ಬೆಂಗಳೂರು,ಮಾ.28- ಓರ್ವ ಕೇಂದ್ರದ ಹಾಲಿ ಸಚಿವ ಸೇರಿದಂತೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 12 ಮಂದಿ ಹಾಲಿ ಸಂಸದರಿಗೆ ಗೇಟ್‍ಪಾಸ್ ನೀಡಿದೆ.ಮೂವರು ಸಂಸದರ ರಾಜಕೀಯ ನಿವೃತ್ತಿ ಸೇರಿದಂತೆ 12 ಮಂದಿ ಸಂಸದರಿಗೆ ಟಿಕೆಟ್ ನೀಡಲು ನಿರಾಕರಿಸಿದ್ದು, ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.
28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 25 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. 2019ರಲ್ಲಿ ಗೆದ್ದಿದ್ದ 12 ಮಂದಿ ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ಇಬ್ಬರು ಹಾಗೂ 10 ಯುವ ಮುಖಗಳಿಗೆ ಮನ್ನಣೆ ನೀಡಲಾಗಿದೆ.
ಬೆಳಗಾವಿ(ಮಂಗಳ ಸುರೇಶ್ ಅಂಗಡಿ), ಹಾವೇರಿ(ಶಿವಕುಮಾರ್ ಉದಾಸಿ), ಬಳ್ಳಾರಿ(ದೇವೇಂದ್ರಪ್ಪ), ದಾವಣಗೆರೆ(ಜಿ.ಎಂ.ಸಿದ್ದೇಶ್ವರ್), ಕೊಪ್ಪಳ(ಕರಡಿ ಸಂಗಣ್ಣ), ಚಿತ್ರದುರ್ಗ(ಎ.ನಾರಾಯಣಸ್ವಾಮಿ), ದಕ್ಷಿಣಕನ್ನಡ(ನಳೀನ್‍ಕುಮಾರ್ ಕಟೀಲ್), ಉತ್ತರಕನ್ನಡ (ಅನಂತಕುಮಾರ್ ಹೆಗಡೆ), ಬೆಂಗಳೂರು ಉತ್ತರ (ಸದಾನಂದಗೌಡ), ಮೈಸೂರು-ಕೊಡುಗು (ಪ್ರತಾಪ್ ಸಿಂಹ), ಕೋಲಾರ(ಮುನಿಸ್ವಾಮಿ).
ಮೈತ್ರಿಯಾಗಿರುವ ಕಾರಣ ಕಳೆದ ಬಾರಿ ಗೆದ್ದಿದ್ದ ಕೋಲಾರ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟು ಕೊಟ್ಟಿರುವ ಕಾರಣ ಹಾಲಿ ಸಂಸದ ಮುನಿಸ್ವಾಮಿಗೂ ಟಿಕೆಟ್ ಕೈತಪ್ಪಿದೆ. ವಯಸ್ಸಿನ ಹಿನ್ನಲೆ, ಆರೋಗ್ಯದ ಕಡೆ ಗಮನ, ವೈಯಕ್ತಿಕ ಕಾರಣಗಳಿಂದಾಗಿ ಜಿ.ಎಚ್.ಬಸವರಾಜ್(ತುಮಕೂರು), ಬಿ.ಎನ್.ಬಚ್ಚೇಗೌಡ(ಚಿಕ್ಕಬಳ್ಳಾಪುರ) ಹಾಗೂ ವಿ.ಶ್ರೀನಿವಾಸ್ ಪ್ರಸಾದ್(ಚಾಮರಾಜನಗರ) ಇವರುಗಳು ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಏಳು ಮಂದಿಗೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮಣೆ ಹಾಕಿದೆ. ಗೋವಿಂದ ಕಾರಜೋಳ(ಚಿತ್ರದುರ್ಗ), ಬಿ.ಶ್ರೀರಾಮುಲು (ಬಳ್ಳಾರಿ), ವಿಶ್ವೇಶ್ವರ ಹೆಗಡೆ ಕಾಗೇರಿ(ಉತ್ತರಕನ್ನಡ) ಬಸವರಾಜ ಬೊಮ್ಮಾಯಿ( ಹಾವೇರಿ), ಡಾ.ಕೆ.ಸುಧಾಕರ್(ಚಿಕ್ಕಬಳ್ಳಾಪುರ), ವಿ.