. ಹೀಗಿರುವಾಗ ಅಂತಹ ದೂರುಗಳನ್ನು ದಾಖಲಿಸಬಾರದೇ? ಎಂದು ಪ್ರಶ್ನಿಸಿದರು.

ಬದುಕಿರುವವರನ್ನು ಸತ್ತಿದ್ದಾರೆ ಎಂದು ತಪ್ಪು ಮಾಹಿತಿಯ ಅರ್ಜಿ ನಮೂನೆ-7ಅನ್ನು ಸಲ್ಲಿಸಿರುವವರ ವಿರುದ್ಧ ಕ್ರಿಮಿನಲ್‌ ಕೇಸ್‌‍ ದಾಖಲಿಸದೇ ಕರ್ನಾಟಕ ರಾಜ್ಯೋತ್ಸವ ಅಥವಾ ಭಾರತ ರತ್ನ ಪ್ರಶಸ್ತಿ ನೀಡಲು ಸಾಧ್ಯವೇ ಎಂದು ಕಿಡಿಕಾರಿದರು. ತಪ್ಪು ಮಾಹಿತಿ ನೀಡಿರುವುದು ಸಾಬೀತಾದರೆ, ಒಂದು ವರ್ಷ ಜೈಲು ಮತ್ತು ದಂಡ ಮತ್ತು ಶಿಕ್ಷೆ ಖಚಿತ. ಅದಕ್ಕಾಗಿಯೇ ಬಹಳಷ್ಟು ಕಡೆ ಬಿಜೆಪಿ ಕಾರ್ಯಕರ್ತರು ಕ್ಷಮೆಯಾಚಿಸಿ ತಾವು ನೀಡಿದ್ದ ಅರ್ಜಿ ನಮೂನೆಗಳನ್ನು ಹಿಂಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಸದ್ಯಕ್ಕೆ ಖಾಸಗಿ ವ್ಯಕ್ತಿಗಳ ದೂರು ಆಧರಿಸಿ ಪ್ರಕರಣವನ್ನು ದಾಖಲಿಸಲಾಗುತ್ತಿದೆ. ಇದೊಂದು ಸಂಘಟಿತ ಅಪರಾಧವಾಗಿದ್ದು, ಜಿಲ್ಲಾಧಿಕಾರಿಗಳು ಎಲ್ಲೆಡೆ ಪರಿಶೀಲನೆ ನಡೆಸುತ್ತಿದ್ದಾರೆ. ಸಿಐಡಿ ಸೇರಿದಂತೆ ಇತರೆ ಉನ್ನತ ಮಟ್ಟದ ತನಿಖೆಯ ಬಗ್ಗೆ ಚುನಾವಣಾ ಆಯೋಗದ ನಿರ್ಧಾರದ ಬಳಿಕ ತೀರ್ಮಾನಿಸಲಾಗುತ್ತದೆ. ಸದ್ಯಕ್ಕೆ ತಾವು ಬದುಕಿದ್ದೇವೆ ಎಂದು ಖಾಸಗಿ ವ್ಯಕ್ತಿಗಳು ಅರ್ಜಿ ನಮೂನೆ-7 ಅನ್ನು ಸಲ್ಲಿಸಿರುವವರ ವಿರುದ್ಧ ದಾಖಲಿಸಿರುವ ದೂರನ್ನು ಆಧರಿಸಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಚುನಾವಣಾ ಆಯೋಗದ ಕಾರ್ಯ ವೈಖರಿಯ ಬಗ್ಗೆ ಸುಪ್ರೀಂಕೋರ್ಟ್‌ ಆಕ್ಷೇಪ ವ್ಯಕ್ತಪಡಿಸಿದೆ. ಚುನಾವಣಾ ಅಯೋಗಕ್ಕೆ ಪ್ರಶ್ನೆ ಕೇಳಿದರೆ ಬಿಜೆಪಿಯವರು ಉತ್ತರ ನೀಡುತ್ತಿದ್ದಾರೆ. ಇದು ಹಲವಾರು ಅನುಮಾನಗಳನ್ನು ಹುಟ್ಟುಹಾಕುತ್ತಿದೆ ಎಂದು ಹೇಳಿದರು.

RELATED ARTICLES
spot_img

Latest News