ಸೋಮಣ್ಣ(ತುಮಕೂರು), ಜಗದೀಶ್ ಶೆಟ್ಟರ್(ಬೆಳಗಾವಿ) ಸ್ಪರ್ಧೆ ಮಾಡಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಇಬ್ಬರು ಮಹಿಳೆಯರಿಗೆ ಟಿಕೆಟ್ ನೀಡಿರುವುದು ವಿಶೇಷವಾಗಿದೆ. ಬೆಂಗಳೂರು ಉತ್ತರ -ಶೋಭಾ ಕರಂದ್ಲಾಜೆ, ದಾವಣಗೆರೆ- ಗಾಯತ್ರಿ ಸಿದ್ದೇಶ್ವರ್ ಕಣಕ್ಕಿಳಿದಿದ್ದಾರೆ. ಉಡುಪಿ-ಚಿಕ್ಕಮಂಗಳೂರು ಪ್ರತಿನಿಧಿಸುತ್ತಿದ್ದ ಶೋಭಾ ಕರಂದ್ಲಾಜೆಗೆ ತೀವ್ರ ವಿರೋಧಿ ಅಲೆ ಇರುವುದರಿಂದ ಬೆಂಗಳೂರು ಉತ್ತರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಇನ್ನು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹಲವು ಹೊಸ ಮುಖಗಳನ್ನು ಕಣಕ್ಕಿಳಿಸಿರುವುದು ವಿಶೇಷ ಎನಿಸಿದೆ. ಮೈಸೂರು-ಕೊಡುಗು ಲೋಕಸಭಾ ಕ್ಷೇತ್ರದಿಂದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್, ಚಾಮರಾಜನಗರದಿಂದ ಬಾಲರಾಜ್ ಸ್ಪರ್ಧೆ ಮಾಡಿದ್ದಾರೆ. ದಕ್ಷಿಣ ಕನ್ನಡದಿಂದ ನಿವೃತ್ತ ಸೇನಾಧಿಕಾರಿ ಬ್ರಿಜೇಶ್ ಚೌಟ, ಕೊಪ್ಪಳದಿಂದ ಬಸವರಾಜ್ ಕಾವಟಗಿ ಸ್ರ್ಪಧಿಸಿದ್ದಾರೆ.
ಈವರೆಗೂ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನಪರಿಷತ್ ಪ್ರವೇಶಿಸಿದ್ದ ಕೋಟಾ ಶ್ರೀನಿವಾಸ ಪೂಜಾರಿ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಮೊದಲ ಬಾರಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ.
ಟಿಕೆಟ್ ಕೈತಪ್ಪಿದವರು
1- ಅನಂತ್ ಕುಮಾರ್ ಹೆಗಡೆ
2- ಪ್ರತಾಪ್ ಸಿಂಹ
3- ನಳೀನ್ ಕುಮಾರ್ ಕಟೀಲ್
4- ಮಂಗಳಾ ಅಂಗಡಿ
5- ಬಸವರಾಜ್ ( ತುಮಕೂರು) ನಿವೃತ್ತಿ
6 – ಶ್ರೀನಿವಾಸ್ ಪ್ರಸಾದ್ ( ನಿವೃತ್ತಿ
7- ಶಿವಕುಮಾರ್ ಉದಾಸಿ ( ನಿವೃತ್ತಿ)
8- ನಾರಾಯಣ್ ಸ್ವಾಮಿ ( ಆಸಕ್ತಿ ಇರಲಿಲ್ಲ)
9- ಬಚ್ಚೆಗೌಡ ( ನಿವೃತ್ತಿ)
10- ಕರಡಿ ಸಂಗಣ್ಣ
11- ಸದಾನಂದ ಗೌಡ
12 – ದೇವೆಂದ್ರಪ್ಪ
ಸೋತವರಿಗೆ ಮಣೆ
1.ವಿಶ್ವೇಶ್ವರ ಹೆಗಡೆ ಕಾಗೇರಿ – ಉತ್ತರ ಕನ್ನಡ
2.ಗೋವಿಂದ ಕಾರಜೋಳ – ಚಿತ್ರದುರ್ಗ
3.ಡಾ. ಕೆ ಸುಧಾಕರ್ – ಚಿಕ್ಕಬಳ್ಳಾಪುರ
4.ವಿ ಸೋಮಣ್ಣ – ತುಮಕೂರು
5.ಜಗದೀಶ್ ಶೆಟ್ಟರ್ – ಬೆಳಗಾವಿ.
8.ಶ್ರೀರಾಮಲು – ಬಳ್ಳಾರಿ
ಇಬ್ಬರು ಮಾಜಿ ಸಿಎಂಗಳು
ಜಗದೀಶ್ ಶೆಟ್ಟರ್-ಬೆಳಗಾವಿ
ಬಸವರಾಜ ಬೊಮ್ಮಾಯಿ- ಹಾವೇರಿ
ನಿವೃತ್ತಿಯಾದವರು
ವಿ.ಶ್ರೀನಿವಾಸ್ ಪ್ರಸಾದ್
ಬಿ.ಎನ್.ಬಚ್ಚೇಗೌಡ
ಜಿ.ಎಚ್.ಬಸವರಾಜ್
